A thoughtful man restrains his words beside a small lamp as another gathers temporary wealth

ಕೀರ್ತನೆಗಳು 39

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 39 ಮೌನ ಯಾವಾಗ ಜ್ಞಾನ ಮತ್ತು ದುಃಖ ಯಾವಾಗ ಮಾತನಾಡಬೇಕು ಎಂಬುದರೊಂದಿಗೆ ಹೋರಾಡುತ್ತದೆ. ಅಲ್ಪ ಜೀವನವು ಹಾದುಹೋಗುವ ಉಸಿರನ್ನೂ ನೆರಳನ್ನೂ ಹೋಲುತ್ತದೆ, ಕೂಡಿಟ್ಟ ಸಂಪತ್ತನ್ನು ಅನಿಶ್ಚಿತಗೊಳಿಸಿ ಕೀರ್ತನೆಗಾರನ ಆಳವಾದ ನಿರೀಕ್ಷೆಯನ್ನು ದೇವರ ಕಡೆಗೆ ತಿರುಗಿಸುತ್ತದೆ.
ಮರ್ತ್ಯತೆಮಾತುನಿರೀಕ್ಷೆದೀನತೆ
1“ನನ್ನ ನಾಲಿಗೆಯಿಂದ ಪಾಪಮಾಡದಂತೆ ಜಾಗರೂಕನಾಗಿರುವೆನು, ನನ್ನ ಮಾರ್ಗಗಳನ್ನು ಕಾಪಾಡಿಕೊಳ್ಳುವೆನು. ದುಷ್ಟರು ನನ್ನ ಮುಂದೆ ಇರುವಾಗ ನನ್ನ ಬಾಯಿಗೆ ಕಡಿವಾಣ ಹಾಕಿಕೊಳ್ಳುವೆನು,” ಎಂದು ತೀರ್ಮಾನಿಸಿಕೊಂಡೆನು.
2ಆದ್ದರಿಂದ ನಾನು ಮೌನವಾಗಿದ್ದೆನು. ಒಳ್ಳೆಯದನ್ನು ಸಹ ನಾನು ಆಡದೆ ಸುಮ್ಮನಿದ್ದೆನು. ಆದರೆ ನನ್ನ ವ್ಯಥೆಯು ಅಧಿಕವಾಯಿತು.
3ನನ್ನ ಹೃದಯವು ಸಂತಾಪದಿಂದ ಕಾವೇರಿತು. ನಾನು ಧ್ಯಾನವು ಬೆಂಕಿಯಂತೆ ಉರಿಯಿತು. ಕೊನೆಗೆ ನಾನು ಬಾಯಿಬಿಟ್ಟು ಮಾತನಾಡಿದೆನು:
4“ಯೆಹೋವ ದೇವರೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆ ನನ್ನ ಜೀವನದ ಅಂತ್ಯವ ನನಗೆ ತೋರಿಸಿಕೊಡಿರಿ, ನನ್ನ ದಿನಗಳು ಕೊಂಚವೆಂಬುದನ್ನೂ ನನಗೆ ತಿಳಿಸಿರಿ.
5ಇಗೋ, ನನ್ನ ದಿವಸಗಳನ್ನು ಅಂಗೈ ಅಗಲದಷ್ಟು ಮಾಡಿದ್ದೀರಿ. ನನ್ನ ಆಯುಷ್ಯವು ನಿಮ್ಮ ಮುಂದೆ ಏನೂ ಇಲ್ಲದ ಹಾಗಿದೆ; ಪ್ರತಿ ಮನುಷ್ಯನ ಜೀವನ ಬರೀ ಉಸಿರೇ.
6“ನಿಶ್ಚಯವಾಗಿ ಮನುಷ್ಯನು ಮಾಯಾರೂಪದಿಂದ ನಡೆದಾಡುತ್ತಾನೆ; ಅವನು ಸಡಗರದಿಂದ ಐಶ್ವರ್ಯವನ್ನು ರಾಶಿಯಾಗಿ ಕೂಡಿಸಿಕೊಳ್ಳುತ್ತಾನೆ; ಆದರೆ ಅದನ್ನು ಅನುಭವಿಸುವವರು ಯಾರೋ ಅರಿಯನು.
7“ಹೀಗಿರಲಾಗಿ ಯೆಹೋವ ದೇವರೇ, ನಾನು ನಿರೀಕ್ಷಿಸುವುದೇನು? ನನ್ನ ನಿರೀಕ್ಷೆ ನಿಮ್ಮಲ್ಲಿ ಇದೆ.
8ನನ್ನ ಎಲ್ಲಾ ಉಲ್ಲಂಘನೆಗಳಿಂದ ನನ್ನನ್ನು ಬಿಡಿಸಿರಿ; ಬುದ್ಧಿಹೀನನ ನಿಂದೆಗೆ ನನ್ನನ್ನು ಪರಿಹಾಸ್ಯ ಮಾಡಬೇಡಿರಿ.
9ನಾನು ಮೌನವಾದೆನು, ಬಾಯಿ ತೆರೆಯಲಿಲ್ಲ; ಇದನ್ನು ಮಾಡಿದವರು ನೀವೇ.
10ನಿಮ್ಮ ಪೆಟ್ಟನ್ನು ನನ್ನಿಂದ ತೊಲಗಿಸಿರಿ; ನಿಮ್ಮ ಕೈಯ ಹೊಡೆತದಿಂದ ನಾನು ಕುಗ್ಗಿ ಹೋಗಿದ್ದೇನೆ.
11ಪಾಪದ ನಿಮಿತ್ತ ನೀವು ಮನುಷ್ಯನನ್ನು ಗದರಿಸಿ ಶಿಕ್ಷಿಸುವಾಗ ಅವನ ಐಶ್ವರ್ಯವು ನುಸಿ ಹಿಡಿದಂತೆ ಹಾಳಾಗಿ ಹೋಗುತ್ತದೆ. ನಿಶ್ಚಯವಾಗಿ ಪ್ರತಿ ಮನುಷ್ಯನು ಬರೀ ಉಸಿರೇ.
12“ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ಮೊರೆಗೆ ಕಿವಿಗೊಡಿರಿ; ನನ್ನ ಕಣ್ಣೀರನ್ನು ನೋಡಿರಿ ಮೌನವಾಗಿರಬೇಡಿರಿ; ಏಕೆಂದರೆ, ನಾನು ನನ್ನ ಪಿತೃಗಳೆಲ್ಲರ ಹಾಗೆ ನಿಮ್ಮ ಸಂಗಡ ಪರದೇಶಸ್ಥನಂತೆ ವಾಸಿಸುತ್ತೇನೆ; ನಾನೂ ಪ್ರವಾಸಿಯಾಗಿದ್ದೇನೆ.
13ನಾನು ಹೊರಟುಹೋಗಿ ಇಲ್ಲವಾಗುವ ಮೊದಲು ನಾನು ಪುನಃ ಸಂತೋಷಿಸುವಂತೆ ನಿಮ್ಮ ಕೋಪದ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿರಿ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.