
ಅರಣ್ಯಕಾಂಡ 10
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಅರಣ್ಯಕಾಂಡ 10 ಸಮುದಾಯವನ್ನು ಸೇರಿಸಲು, ಕುಲಗಳ ಚಲನೆಯನ್ನು ನಿರ್ದೇಶಿಸಲು, ಎಚ್ಚರಿಕೆ ನೀಡಲು ಮತ್ತು ಆರಾಧನೆಯನ್ನು ಗುರುತಿಸಲು ಎರಡು ಬೆಳ್ಳಿಯ ತುತ್ತೂರಿಗಳನ್ನು ವಿಧಿಸುತ್ತದೆ. ಇಸ್ರಾಯೇಲರು ನಂತರ ನಿಗದಿತ ಕ್ರಮದಲ್ಲಿ ಗುಡಾರ ಮತ್ತು ಮಂಜೂಷವನ್ನು ಹೊತ್ತು ಸೀನಾಯಿಯಿಂದ ಹೊರಡುತ್ತಾರೆ, ಮೋಶೆಯು ಹೋಬಾಬನನ್ನು ತಮ್ಮ ವಾಗ್ದಾನದ ಒಳಿತಿನಲ್ಲಿ ಪಾಲ್ಗೊಳ್ಳಲು ಆಹ್ವಾನಿಸುತ್ತಾನೆ.
ಬೆಳ್ಳಿಯ ತುತ್ತೂರಿಗಳುನಿರ್ಗಮನಕ್ರಮಆಹ್ವಾನ
1ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ ಹೇಳಿದ್ದು:
2“ನಕ್ಷೆಯ ಕೆಲಸದಿಂದ ಹೊಡೆದು ಮಾಡಿದ ಬೆಳ್ಳಿಯ ತಗಡಿನ ಎರಡು ತುತೂರಿಗಳನ್ನು ನೀನು ಮಾಡಿಸಬೇಕು. ಸಭೆಯನ್ನು ಕರೆಯುವುದಕ್ಕಾಗಿಯೂ, ಪಾಳೆಯಗಳ ಪ್ರಯಾಣಕ್ಕಾಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು.
3ಅವುಗಳನ್ನು ಊದುವಾಗ ಜನರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
4ಒಂದನ್ನು ಮಾತ್ರ ಊದುವಾಗ, ಇಸ್ರಾಯೇಲರಲ್ಲಿ ಮುಖ್ಯಸ್ಥರಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.
5ನೀವು ಜಯಧ್ವನಿಯಂತೆ ಊದುವಾಗ ಪೂರ್ವದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಮುಂದೆ ಹೊರಡಬೇಕು.
6ನೀವು ಎರಡನೆಯ ಸಾರಿ ಆರ್ಭಟವಾಗಿ ಊದುವಾಗ, ದಕ್ಷಿಣದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಪ್ರಯಾಣ ಮಾಡಬೇಕು. ಅವರ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿ ಊದಬೇಕು.
7ಆದರೆ ಸಭೆಯನ್ನು ಕೂಡಿಸುವಾಗ ನೀವು ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬೇಡಿರಿ.
8“ಯಾಜಕರಾಗಿರುವ ಆರೋನನ ಪುತ್ರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು.
9ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರವಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ಜನರನ್ನು ಎಚ್ಚರಿಸುವಂತೆ ತುತೂರಿಗಳನ್ನು ಆರ್ಭಟವಾಗಿ ಊದಬೇಕು. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನೆನಪು ಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ಬಿಡಿಸುವನು.
10ನಿಮ್ಮ ಸಂತೋಷದ ದಿವಸದಲ್ಲಿಯೂ, ನಿಮ್ಮ ಹಬ್ಬಗಳಲ್ಲಿಯೂ ನಿಮ್ಮ ತಿಂಗಳಿನ ಆರಂಭದಲ್ಲಿಯೂ ತುತೂರಿಗಳನ್ನು ಊದಬೇಕು. ನಿಮ್ಮ ದಹನಬಲಿಗಳನ್ನೂ ಸಮಾಧಾನದ ಬಲಿಯನ್ನೂ ಅರ್ಪಿಸುವಾಗ ಅವುಗಳನ್ನು ಊದಬೇಕು. ಅವುಗಳ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.”
11ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎದ್ದಿತು.
12ಆಗ ಇಸ್ರಾಯೇಲರು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಮರುಭೂಮಿಯಿಂದ ಪ್ರಯಾಣಮಾಡಿದರು. ಮೇಘವು ಪಾರಾನ್ ಎಂಬ ಮರುಭೂಮಿಯಲ್ಲಿ ಇಳಿಯಿತು.
13ಆಗ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಪ್ರಯಾಣಮಾಡಿದ್ದು ಇದು ಮೊದಲನೇ ಸಾರಿ.
14ಯೆಹೂದನ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀನಾದಾಬನ ಮಗ ನಹಶೋನನು ಇದ್ದನು.
15ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗ ನೆತನೆಯೇಲ್ ಇದ್ದನು.
16ಜೆಬುಲೂನನ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗ ಎಲೀಯಾಬನು ಇದ್ದನು.
17ಆಗ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ, ಮೆರಾರೀಯರೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು.
18ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಶೆದೇಯೂರನ ಮಗ ಎಲೀಚೂರನು ಇದ್ದನು.
19ಸಿಮೆಯೋನನ ಗೋತ್ರದ ಸೈನ್ಯದ ಮೇಲೆ ಚುರೀಷದ್ದೈಯನ ಮಗ ಶೆಲುಮೀಯೇಲನು ಇದ್ದನು.
20ಗಾದನ ಗೋತ್ರದ ಸೈನ್ಯದ ಮೇಲೆ ದೆವುಯೇಲನ ಮಗ ಎಲ್ಯಾಸಾಫನು ಇದ್ದನು.
21ಅವರ ಹಿಂದೆ ಪರಿಶುದ್ಧ ವಸ್ತುಗಳನ್ನು ಹೊರುವ ಕೊಹಾತ್ಯರು ಹೊರಟರು. ಇವರು ಬರುವಷ್ಟರೊಳಗೆ ಉಳಿದ ಲೇವಿಯರು ಗುಡಾರವನ್ನು ನಿಲ್ಲಿಸಿದರು.
22ಎಫ್ರಾಯೀಮನ ಪಾಳೆಯದ ಧ್ವಜವು ಅವನ ಸೈನ್ಯಗಳ ಪ್ರಕಾರ ಹೊರಟಿತು. ಅವರ ಸೈನ್ಯದ ಮೇಲೆ ಅಮ್ಮೀಹೂದನ ಮಗ ಎಲೀಷಾಮನು ಇದ್ದನು.
23ಮನಸ್ಸೆಯ ಗೋತ್ರದ ಮೇಲೆ ಪೆದಾಚೂರನ ಮಗ ಗಮಲಿಯೇಲನು ಇದ್ದನು.
24ಬೆನ್ಯಾಮೀನನ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗ ಅಬೀದಾನನು ಇದ್ದನು.
25ದಾನನ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಇದ್ದನು.
26ಆಶೇರನ ಗೋತ್ರದ ಸೈನ್ಯಗಳ ಮೇಲೆ ಒಕ್ರಾನನ ಮಗ ಪಗೀಯೇಲನು ಇದ್ದನು.
27ನಫ್ತಾಲಿಯ ಗೋತ್ರದ ಸೈನ್ಯದ ಮೇಲೆ ಏನಾನ ಮಗ ಅಹೀರನು ಇದ್ದನು.
28ಈ ಪ್ರಕಾರ ಇಸ್ರಾಯೇಲರು ತಮ್ಮ ಗೋತ್ರಗಳ ಪ್ರಕಾರ ಪ್ರಯಾಣವಾಗಿ ಹೊರಟರು.
29ಮೋಶೆ ತನ್ನ ಮಾವನಾಗಿದ್ದ ಮಿದ್ಯಾನನಾದ ರೆಯೂವೇಲನ ಮಗ ಹೊಬಾಬನಿಗೆ, “ಯೆಹೋವ ದೇವರು ನಮಗೆ ಕೊಡುತ್ತೇನೆಂದು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಸಂಗಡ ನೀನೂ ಬಾ, ನಾವು ನಿನಗೆ ಒಳ್ಳೆಯದನ್ನು ಮಾಡುವೆವು. ಏಕೆಂದರೆ ಯೆಹೋವ ದೇವರು ಇಸ್ರಾಯೇಲರನ್ನು ಕುರಿತು ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾರೆ,” ಎಂದು ಹೇಳಿದನು.
30ಆಗ ಅವನು ಅವನಿಗೆ, “ನಾನು ಬರುವುದಿಲ್ಲ. ನನ್ನ ದೇಶಕ್ಕೂ ನನ್ನ ಬಂಧುಗಳ ಬಳಿಗೂ ನಾನು ಹೋಗುತ್ತೇನೆ,” ಎಂದನು.
31ಅದಕ್ಕೆ ಮೋಶೆ, “ನಮ್ಮನ್ನು ಬಿಡಬೇಡ. ಏಕೆಂದರೆ ನಾವು ಎಲ್ಲಿ ಇಳಿದುಕೊಳ್ಳಬೇಕೆಂಬುದು ನಿನಗೆ ಮಾತ್ರ ತಿಳಿದಿದೆ. ನೀನು ನಮಗೆ ಕಣ್ಣುಗಳಾಗಿರುವೆ.
32ನೀನು ನಮ್ಮ ಸಂಗಡ ಬಂದರೆ ಯೆಹೋವ ದೇವರು ನಮಗೆ ಕೊಡುವುದಕ್ಕಿರುವ ಒಳ್ಳೆಯದನ್ನು ನಾವು ನಿನ್ನೊಂದಿಗೆ ಹಂಚಿಕೊಳ್ಳುವೆವು,” ಎಂದನು.
33ಅವರು ಯೆಹೋವ ದೇವರ ಪರ್ವತದ ಬಳಿಯಿಂದ ಮೂರು ದಿವಸಗಳವರೆಗೆ ಪ್ರಯಾಣಮಾಡಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರಿಗೆ ಇಳಿದುಕೊಳ್ಳುವ ಸ್ಥಳವನ್ನು ಹುಡುಕುವುದಕ್ಕೆ ಅವರ ಮೂರು ದಿವಸಗಳ ಪ್ರಯಾಣದಲ್ಲಿ ಅವರ ಮುಂದಾಗಿ ಹೋಯಿತು.
34ಅವರು ಪಾಳೆಯದಿಂದ ಹೊರಟಾಗ, ಯೆಹೋವ ದೇವರ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು.
35ಇದಲ್ಲದೆ ಮಂಜೂಷವು ಹೊರಡುವಾಗ ಮೋಶೆಯು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಎದ್ದೇಳಿರಿ, ನಿಮ್ಮ ಶತ್ರುಗಳು ಚದರಿಹೋಗಲಿ. ನಿಮ್ಮನ್ನು ಹಗೆ ಮಾಡುವವರು ನಿಮ್ಮ ಎದುರಿನಿಂದ ಓಡಿಹೋಗಲಿ.”
36ಮಂಜೂಷವು ನಿಂತಾಗ ಅವನು ಹೀಗೆ ಹೇಳುತ್ತಿದ್ದನು, “ಯೆಹೋವ ದೇವರೇ, ಸಾವಿರಾರು ಇಸ್ರಾಯೇಲರ ಕುಟುಂಬಗಳ ಬಳಿಗೆ ಹಿಂದಿರುಗು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.