A large assembly plays harps above sea and farmland while horses wait in the distance

ಕೀರ್ತನೆಗಳು 33

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 33 ನೀತಿವಂತರನ್ನು ಹೊಸ, ಕುಶಲ ಸ್ತುತಿಗೆ ಕರೆಯುತ್ತದೆ. ದೇವರ ನಂಬಿಗಸ್ತ ವಾಕ್ಯವು ಸೃಷ್ಟಿಯನ್ನು ಕ್ರಮಗೊಳಿಸುತ್ತದೆ, ಜನಾಂಗಗಳ ಸಂಚುಗಳನ್ನು ವಿಫಲಗೊಳಿಸುತ್ತದೆ, ನ್ಯಾಯವನ್ನು ಪ್ರೀತಿಸುತ್ತದೆ, ಮತ್ತು ಸೈನ್ಯ, ಕುದುರೆ ಅಥವಾ ಮಾನವ ಬಲವನ್ನು ಮೀರಿ ನಿರೀಕ್ಷೆಯಿಡುವವರನ್ನು ಕಾಯುತ್ತದೆ.
ಸ್ತುತಿಸೃಷ್ಟಿನ್ಯಾಯನಿರೀಕ್ಷೆ
1ನೀತಿವಂತರೇ, ಯೆಹೋವ ದೇವರಿಗಾಗಿ ಸಂತೋಷದಿಂದ ಹಾಡಿರಿ; ಯಥಾರ್ಥರು ಅವರನ್ನು ಕೊಂಡಾಡುವುದು ಯೋಗ್ಯವಾಗಿದೆ.
2ಯೆಹೋವ ದೇವರನ್ನು ಕಿನ್ನರಿಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಅವರನ್ನು ಕೀರ್ತಿಸಿರಿ.
3ದೇವರಿಗೆ ಹೊಸಹಾಡನ್ನು ಹಾಡಿರಿ. ದೊಡ್ಡ ಶಬ್ದದಿಂದ ಇಂಪಾಗಿ ಹಾಡಿರಿ.
4ಏಕೆಂದರೆ ಯೆಹೋವ ದೇವರ ವಾಕ್ಯವು ಯಥಾರ್ಥವೂ ಸತ್ಯವೂ ಆಗಿರುತ್ತವೆ. ಅವರ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನಂಬಿಗಸ್ತರಾಗಿರುತ್ತಾರೆ.
5ಅವರು ನೀತಿಯನ್ನೂ, ನ್ಯಾಯವನ್ನೂ ಪ್ರೀತಿಸುತ್ತಾರೆ; ಭೂಲೋಕವೆಲ್ಲಾ ಯೆಹೋವ ದೇವರ ಒಡಂಬಡಿಕೆಯ ಪ್ರೀತಿಯಿಂದ ತುಂಬಿದೆ.
6ಯೆಹೋವ ದೇವರ ವಾಕ್ಯದಿಂದ ಆಕಾಶವೂ, ಅವರ ಬಾಯಿಯ ಉಸಿರಿನಿಂದ ನಕ್ಷತ್ರ ಮಂಡಲವೂ ಉಂಟಾದವು.
7ಅವರು ಸಮುದ್ರದ ನೀರನ್ನು ಒಟ್ಟುಗೂಡಿಸುತ್ತಾರೆ; ಅವರು ಅಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾರೆ.
8ಭೂಲೋಕವೆಲ್ಲಾ ಯೆಹೋವ ದೇವರಿಗೆ ಭಯಪಡಲಿ; ಭೂಲೋಕ ನಿವಾಸಿಗಳೆಲ್ಲರೂ ಅವರಿಗೆ ಭಯಭಕ್ತಿಯಿಂದಿರಲಿ.
9ಏಕೆಂದರೆ ಅವರು ಹೇಳಿದ ಮಾತ್ರಕ್ಕೆ ಸಮಸ್ತವೂ ಸೃಷ್ಟಿಯಾಯಿತು; ಅವರು ಆಜ್ಞಾಪಿಸಲು ಭೂಲೋಕವು ಸ್ಥಿರವಾಯಿತು.
10ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು; ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.
11ಆದರೆ ಯೆಹೋವ ದೇವರ ಆಲೋಚನೆಗಳು ಎಂದೆಂದಿಗೂ ಅವರ ಹೃದಯದ ಉದ್ದೇಶಗಳು ತಲತಲಾಂತರಕ್ಕೂ ನಿಲ್ಲುತ್ತವೆ.
12ಯೆಹೋವ ದೇವರು ಯಾರ ದೇವರಾಗಿದ್ದಾರೋ, ಅಂಥ ಭಾಗ್ಯವಂತರು. ದೇವರು ತಮಗಾಗಿ ಆಯ್ದುಕೊಂಡ ಜನರೂ ಭಾಗ್ಯವಂತರು.
13ಪರಲೋಕದಿಂದ ಯೆಹೋವ ದೇವರು ದೃಷ್ಟಿಸಿ, ಮಾನವರೆಲ್ಲರನ್ನೂ ನೋಡುತ್ತಾರೆ.
14ತಮ್ಮ ನಿವಾಸ ಸ್ಥಳದಿಂದ ಭೂನಿವಾಸಿಗಳೆಲ್ಲರ ಮೇಲೆ ಕಣ್ಣಿಡುತ್ತಾರೆ.
15ಎಲ್ಲರ ಹೃದಯಗಳನ್ನು ರೂಪಿಸುವವರು ದೇವರೇ, ಜನರು ಮಾಡುವ ಕೆಲಸಗಳನ್ನೆಲ್ಲಾ ಗಮನಿಸುವವರೂ ಅವರೇ.
16ಅಧಿಕ ಸೈನ್ಯದಿಂದ ಅರಸನು ಜಯಹೊಂದುವುದಿಲ್ಲ; ಪರಾಕ್ರಮಶಾಲಿಯು ಅಧಿಕ ಶಕ್ತಿಯಿಂದ ಬಿಡುಗಡೆಯಾಗುವುದಿಲ್ಲ.
17ಬಿಡುಗಡೆಗೆ ಕುದುರೆಯ ಬಲ ವ್ಯರ್ಥವಾಗಿದೆ; ಅದಕ್ಕೆ ಮಹಾಶಕ್ತಿ ಇದ್ದರೂ ಅದು ರಕ್ಷಿಸಲಾರದು.
18ಯೆಹೋವ ದೇವರ ಕಣ್ಣು ತಮಗೆ ಭಯಪಡುವವರ ಮೇಲಿರುತ್ತದೆ, ಅವರ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರ ಮೇಲೆಯೂ ಇರುತ್ತೆ.
19ಇದರಿಂದ ದೇವರು ಅವರ ಪ್ರಾಣವನ್ನು ಮರಣದಿಂದ ಬಿಡಿಸಿ, ಬರಗಾಲದಲ್ಲಿ ಅವರ ಜೀವವನ್ನು ಕಾಪಾಡುತ್ತಾರೆ.
20ನಮ್ಮ ಪ್ರಾಣವು ಯೆಹೋವ ದೇವರಿಗಾಗಿ ಕಾದಿದೆ; ನಮ್ಮ ಸಹಾಯವೂ ನಮ್ಮ ಗುರಾಣಿಯೂ ಅವರೇ.
21ದೇವರಲ್ಲಿ ನಮ್ಮ ಹೃದಯವು ಸಂತೋಷಿಸುತ್ತದೆ; ನಾವು ಅವರ ಪರಿಶುದ್ಧ ಹೆಸರಿನಲ್ಲಿ ಭರವಸೆ ಇಟ್ಟಿದ್ದೇವೆ.
22ನಾವು ನಿಮ್ಮನ್ನು ನಿರೀಕ್ಷಿಸುವ ಪ್ರಕಾರ, ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನಮ್ಮ ಮೇಲೆ ಇರಲಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.