Rebellious rulers gather below a newly anointed king standing securely on Zion

ಕೀರ್ತನೆಗಳು 2

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 2 ದೈವಿಕ ಆಳ್ವಿಕೆಯನ್ನು ವಿರೋಧಿಸುವ ಜನಾಂಗಗಳನ್ನು ಚಿತ್ರಿಸುತ್ತದೆ, ಆದರೆ ದೇವರ ಅಭಿಷಿಕ್ತ ಅರಸನು ಚೀಯೋನಿನಲ್ಲಿ ಸುರಕ್ಷಿತವಾಗಿ ನಿಲ್ಲುತ್ತಾನೆ. ದೈವಿಕ ಅಧಿಕಾರದ ಮುಂದೆ ವ್ಯರ್ಥ ವಿರೋಧದ ಬದಲು ಜ್ಞಾನ, ದೀನ ಸೇವೆ ಮತ್ತು ಆಶ್ರಯದ ಕಡೆಗೆ ಲೌಕಿಕ ಅಧಿಕಾರವನ್ನು ಎಚ್ಚರಿಸಲಾಗುತ್ತದೆ.
ಅರಸುತನಚೀಯೋನ್ಜನಾಂಗಗಳುಆಶ್ರಯ
1ರಾಷ್ಟ್ರಗಳು ಒಳಸಂಚು ಮಾಡುವುದೂ ಜನಾಂಗಗಳು ವ್ಯರ್ಥವಾಗಿ ಕುತಂತ್ರ ಮಾಡುವುದೂ ಏಕೆ?
2ಯೆಹೋವ ದೇವರಿಗೂ ಅವರ ಅಭಿಷಿಕ್ತನಿಗೂ ವಿರೋಧವಾಗಿ, ಭೂಲೋಕದ ಅರಸರು ನಿಂತುಕೊಳ್ಳುತ್ತಾರೆ. ಅಧಿಪತಿಗಳೂ ಒಂದಾಗಿ ಕೂಡಿಕೊಳ್ಳುತ್ತಿರುವರು.
3“ಅವರು ಹಾಕಿದ ಬೇಡಿಗಳನ್ನು ಮುರಿದು ಬಂಧಗಳನ್ನು ಹರಿದು ಬೀಸಾಡೋಣ,” ಎನ್ನುತ್ತಾರೆ.
4ಪರಲೋಕದಲ್ಲಿ ಕೂತಿರುವ ದೇವರು ಅದಕ್ಕೆ ನಗುವರು, ಕರ್ತದೇವರು ಅವರನ್ನು ಕಂಡು ಅಪಹಾಸ್ಯ ಮಾಡುವರು.
5ಕರ್ತದೇವರು ತಮ್ಮ ಕೋಪದಿಂದ ಅವರನ್ನು ಗದರಿಸುತ್ತಾ, ತಮ್ಮ ಬೇಸರದಿಂದ ಅವರನ್ನು ಕಳವಳಪಡಿಸಿ ಹೀಗೆ ಹೇಳುವರು,
6“ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.”
7ನಾನು ಯೆಹೋವ ದೇವರ ತೀರ್ಪನ್ನು ಹೀಗೆ ಪ್ರಕಟಿಸುವೆನು: ಅವರು ನನಗೆ ಹೇಳಿದ್ದು, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ.
8ನನ್ನನ್ನು ಕೇಳು, ಆಗ ನಾನು ರಾಷ್ಟ್ರಗಳನ್ನು ನಿನ್ನ ವಾರಸಾಗಿಯೂ, ಭೂಮಿಯ ಕಟ್ಟಕಡೆಯವರೆಗೂ ಇರುವ ದೇಶಗಳನ್ನೂ ನಿಮ್ಮ ಸೊತ್ತಾಗಿಯೂ ಕೊಡುವೆನು.
9ಕಬ್ಬಿಣದ ಗದೆಯಿಂದ ನೀನು ಅವರನ್ನು ದಂಡಿಸಿ, ಮಣ್ಣಿನ ಮಡಕೆಯಂತೆ ಚೂರುಚೂರಾಗಿ ಅವರನ್ನು ಒಡೆದುಹಾಕುವೆ.”
10ಆದ್ದರಿಂದ, ರಾಜರುಗಳೇ, ಈಗ ಜ್ಞಾನವಂತರಾಗಿರಿ. ಭೂಲೋಕದ ಅಧಿಕಾರಿಗಳೇ, ಎಚ್ಚರಿಕೆಯಿಂದಿರಿ.
11ಭಯಭಕ್ತಿಯಿಂದ ಯೆಹೋವ ದೇವರ ಸೇವೆಮಾಡಿರಿ, ನಡುಗುತ್ತಾ ಅವರ ಆಳ್ವಿಕೆಯಲ್ಲಿ ಉಲ್ಲಾಸಪಡಿರಿ.
12ಯೆಹೋವ ದೇವರು ಬೇಸರಗೊಂಡು, ನೀವು ನಿಮ್ಮ ಮಾರ್ಗದಲ್ಲಿ ನಾಶವಾಗದಂತೆ ಅವರ ಮಗನನ್ನು ಮುದ್ದಿಸಿರಿ. ಏಕೆಂದರೆ ದೇವರ ರೋಷವು ಕ್ಷಣಮಾತ್ರದಲ್ಲಿ ಜ್ವಾಲಿಸುವುದು. ದೇವರ ಆಶ್ರಯ ಪಡೆಯುವವರೆಲ್ಲಾ ಧನ್ಯರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.