A young seeker discovers buried silver while wise guides point toward a safe mountain path

ಜ್ಞಾನೋಕ್ತಿಗಳು 2

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕಲಿಯುವವನು ಅಡಗಿದ ನಿಧಿಯನ್ನು ಹುಡುಕುವಷ್ಟು ಶ್ರದ್ಧೆಯಿಂದ ಜ್ಞಾನವನ್ನು ಹುಡುಕಬೇಕು. ಕರ್ತನು ಯಥಾರ್ಥ ಮಾರ್ಗಗಳನ್ನು ಕಾಪಾಡುವ, ಭ್ರಷ್ಟ ಮಾತು ಮತ್ತು ವಿನಾಶಕಾರಿ ಪ್ರಲೋಭನೆಯಿಂದ ಬಿಡಿಸುವ ಮತ್ತು ನಂಬಿಗಸ್ತರನ್ನು ನಾಡಿನಲ್ಲಿ ಶಾಶ್ವತ ಜೀವನದ ಕಡೆಗೆ ನಡೆಸುವ ತಿಳುವಳಿಕೆಯನ್ನು ಅನುಗ್ರಹಿಸುತ್ತಾನೆ.
ಜ್ಞಾನದ ಹುಡುಕಾಟವಿವೇಚನೆರಕ್ಷಣೆಯಥಾರ್ಥ ಮಾರ್ಗಗಳು
1ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ, ನನ್ನ ಆಜ್ಞೆಗಳನ್ನು ನಿನ್ನಲ್ಲಿ ಕಾದಿರಿಸು.
2ನೀನು ಜ್ಞಾನಕ್ಕೆ ಕಿವಿಗೊಟ್ಟು, ತಿಳುವಳಿಕೆಗೆ ನಿನ್ನ ಹೃದಯವನ್ನು ತಿರುಗಿಸು,
3ಹೌದು, ನೀನು ಒಳನೋಟಕ್ಕಾಗಿ ಮೊರೆಯಿಟ್ಟು, ತಿಳುವಳಿಕೆಗಾಗಿ ನಿನ್ನ ಸ್ವರವೆತ್ತಿ,
4ಬೆಳ್ಳಿಯಂತೆ ನೀನು ಅದನ್ನು ಹಂಬಲಿಸಿದರೆ, ನಿಗೂಢ ನಿಕ್ಷೇಪದಂತೆ ನೀನು ಅದಕ್ಕಾಗಿ ಹುಡುಕಿದರೆ,
5ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ತಿಳಿದುಕೊಳ್ಳುವೆ; ದೇವರ ಅರಿವನ್ನು ಕಂಡುಕೊಳ್ಳುವೆ.
6ಏಕೆಂದರೆ ಯೆಹೋವ ದೇವರೇ ಜ್ಞಾನವನ್ನು ಕೊಡುತ್ತಾರೆ; ಅವರ ಬಾಯಿಂದಲೇ ಅರಿವೂ ತಿಳುವಳಿಕೆಯೂ ಹೊರಟುಬರುತ್ತವೆ.
7ನೀತಿವಂತರಿಗೋಸ್ಕರ ದೇವರು ಸುಜ್ಞಾನವನ್ನು ಕೂಡಿಸಿಡುವರು, ನಿರ್ದೋಷಿಯಾಗಿ ನಡೆದುಕೊಳ್ಳುವವರಿಗೆ ದೇವರು ಗುರಾಣಿಯಾಗಿದ್ದಾರೆ.
8ನ್ಯಾಯವಂತರ ದಾರಿಗಳನ್ನು ದೇವರು ಕಾಯುತ್ತಾರೆ; ತಮ್ಮ ನಂಬಿಗಸ್ತರ ಮಾರ್ಗವನ್ನು ಭದ್ರಪಡಿಸುತ್ತಾರೆ.
9ಆಗ ನೀನು ಸರಿಯಾದದ್ದನ್ನೂ ನ್ಯಾಯವನ್ನೂ ಯುಕ್ತವಾದದ್ದನ್ನು ಅರ್ಥಮಾಡಿಕೊಳ್ಳುವೆ, ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದುಕೊಳ್ಳುವೆ.
10ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿಸಿ, ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಹಿತಕರವಾಗಿರುವುದು.
11ನಿನ್ನ ವಿವೇಚನೆಯು ನಿನ್ನನ್ನು ಭದ್ರವಾಗಿ ಕಾಯುವುದು; ತಿಳುವಳಿಕೆಯು ನಿನ್ನನ್ನು ಕಾಪಾಡುವುದು.
12ಜ್ಞಾನವು ದುಷ್ಟರ ಮಾರ್ಗಗಳಿಂದಲೂ, ವಕ್ರರ ಮಾತುಗಳಿಂದಲೂ ಕಾಪಾಡುವುದು.
13ಅವರು ಕತ್ತಲೆಯ ಹಾದಿಗಳಲ್ಲಿ ನಡೆಯುವುದಕ್ಕೆ ನೇರವಾದ ದಾರಿಗಳನ್ನು ತೊರೆದುಬಿಡುತ್ತಾರೆ.
14ಅವರು ಕೆಟ್ಟದ್ದನ್ನು ಮಾಡುವುದಕ್ಕೆ ಸಂತೋಷಿಸುತ್ತಾರೆ. ಕೇಡಿನ ವಕ್ರತನದಲ್ಲಿ ಆನಂದಿಸುತ್ತಾರೆ.
15ಅವರ ಮಾರ್ಗಗಳು ವಕ್ರವಾಗಿವೆ; ತಮ್ಮ ನಡತೆಗಳಲ್ಲಿ ಅವರು ತಪ್ಪಿಹೋಗಿದ್ದಾರೆ.
16ಜಾರಿಣಿಯಿಂದಲೂ ದಾರಿತಪ್ಪಿದ ಪರಸ್ತ್ರೀಯ ವಶೀಕರಣದ ಮಾತುಗಳಿಂದಲೂ ಜ್ಞಾನವು ನಿನ್ನನ್ನು ರಕ್ಷಿಸುವುದು.
17ಅವಳು ತನ್ನ ಯೌವನ ಕಾಲದ ಪತಿಯನ್ನು ತ್ಯಜಿಸಿದ್ದಾಳೆ, ದೇವರ ಸನ್ನಿಧಿಯಲ್ಲಿ ಮಾಡಿಕೊಂಡ ಒಡಂಬಡಿಕೆಯನ್ನೂ ಕಡೆಗಣಿಸಿದ್ದಾಳೆ.
18ಏಕೆಂದರೆ ಅವಳ ಮನೆ ಮರಣ ಮಾರ್ಗ. ಅವಳ ದಾರಿ ಮೃತರ ಕಡೆಗೂ ನಡೆಸುತ್ತವೆ.
19ಅವಳ ಬಳಿಗೆ ಹೋಗುವ ಯಾವನೂ ಹಿಂದಿರುಗುವುದಿಲ್ಲ; ಜೀವಮಾರ್ಗಗಳನ್ನು ಅಂಥವರು ಹಿಡಿಯುವುದೇ ಇಲ್ಲ.
20ಆದ್ದರಿಂದ ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯುವೆ ನೀತಿವಂತರ ದಾರಿಯನ್ನು ನೀನು ಹಿಡಿಯುವೆ.
21ಏಕೆಂದರೆ ಪ್ರಾಮಾಣಿಕರು ದೇಶದಲ್ಲಿ ವಾಸಿಸುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿ ಇರುವರು.
22ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲಾಗುವರು; ದ್ರೋಹಿಗಳು ಬೇರುಸಹಿತವಾಗಿ ಕಿತ್ತುಹಾಕಲಾಗುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.