
ಕೀರ್ತನೆಗಳು 30
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 30 ಗಂಭೀರ ರೋಗ ಮತ್ತು ಅಪಾಯದಿಂದ ಪುನಃಸ್ಥಾಪನೆಗಾಗಿ ಕೃತಜ್ಞತೆ ಸಲ್ಲಿಸುತ್ತದೆ. ರಾತ್ರಿಯಿಡೀ ಅಳುವಿಕೆಯು ಬೆಳಗಿನ ಸಂತೋಷಕ್ಕೆ ದಾರಿ ಮಾಡುತ್ತದೆ, ಆತ್ಮವಿಶ್ವಾಸ ತಿದ್ದಲ್ಪಡುತ್ತದೆ, ಶೋಕವು ನೃತ್ಯವಾಗುತ್ತದೆ, ಮತ್ತು ನವೀಕೃತ ಜೀವನವು ಕೃತಜ್ಞತೆಯ ಸ್ತುತಿಯಲ್ಲಿ ಮೌನವನ್ನು ನಿರಾಕರಿಸುತ್ತದೆ.
ಸ್ವಸ್ಥತೆಸಂತೋಷಶೋಕಕೃತಜ್ಞತೆ
1ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವೆನು; ನೀವು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿದ್ದೀರಿ. ನನ್ನನ್ನು ಮೇಲಕ್ಕೆ ಎತ್ತಿದ್ದೀರಿ.
2ನನ್ನ ದೇವರಾದ ಯೆಹೋವ ದೇವರೇ, ಸಹಾಯಕ್ಕಾಗಿ ನಿಮಗೆ ಮೊರೆಯಿಡಲು, ನನ್ನನ್ನು ಸ್ವಸ್ಥಮಾಡಿದ್ದೀರಿ.
3ಯೆಹೋವ ದೇವರೇ, ನನ್ನ ಪ್ರಾಣವನ್ನು ಪಾತಾಳದೊಳಗಿಂದ ಎತ್ತಿದ್ದೀರಿ; ನಾನು ಸಮಾಧಿ ಸೇರದ ಹಾಗೆ ನನ್ನನ್ನು ಬದುಕಿಸಿದ್ದೀರಿ.
4ಯೆಹೋವ ದೇವರ ವಿಶ್ವಾಸಿಗಳೇ ಅವರನ್ನು ಕೊಂಡಾಡಿರಿ; ಅವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.
5ಅವರ ಕೋಪವು ಕ್ಷಣಮಾತ್ರವೇ; ಆದರೆ ಅವರ ದಯೆಯು ಜೀವಮಾನವೆಲ್ಲಾ ಇರುತ್ತದೆ; ರಾತ್ರಿಯಲ್ಲಿ ದುಃಖ ಬಂದಿದ್ದರೂ; ಬೆಳಿಗ್ಗೆ ಆನಂದವು ಬರುವುದು.
6ನಾನು ಸುರಕ್ಷಿತನಾಗಿದ್ದಾಗ, “ನಾನೆಂದೂ ಕದಲುವುದಿಲ್ಲ,” ಎಂದು ಹೇಳಿಕೊಂಡೆನು.
7ಯೆಹೋವ ದೇವರೇ, ನಿಮ್ಮ ದಯೆಯಿಂದ ನನ್ನ ರಾಜ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀರಿ ಆದರೆ ನೀವು ನಿಮ್ಮ ಮುಖವನ್ನು ಮರೆಮಾಡಲು ನಾನು ಕಳವಳಗೊಂಡೆನು.
8ಯೆಹೋವ ದೇವರೇ, ನಾನು ನಿಮಗೆ ಮೊರೆಯಿಟ್ಟೆನು; ಕರುಣೆಗಾಗಿ ಯೆಹೋವ ಕರ್ತ ಆಗಿರುವವರಿಗೆ ಬಿನ್ನವಿಸಿದೆನು.
9ನಾನು ಸಮಾಧಿಯಲ್ಲಿ ಇಳಿದು ಹೋಗಿ ನಾಶವಾದರೆ, ಅದರಿಂದ ನಿಮಗೆ ಆಗುವ ಲಾಭವೇನು? ಧೂಳು ನಿಮ್ಮನ್ನು ಸ್ತುತಿಸುವುದೋ? ಅದು ನಿಮ್ಮ ನಂಬಿಗಸ್ತಿಕೆಯನ್ನು ಪ್ರಕಟಿಸುವುದೋ?
10ಯೆಹೋವ ದೇವರೇ, ಲಾಲಿಸು; ನನ್ನನ್ನು ಕರುಣಿಸಿರಿ; ಯೆಹೋವ ದೇವರೇ, ನನಗೆ ಸಹಾಯಕರಾಗಿರಿ.
11ನೀವು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರುಗಿಸಿದ್ದೀರಿ; ನೀವು ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಹರ್ಷವಸ್ತ್ರವನ್ನು ನನಗೆ ಧರಿಸಿದ್ದೀರಿ.
12ಆದ್ದರಿಂದ ನನ್ನ ಹೃದಯವು ಮೌನವಿರದೆ ನಿಮ್ಮನ್ನು ಯುಗಯುಗಕ್ಕೂ ಕೊಂಡಾಡುತ್ತಿರುವುದು. ನನ್ನ ದೇವರಾದ ಯೆಹೋವ ದೇವರೇ, ನಾನು ನಿಮ್ಮನ್ನು ಸದಾಕಾಲವೂ ಸ್ತುತಿಸುವೆನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.