Jesus healing at a Sabbath meal as servants welcome poor and disabled neighbors to a banquet

ಲೂಕ 14

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯೇಸು ಸಬ್ಬತ್ತಿನ ಊಟದಲ್ಲಿ ಸ್ವಸ್ಥಪಡಿಸಿ, ಸ್ಥಳಗಳನ್ನೂ ಅತಿಥಿಗಳನ್ನೂ ಆರಿಸುವಲ್ಲಿ ದೀನತೆಯನ್ನು ಬೋಧಿಸುತ್ತಾನೆ. ದೊಡ್ಡ ಔತಣದ ಸಾಮ್ಯವು ತಿರಸ್ಕರಿಸಿದ ಆಹ್ವಾನ ಮತ್ತು ವಿಸ್ತರಿಸಿದ ಸ್ವಾಗತವನ್ನು ಚಿತ್ರಿಸುತ್ತದೆ, ಶಿಷ್ಯತ್ವದ ಬೆಲೆಯನ್ನು ಲೆಕ್ಕಹಾಕುವಂತೆ ಯೇಸು ಜನಸಮೂಹವನ್ನು ಎಚ್ಚರಿಸುತ್ತಾನೆ.
ಸಬ್ಬತ್ತಿನ ಕರುಣೆದೀನತೆದೊಡ್ಡ ಔತಣಶಿಷ್ಯತ್ವದ ಬೆಲೆ
1ಯೇಸು ಒಂದು ಸಬ್ಬತ್ ದಿನದಲ್ಲಿ, ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ, ಎಲ್ಲರು ಅವರನ್ನು ಗಮನಿಸುತ್ತಿದ್ದರು.
2ಅಲ್ಲಿ ದೇಹದಲ್ಲಿ ಅಸಾಧಾರಣವಾಗಿ ನೀರು ತುಂಬಿದ್ದ ರೋಗಿಯೊಬ್ಬನು ಯೇಸುವಿನ ಮುಂದೆ ಇದ್ದನು.
3ಆಗ ಯೇಸು ನಿಯಮ ಪಂಡಿತರಿಗೂ ಫರಿಸಾಯರಿಗೂ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಮೋಶೆಯ ನಿಯಮದ ಪ್ರಕಾರವೋ?” ಎಂದು ಕೇಳಿದರು.
4ಆದರೆ ಅವರು ಮೌನವಾಗಿಯೇ ಇದ್ದರು. ಆಗ ಯೇಸು, ಆ ರೋಗಿಯನ್ನು ಸ್ವಸ್ಥಮಾಡಿ ಕಳುಹಿಸಿಬಿಟ್ಟರು.
5ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬರ ಮಗುವಾಗಲಿ, ಎತ್ತಾಗಲಿ ಒಂದು ಬಾವಿಯಲ್ಲಿ ಬಿದ್ದರೆ, ಅದನ್ನು ತಕ್ಷಣವೇ ಸಬ್ಬತ್ ದಿನದಲ್ಲಿ ಮೇಲಕ್ಕೆ ಎಳೆಯುವುದಿಲ್ಲವೇ?” ಎಂದು ಕೇಳಿದರು.
6ಅದಕ್ಕೆ ಅವರು ಉತ್ತರ ಕೊಡಲಾರದೆ ಇದ್ದರು.
7ಊಟಕ್ಕೆ ಆಹ್ವಾನಿತರು ತಮಗಾಗಿ ಮುಖ್ಯ ಸ್ಥಳಗಳನ್ನು ಹೇಗೆ ಆರಿಸಿಕೊಂಡರೆಂದು ಯೇಸು ಗುರುತಿಸಿ, ಅವರಿಗೆ ಒಂದು ಸಾಮ್ಯವನ್ನು ಹೇಳಿದರು:
8“ಯಾರಾದರೂ ನಿನ್ನನ್ನು ಮದುವೆಯ ಊಟಕ್ಕೆ ಕರೆದರೆ ಮೊದಲನೆಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಏಕೆಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಆಹ್ವಾನಿಸಿರಬಹುದು.
9ಆಗ, ನಿನ್ನನ್ನು ಮತ್ತು ಅವನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಈ ಮನುಷ್ಯನಿಗೆ ಸ್ಥಳಕೊಡು,’ ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುವುದು.
10ಆದರೆ ನಿನ್ನನ್ನು ಆಹ್ವಾನಿಸಿದಾಗ, ಹೋಗಿ ಕಡೇ ಸ್ಥಳದಲ್ಲಿ ಕುಳಿತುಕೋ, ಆಗ ನಿನ್ನನ್ನು ಆಹ್ವಾನಿಸಿದವನು ಬಂದು ನಿನಗೆ, ‘ಸ್ನೇಹಿತನೇ, ಉತ್ತಮ ಸ್ಥಳಕ್ಕೆ ಬಾ,’ ಎಂದು ಹೇಳುವಾಗ ನಿನ್ನ ಜೊತೆಯಲ್ಲಿ ಊಟಕ್ಕೆ ಕುಳಿತವರೆಲ್ಲರ ಮುಂದೆ ನಿನಗೆ ಗೌರವವಿರುವುದು.
11ಏಕೆಂದರೆ, ಯಾರಾದರೂ ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವರೋ ಅವರು ತಗ್ಗಿಸಲಾಗುವರು ಮತ್ತು ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಹೆಚ್ಚಿಸಲಾಗುವರು,” ಎಂದರು.
12ಯೇಸು ತಮ್ಮನ್ನು ಆಹ್ವಾನಿಸಿದವನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಇಲ್ಲವೆ ರಾತ್ರಿಯ ಊಟಕ್ಕೆ ಸಿದ್ಧಪಡಿಸಿದಾಗ, ನಿನ್ನ ಸ್ನೇಹಿತರನ್ನಾಗಲಿ ನಿನ್ನ ಸಹೋದರ ಸಹೋದರಿಯನ್ನಾಗಲಿ, ನಿನ್ನ ಬಂಧುಗಳನ್ನಾಗಲಿ, ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ, ಏಕೆಂದರೆ ಅವರೂ ಪ್ರತಿಯಾಗಿ ನಿನ್ನನ್ನೂ ಆಹ್ವಾನಿಸಬಹುದು ಮತ್ತು ನಿನಗೆ ಪ್ರತ್ಯುಪಕಾರವಾದೀತು.
13ಆದರೆ ನೀನು ಔತಣಮಾಡಿಸಿದಾಗ, ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಹ್ವಾನಿಸು.
14ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವುದಕ್ಕೆ ಆಗದಿರುವುದರಿಂದ, ನೀನು ಧನ್ಯನಾಗುವೆ. ಏಕೆಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವುದು.”
15ಯೇಸುವಿನ ಸಂಗಡ ಔತಣಕ್ಕೆ ಕುಳಿತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಅವರಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು,” ಎಂದು ಹೇಳಿದನು.
16ಯೇಸು ಅವನಿಗೆ ಹೀಗೆ ಹೇಳಿದರು: “ಒಬ್ಬ ಮನುಷ್ಯನು ಒಂದು ದೊಡ್ಡ ಔತಣ ಮಾಡಿಸಿ ಅನೇಕರನ್ನು ಆಹ್ವಾನಿಸಿದನು.
17ಊಟಕ್ಕೆ ಸಮಯವಾದಾಗ ಆಹ್ವಾನಿತರಿಗೆ ಅವನು, ‘ಎಲ್ಲವೂ ಸಿದ್ಧವಾಗಿದೆ ಬನ್ನಿರಿ,’ ಎಂದು ಹೇಳಲು ತನ್ನ ಸೇವಕನನ್ನು ಕಳುಹಿಸಿದನು.
18“ಆದರೆ ಅವರೆಲ್ಲರೂ ಒಂದೇ ರೀತಿಯಾಗಿ ನೆಪ ಹೇಳಲಾರಂಭಿಸಿದರು. ಮೊದಲನೆಯವನು, ‘ನಾನು ಒಂದು ಹೊಲ ಕೊಂಡುಕೊಂಡಿದ್ದೇನೆ, ನಾನು ಅದನ್ನು ನೋಡಬೇಕಾಗಿದೆ, ದಯವಿಟ್ಟು ಕ್ಷಮಿಸಬೇಕು,’ ಎಂದು ಹೇಳಿದನು.
19“ಇನ್ನೊಬ್ಬನು, ‘ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಬೇಕು,’ ಎಂದನು.
20“ಮತ್ತೊಬ್ಬನು, ‘ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ಬರಲಾರೆ,’ ಎಂದನು.
21“ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಲು, ಆ ಮನೆಯಜಮಾನನು ಕೋಪಗೊಂಡು ತನ್ನ ಸೇವಕನಿಗೆ, ‘ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ, ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿ ಕರೆದುಕೊಂಡು ಬಾ,’ ಎಂದನು.
22“ಆ ಸೇವಕನು, ‘ಸ್ವಾಮಿ, ನೀನು ಅಪ್ಪಣೆ ಕೊಟ್ಟಂತೆ ಮಾಡಿದ್ದಾಯಿತು, ಆದರೂ ಸ್ಥಳವಿದೆ,’ ಎಂದನು.
23“ಆಗ ಯಜಮಾನನು ಸೇವಕನಿಗೆ, ‘ನೀನು ಬೀದಿಗಳಿಗೂ ಓಣಿಗಳಿಗೂ ಹೊರಟುಹೋಗಿ ನನ್ನ ಮನೆ ತುಂಬುವಂತೆ, ಇಲ್ಲಿ ಬರುವುದಕ್ಕೆ ಕಂಡವರನ್ನು ಬಲವಂತಮಾಡು.
24ಆದರೆ, ಮೊದಲು ಆಹ್ವಾನಿತರಲ್ಲಿ ಒಬ್ಬನಾದರೂ ನನ್ನ ಔತಣವನ್ನು ರುಚಿ ನೋಡಬಾರದು ಎಂದು ನಾನು ನಿನಗೆ ಹೇಳುತ್ತೇನೆ.’ ”
25ದೊಡ್ಡ ಜನಸಮೂಹವು ಯೇಸುವಿನ ಸಂಗಡ ಹೋಗುತ್ತಿರಲು, ಯೇಸು ತಿರುಗಿಕೊಂಡು ಅವರನ್ನು ನೋಡಿ ಹೇಳಿದ್ದೇನೆಂದರೆ:
26“ಯಾರಾದರೂ ನನ್ನ ಬಳಿಗೆ ಬಂದು ತಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ತಮ್ಮ ಸ್ವಂತ ಪ್ರಾಣವನ್ನು ಸಹ ದ್ವೇಷಿಸದಿದ್ದರೆ ಅವರು ನನ್ನ ಶಿಷ್ಯರಾಗಲಾರರು.
27ಯಾರಾದರೂ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸದವರು ನನ್ನ ಶಿಷ್ಯರಾಗಲಾರರು.
28“ನಿಮ್ಮಲ್ಲಿ ಒಬ್ಬರು ಗೋಪುರವನ್ನು ಕಟ್ಟಲು ಇಚ್ಛಿಸಿದರೆ. ನೀವು ಮೊದಲು ಕುಳಿತು ಅದನ್ನು ಪೂರೈಸುವುದಕ್ಕೆ ಬೇಕಾದ ಖರ್ಚು ಇದೆಯೋ ಎಂದು ಲೆಕ್ಕ ಮಾಡುವುದಿಲ್ಲವೋ?
29ಒಂದು ವೇಳೆ ಹಾಗೆ ಲೆಕ್ಕಮಾಡದೆ ನೀವು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ, ಅದನ್ನು ಪೂರೈಸದಿದ್ದರೆ, ನಿಮ್ಮನ್ನು ನೋಡುವವರೆಲ್ಲರೂ, ‘ಈ ವ್ಯಕ್ತಿ ಕಟ್ಟಲಾರಂಭಿಸಿದ, ಮುಗಿಸಲು ಇವನಿಗೆ ಆಗಲಿಲ್ಲ,’ ಎಂದು ಹೇಳಿ ಹಾಸ್ಯಮಾಡುವರು.
31“ಅಥವಾ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೆ ಹೋಗುವಾಗ, ಮೊದಲು ಕುಳಿತು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ ಸೈನ್ಯದೊಂದಿಗೆ ಬರುವ ಆ ಅರಸನನ್ನು ತನ್ನ ಹತ್ತು ಸಾವಿರ ಸೈನ್ಯದೊಂದಿಗೆ ಎದುರಿಸುವುದಕ್ಕೆ ಸಮರ್ಥವೋ ಎಂದು ಆಲೋಚನೆ ಮಾಡುವುದಿಲ್ಲವೇ?
32ಸಾಮರ್ಥ್ಯ ಇಲ್ಲದಿದ್ದರೆ, ಇನ್ನೂ ದೂರದಲ್ಲಿರುವಾಗಲೇ ಪ್ರತಿನಿಧಿಗಳನ್ನು ಕಳುಹಿಸಿ ಸಮಾಧಾನವನ್ನು ಕೋರುವನಲ್ಲವೇ?
33ಆದ್ದರಿಂದ ನಿಮ್ಮಲ್ಲಿ ಯಾರಾದರೂ ತಮಗಿರುವುದನ್ನೆಲ್ಲಾ ಬಿಟ್ಟುಬಿಡದಿದ್ದರೆ, ಅವರು ನನ್ನ ಶಿಷ್ಯರಾಗಲಾರರು.
34“ಉಪ್ಪು ಒಳ್ಳೆಯದು, ಆದರೆ ಉಪ್ಪೇ ಸಪ್ಪಗಾದರೆ, ಅದಕ್ಕೆ ಇನ್ನಾವುದರಿಂದ ರುಚಿ ಬಂದೀತು?
35ಅದು ಭೂಮಿಗಾದರೂ ಗೊಬ್ಬರಕ್ಕಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. “ಕೇಳುವುದಕ್ಕೆ ಕಿವಿಯುಳ್ಳವರು, ಕೇಳಲಿ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.