A royal musician plays at sunrise beside worshipers and soldiers overlooking distant fortified lands

ಕೀರ್ತನೆಗಳು 108

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕೀರ್ತನೆ 108 ಎಚ್ಚರಗೊಂಡ ಸ್ತುತಿಯನ್ನು ಸಂಘರ್ಷದ ನಡುವಿನ ಭರವಸೆಯೊಂದಿಗೆ ಒಂದುಗೂಡಿಸುತ್ತದೆ. ಸ್ಥಿರ ಹೃದಯವು ಜನಾಂಗಗಳ ನಡುವೆ ಹಾಡುತ್ತದೆ, ಸುತ್ತಲಿನ ನಾಡುಗಳ ಮೇಲಿನ ವಾಗ್ದಾನಗಳನ್ನು ನೆನಪಿಸಿಕೊಳ್ಳುತ್ತದೆ, ಕೇವಲ ಮಾನವ ರಕ್ಷಣೆಯನ್ನು ತಿರಸ್ಕರಿಸುತ್ತದೆ, ಮತ್ತು ಸೇನಾ ಬಲವನ್ನು ಮೀರಿದ ಸಹಾಯದಲ್ಲಿ ಭರವಸೆಯಿಡುತ್ತದೆ.
ಸ್ತುತಿಭರವಸೆಜನಾಂಗಗಳುವಿಜಯ
1ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನಾನು ಮನಃಪೂರ್ವಕವಾಗಿ ಹಾಡುತ್ತಾ, ನಿಮ್ಮ ಕೀರ್ತನೆಯನ್ನು ಮಾಡುವೆನು.
2ವೀಣೆಯೇ, ಕಿನ್ನರಿಯೇ ಎಚ್ಚರವಾಗಿರಿ, ನಾನು ಉದಯವನ್ನು ಎಚ್ಚರಗೊಳಿಸುವೆನು.
3ಯೆಹೋವ ದೇವರೇ, ಜನಾಂಗಗಳಲ್ಲಿ ನಾನು ನಿಮ್ಮನ್ನು ಕೊಂಡಾಡುವೆನು. ಜನರ ಮಧ್ಯದಲ್ಲಿ ನಿಮ್ಮನ್ನು ಹಾಡಿ ಕೊಂಡಾಡುವೆನು.
4ಆಕಾಶಕ್ಕಿಂತ ನಿಮ್ಮ ಪ್ರೀತಿ ದೊಡ್ಡದು. ಮೇಘವನ್ನು ನಿಲುಕುವಷ್ಟು ನಿಮ್ಮ ಸತ್ಯವು ಉನ್ನತವಾಗಿವೆ.
5ಓ, ದೇವರೇ, ಆಕಾಶಗಳ ಮೇಲೆ ನಿಮ್ಮ ಘನವು ಮೆರೆಯಲಿ. ಭೂಮಿಯ ಮೇಲೆಲ್ಲಾ ನಿಮ್ಮ ಮಹಿಮೆಯು ಹರಡಲಿ.
6ನೀವು ಪ್ರೀತಿಸುವವರು ಬಿಡುಗಡೆಯಾಗುವಂತೆ ನಿಮ್ಮ ಬಲಗೈಯಿಂದ ರಕ್ಷಿಸಿ ನಮಗೆ ಸಹಾಯಮಾಡಿರಿ.
7ದೇವರು ತಮ್ಮ ಪರಿಶುದ್ಧ ಸ್ಥಳದಿಂದ ಹೀಗೆ ನುಡಿದಿದ್ದಾರೆ: “ನಾನು ಜಯದಿಂದ ಶೆಕೆಮ್ ಪ್ರದೇಶವನ್ನು ಹಂಚುವೆನು. ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
8ಗಿಲ್ಯಾದ್ ನನ್ನದು; ಮನಸ್ಸೆ ನನ್ನದು, ಎಫ್ರಾಯೀಮ್ ನನ್ನ ಶಿರಸ್ತ್ರಾಣ, ಯೆಹೂದವು ನನ್ನ ರಾಜದಂಡ.
9ಮೋವಾಬ್ ನನ್ನ ಸ್ನಾನ ಪಾತ್ರೆಯು, ಎದೋಮ್ ನನ್ನ ಕೆರಗಳ ಸ್ಥಳ. ಫಿಲಿಷ್ಟಿಯರ ಮೇಲೆ ಜಯೋತ್ಸಾಹ ಮಾಡುವೆನು.”
10ಕೋಟೆಯ ಪಟ್ಟಣಕ್ಕೆ ನನ್ನನ್ನು ಕರೆತರುವವರು ಯಾರು? ಎದೋಮಿಗೆ ನನ್ನನ್ನು ನಡೆಸುವವರು ಯಾರು?
11ದೇವರೇ, ಈಗ ನೀವು ನಮ್ಮ ಸೈನ್ಯಗಳ ಸಂಗಡ ಹೊರಡುವುದಿಲ್ಲವೋ ನಮ್ಮನ್ನು ಕೈಬಿಟ್ಟಿದ್ದೀರೋ?
12ವೈರಿಗಳ ವಿರೋಧ ನಮಗೆ ಸಹಾಯಮಾಡಿರಿ. ಮನುಷ್ಯರ ಸಹಾಯವು ವ್ಯರ್ಥ.
13ದೇವರಿಂದ ನಾವು ಜಯ ಹೊಂದುವೆವು. ದೇವರೇ ನಮ್ಮ ವೈರಿಗಳನ್ನು ತುಳಿದುಬಿಡುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.