
ಕೀರ್ತನೆಗಳು 145
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 145 ತಲೆಮಾರುಗಳನ್ನೂ ಎಲ್ಲಾ ಜೀವಿಗಳನ್ನೂ ಶಾಶ್ವತ ರಾಜ್ಯದ ಸ್ತುತಿಯಲ್ಲಿ ಒಟ್ಟುಗೂಡಿಸುತ್ತದೆ. ಕರುಣೆ, ತಾಳ್ಮೆ, ನ್ಯಾಯ, ಪೂರೈಕೆ, ಸಮೀಪತೆ, ಈಡೇರಿಸಿದ ಬಯಕೆ, ಕಾಪಾಡುವಿಕೆ ಮತ್ತು ಬೀಳುತ್ತಿರುವ ಪ್ರತಿಯೊಬ್ಬರ ಆರೈಕೆಯ ಮೂಲಕ ಮಹತ್ವವು ಕಾಣಿಸಿಕೊಳ್ಳುತ್ತದೆ.
ರಾಜ್ಯಕರುಣೆಪೂರೈಕೆಸ್ತುತಿ
1ಅರಸರಾಗಿರುವ ನನ್ನ ದೇವರೇ, ನಿಮ್ಮನ್ನು ಘನಪಡಿಸುವೆನು; ನಿಮ್ಮ ಹೆಸರನ್ನು ಎಂದೆಂದಿಗೂ ಸ್ತುತಿಸುವೆನು.
2ಪ್ರತಿದಿನ ನಿಮ್ಮನ್ನು ಸ್ತುತಿಸುವೆನು; ಎಂದೆಂದಿಗೂ ಸ್ತುತಿಸುವೆನು.
3ಯೆಹೋವ ದೇವರು ಮಹೋನ್ನತರೂ, ಬಹುಸ್ತುತಿಪಾತ್ರರೂ ಆಗಿದ್ದಾರೆ. ಅವರ ಮಹತ್ವವು ಅಗಮ್ಯವಾದದ್ದು.
4ದೇವರೇ ಒಂದು ತಲಾಂತರವು ಇನ್ನೊಂದು ತಲಾಂತರಕ್ಕೆ ನಿಮ್ಮ ಕೆಲಸಗಳನ್ನು ಪ್ರಕಟಿಸುತ್ತದೆ; ಜನರು ನಿಮ್ಮ ಪರಾಕ್ರಮಗಳನ್ನು ತಿಳಿಸುತ್ತಾರೆ.
5ನಿಮ್ಮ ಘನತೆಯ ಪ್ರಭಾವದ ಮಹಿಮೆಗಳ ವಿಷಯವಾಗಿಯೂ ನಿಮ್ಮ ಅದ್ಭುತಕಾರ್ಯಗಳ ವಿಷಯವಾಗಿಯೂ ನಾನು ಧ್ಯಾನಿಸುತ್ತಿರುವೆನು,
6ನಿಮ್ಮ ಅತಿಶಯ ಶಕ್ತಿಯ ವಿಷಯವಾಗಿ ಅವರು ಹೇಳುವರು; ನಿಮ್ಮ ಮಹಾಕಾರ್ಯವನ್ನು ನಾನು ಸಾರುವೆನು.
7ನಿಮ್ಮ ಬಹು ಒಳ್ಳೆಯತನದ ಜ್ಞಾಪಕವನ್ನು ಅವರು ನುಡಿಯುವರು; ನಿಮ್ಮ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
8ಯೆಹೋವ ದೇವರು ಕೃಪಾಳುವೂ, ಅನುಕಂಪವೂ, ದೀರ್ಘಶಾಂತಿಯೂ, ಪ್ರೀತಿ ಪೂರ್ಣರೂ ಆಗಿದ್ದಾರೆ.
9ಯೆಹೋವ ದೇವರು ಸರ್ವರಿಗೂ ಒಳ್ಳೆಯವರು. ಅವರ ಅನುಕಂಪವು ತಮ್ಮ ಎಲ್ಲಾ ಸೃಷ್ಟಿಗಳ ಮೇಲೆ ಇದೆ.
10ಯೆಹೋವ ದೇವರೇ, ನಿಮ್ಮ ನಂಬಿಗಸ್ತರು ನಿಮ್ಮನ್ನು ಸ್ತುತಿಸುವರು.
11ನಿಮ್ಮ ರಾಜ್ಯದ ಮಹಿಮೆಯನ್ನು ಹೇಳುವರು; ನಿಮ್ಮ ಪರಾಕ್ರಮವನ್ನು ನುಡಿಯುವರು.
12ಮಾನವರಿಗೆ ನಿಮ್ಮ ಪರಾಕ್ರಮ ಕ್ರಿಯೆಗಳನ್ನೂ, ನಿಮ್ಮ ರಾಜ್ಯದ ಪ್ರಭೆಯ ಘನವನ್ನೂ ತಿಳಿಯಪಡಿಸುವರು.
13ನಿಮ್ಮ ರಾಜ್ಯವು ಶಾಶ್ವತವಾದ ರಾಜ್ಯವಾಗಿದೆ; ನಿಮ್ಮ ಅಧಿಪತ್ಯವು ಎಲ್ಲಾ ತಲತಲಾಂತರಗಳಲ್ಲಿ ಇರುವುದು. ಯೆಹೋವ ದೇವರು ತಮ್ಮ ಎಲ್ಲಾ ಪ್ರತಿಜ್ಞೆಗಳಲ್ಲಿ ನಂಬಿಗಸ್ತರಾಗಿರುತ್ತಾರೆ. ಎಲ್ಲಾ ಕಾರ್ಯಗಳಲ್ಲಿಯೂ ಅವರ ಅನುಗ್ರಹ ಉಳಿದಿದೆ.
14ಯೆಹೋವ ದೇವರು ಬೀಳುವವರೆಲ್ಲರನ್ನು ಉದ್ಧಾರ ಮಾಡುತ್ತಾರೆ. ತಗ್ಗಿಸಿಕೊಳ್ಳುವವರೆಲ್ಲರನ್ನು ಎತ್ತುತ್ತಾರೆ.
15ದೇವರೇ, ಎಲ್ಲರ ಕಣ್ಣುಗಳು ನಿಮಗಾಗಿ ಕಾಯುತ್ತಿರುತ್ತವೆ. ನೀವು ಅವರಿಗೆ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀರಿ.
16ನಿಮ್ಮ ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ಪೂರೈಸುತ್ತೀರಿ.
17ಯೆಹೋವ ದೇವರು ತಮ್ಮ ಎಲ್ಲಾ ಮಾರ್ಗಗಳಲ್ಲಿ ನೀತಿವಂತರೂ ತಮ್ಮ ಸೃಷ್ಟಿಗೆಲ್ಲಾ ಪ್ರೀತಿ ತೋರಿಸುವವರೂ ಆಗಿದ್ದಾರೆ.
18ಯೆಹೋವ ದೇವರನ್ನು ಕರೆಯುವವರು ಯಥಾರ್ಥವಾಗಿ ಕರೆಯುವುದಾದರೆ, ಅವರು ಅವರಿಗೆ ಸಮೀಪವಾಗಿದ್ದಾರೆ.
19ತಮಗೆ ಭಯಪಡುವವರ ಇಷ್ಟವನ್ನು ನೆರವೇರಿಸುತ್ತಾರೆ. ಅವರ ಮೊರೆಯನ್ನು ಕೇಳಿ, ಅವರನ್ನು ರಕ್ಷಿಸುತ್ತಾರೆ.
20ಯೆಹೋವ ದೇವರು, ತಮ್ಮನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾರೆ. ಆದರೆ ದುಷ್ಟರೆಲ್ಲರನ್ನು ದಂಡಿಸುತ್ತಾರೆ.
21ನನ್ನ ಬಾಯಿ ಯೆಹೋವ ದೇವರ ಸ್ತೋತ್ರವನ್ನು ನುಡಿಯಲಿ; ಸಮಸ್ತ ಜೀವಿಗಳು ಆತನ ಪರಿಶುದ್ಧವಾದ ಹೆಸರನ್ನು ಯುಗಯುಗಾಂತರಗಳಿಗೂ ಸ್ತುತಿಸಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.