A diligent farmer cares for animals beside elders hearing calm and truthful witnesses

ಜ್ಞಾನೋಕ್ತಿಗಳು 12

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ತಿದ್ದುಪಡಿಯನ್ನು ಪ್ರೀತಿಸುವವರು ತಿಳುವಳಿಕೆಯನ್ನು ಪಡೆಯುತ್ತಾರೆ, ಆದರೆ ಮೊಂಡು ಮೋಸವು ಕುಸಿಯುತ್ತದೆ. ಶ್ರದ್ಧೆಯ ಕೆಲಸ, ಪ್ರಾಣಿಗಳ ಬಗ್ಗೆ ಮಾನವೀಯ ಆರೈಕೆ, ಸತ್ಯವಾದ ಮಾತು ಮತ್ತು ವಿವೇಕದ ಸಂಯಮವು ಜೀವನವನ್ನು ಸ್ಥಾಪಿಸುತ್ತವೆ, ಆದರೆ ದುಡುಕಿನ ಮಾತುಗಳೂ ಸೋಮಾರಿ ಕಲ್ಪನೆಗಳೂ ಹಾನಿ ತರುತ್ತವೆ.
ಕಲಿಯುವ ಮನಸ್ಸುಶ್ರದ್ಧೆಸತ್ಯವಾದ ಮಾತುಕರುಣೆ
1ಶಿಸ್ತನ್ನು ಪ್ರೀತಿಸುವವನು ಪರಿಜ್ಞಾನವನ್ನು ಪ್ರೀತಿಸುವವನಾಗಿದ್ದಾನೆ, ಆದರೆ ತಿದ್ದುವಿಕೆಯನ್ನು ಹಗೆಮಾಡುವವನು ದಡ್ಡನು.
2ಒಳ್ಳೆಯವನು ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ, ಆದರೆ ಕುಯುಕ್ತಿ ಮಾಡುವವನನ್ನು ಅವರು ದುಷ್ಟನೆಂದು ಖಂಡಿಸುತ್ತಾರೆ.
3ಒಬ್ಬ ಮನುಷ್ಯನು ದುಷ್ಟತನದಿಂದ ಸ್ಥಿರವಾಗುವುದಿಲ್ಲ. ಆದರೆ ನೀತಿವಂತರನ್ನು ಕಿತ್ತುಹಾಕಲಾಗುವುದಿಲ್ಲ.
4ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ಆದರೆ ನಾಚಿಕೆ ಪಡಿಸುವವಳು ಅವನ ಎಲುಬುಗಳಿಗೆ ಕ್ಷಯ ರೋಗದಂತೆ ಇರುವಳು.
5ನೀತಿವಂತರ ಯೋಜನೆಗಳು ನ್ಯಾಯವಾಗಿವೆ; ದುಷ್ಟರ ಸಲಹೆ ಮೋಸಭರಿತ.
6ದುಷ್ಟರ ಮಾತುಗಳು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಅವರನ್ನು ಬಿಡಿಸುವುದು.
7ದುಷ್ಟರು ನೆಲಕ್ಕುರುಳಿ ನಿರ್ಮೂಲರಾಗುವರು, ಆದರೆ ನೀತಿವಂತರ ಮನೆಯು ಸ್ಥಿರವಾಗಿ ನಿಲ್ಲುವುದು.
8ತನ್ನ ಜ್ಞಾನಕ್ಕನುಸಾರವಾಗಿ ಮನುಷ್ಯನು ಗೌರವ ಹೊಂದುವನು; ವಕ್ರಹೃದಯವುಳ್ಳವನು ಕಡೆಗಣಿಸಲಾಗುವನು.
9ಹೊಟ್ಟೆಗೆ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸಾಮಾನ್ಯ ಸೇವಕನೇ ಮೇಲು.
10ನೀತಿವಂತನು ತನ್ನ ಪ್ರಾಣಿಗಳಿಗೂ ಕಾಳಜಿ ತೋರುವನು; ಆದರೆ ದುಷ್ಟರ ಕರುಣೆಯ ಕಾರ್ಯಗಳು ಕ್ರೂರತನವೇ.
11ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು, ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನು ವಿವೇಕಶೂನ್ಯನು.
12ದುಷ್ಟರು ಕೆಟ್ಟವರ ಭದ್ರಕೋಟೆಯನ್ನು ಅಪೇಕ್ಷಿಸುತ್ತಾರೆ; ಆದರೆ ನೀತಿವಂತರ ಬೇರು ಫಲವನ್ನು ಕೊಡುತ್ತದೆ.
13ದುಷ್ಟನು ತನ್ನ ತಪ್ಪು ಮಾತುಗಳಿಂದ ಬಲೆಗೆ ಬೀಳುವನು, ಆದರೆ ನೀತಿವಂತರು ಇಕ್ಕಟ್ಟಿನೊಳಗಿಂದ ತಪ್ಪಿಸಿಕೊಳ್ಳುವರು.
14ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದರಿಂದ ತೃಪ್ತನಾಗುವನು, ಮನುಷ್ಯನ ಕೈಕೆಲಸಗಳು ಅವನಿಗೆ ಪ್ರತಿಫಲವನ್ನು ಕೊಡುವುವು.
15ಮೂರ್ಖನ ಮಾರ್ಗವು ತನ್ನ ಕಣ್ಣುಗಳಿಗೆ ಸರಿಯಾಗಿದೆ, ಆದರೆ ಜ್ಞಾನಿಯು ಸಲಹೆಗೆ ಕಿವಿಗೊಡುವನು.
16ಮೂರ್ಖನ ಕೋಪವು ತಟ್ಟನೆ ರಟ್ಟಾಗುವುದು, ಆದರೆ ಜಾಣನು ಅವಮಾನವನ್ನು ನಿರ್ಲಕ್ಷಿಸುತ್ತಾನೆ.
17ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ.
18ಅಜಾಗರೂಕತೆಯ ಮಾತುಗಳು ಖಡ್ಗಗಳಂತೆ ಚುಚ್ಚುತ್ತವೆ, ಆದರೆ ಜ್ಞಾನವಂತರ ನಾಲಿಗೆಯು ಸ್ವಸ್ಥತೆಯನ್ನು ತರುವುದು.
19ಸತ್ಯದ ತುಟಿಯು ಸದಾ ಸ್ಥಿರಗೊಳ್ಳುವುದು, ಸುಳ್ಳಾಡುವ ನಾಲಿಗೆಯು ಕ್ಷಣಿಕ.
20ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.
21ನೀತಿವಂತನಿಗೆ ಯಾವ ಕೇಡೂ ಸಂಭವಿಸದು, ಆದರೆ ದುಷ್ಟರು ಕೇಡಿನಿಂದ ತುಂಬಿಕೊಳ್ಳುವರು.
22ಸುಳ್ಳಾಡುವ ತುಟಿಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಆದರೆ ಸತ್ಯವಂತರಲ್ಲಿ ಅವರು ಆನಂದಿಸುತ್ತಾರೆ.
23ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುತ್ತಾನೆ; ಆದರೆ ಮೂರ್ಖನ ಹೃದಯವು ಮೂರ್ಖತನವನ್ನು ಹೇಳುತ್ತದೆ.
24ಚುರುಕು ಕೈಯುಳ್ಳವನು ಆಳುವನು; ಸೋಮಾರಿಗಳು ಗುಲಾಮರಾಗುವರು.
25ಆತಂಕವು ಹೃದಯವನ್ನು ಕುಗ್ಗಿಸುವುದು, ಆದರೆ ಕನಿಕರದ ಮಾತು ಹುರಿದುಂಬಿಸುವುದು.
26ನೀತಿವಂತರು ತಮ್ಮ ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸುತ್ತಾರೆ, ಆದರೆ ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆಯುತ್ತದೆ.
27ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವುದಿಲ್ಲ, ಆದರೆ ಶ್ರಮಪಡುವವರು ಅದನ್ನು ತೃಪ್ತಿಯಿಂದ ತಿನ್ನುತ್ತಾರೆ.
28ನೀತಿಯ ಮಾರ್ಗದಲ್ಲಿ ಜೀವವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.