Aaron and his sons standing solemnly as attendants carry wrapped bodies beyond the sanctuary

ಯಾಜಕಕಾಂಡ 10

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯಾಜಕಕಾಂಡ 10 ನಾದಾಬ್ ಮತ್ತು ಅಬೀಹೂ ಅನಧಿಕೃತ ಅಗ್ನಿಯನ್ನು ಅರ್ಪಿಸಿದ ನಂತರ ಅವರ ಮರಣವನ್ನು ವಿವರಿಸುತ್ತದೆ. ಆರೋನ ಮತ್ತು ಅವನ ಉಳಿದ ಮಕ್ಕಳು ಶೋಕ, ಯಾಜಕರ ಸಂಯಮ, ಪವಿತ್ರವನ್ನು ಸಾಮಾನ್ಯದಿಂದ ಪ್ರತ್ಯೇಕಿಸುವುದು, ಇಸ್ರಾಯೇಲರಿಗೆ ಬೋಧಿಸುವುದು ಮತ್ತು ದುಃಖದ ಸಮಯದಲ್ಲಿ ಪವಿತ್ರ ಭಾಗಗಳ ನಿರ್ವಹಣೆಯ ಕುರಿತು ಸೂಚನೆಗಳನ್ನು ಪಡೆಯುತ್ತಾರೆ.
ಅನಧಿಕೃತ ಅಗ್ನಿಯಾಜಕ ಜವಾಬ್ದಾರಿವಿವೇಚನೆದುಃಖ
1ಆರೋನನ ಪುತ್ರರಾದ ನಾದಾಬ್ ಮತ್ತು ಅಬೀಹೂ ತಮ್ಮ ತಮ್ಮ ಧೂಪ ಪಾತ್ರೆಗಳನ್ನು ತೆಗೆದುಕೊಂಡು, ಅದರಲ್ಲಿ ಬೆಂಕಿಯನ್ನು ಹಾಕಿ, ಅದರಲ್ಲಿ ಸುವಾಸನೆಯ ಧೂಪವನ್ನು ಹಾಕಿ, ಯೆಹೋವ ದೇವರು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದರು.
2ಆಗ ಯೆಹೋವ ದೇವರ ಬಳಿಯಿಂದ ಬೆಂಕಿಯು ಹೊರಟುಬಂದು ಅವರನ್ನು ದಹಿಸಿಬಿಟ್ಟಿತು. ಅವರು ಯೆಹೋವ ದೇವರ ಮುಂದೆ ಮರಣಹೊಂದಿದರು.
3ತರುವಾಯ ಮೋಶೆಯು ಆರೋನನಿಗೆ, “ಯೆಹೋವ ದೇವರು ಹೇಳಿದ್ದು ಇದೇ. ಅದೇನೆಂದರೆ: “ ‘ನನ್ನನ್ನು ಸಮೀಪಿಸುವವರ ಮುಖಾಂತರ ನನ್ನ ಪರಿಶುದ್ಧತೆಯನ್ನು ತೋರಿಸುವೆನು ಮತ್ತು ಜನರೆಲ್ಲರ ಮುಂದೆ ನನ್ನ ಮಹಿಮೆಯನ್ನು ತೋರ್ಪಡಿಸುವೆನು,’ ” ಎಂದನು. ಆಗ ಆರೋನನು ಮಾತನಾಡದೆ ಸುಮ್ಮನಿದ್ದನು.
4ಮೋಶೆಯು ಆರೋನನ ಚಿಕ್ಕಪ್ಪನಾದ ಉಜ್ಜೀಯೇಲನ ಮಕ್ಕಳಾದ ಮೀಶಾಯೇಲನನ್ನೂ ಎಲ್ಜಾಫಾನನನ್ನೂ ಕರೆದು, “ನಿಮ್ಮ ಸಹೋದರರನ್ನು ಪರಿಶುದ್ಧ ಸ್ಥಳದಿಂದ ಪಾಳೆಯದ ಹೊರಗೆ ಹೊತ್ತುಕೊಂಡು ಹೋಗಿರಿ,” ಎಂದನು.
5ಮೋಶೆಯು ಹೇಳಿದ ಹಾಗೆಯೇ, ಅವರು ಹತ್ತಿರಕ್ಕೆ ಹೋಗಿ ಅವರನ್ನು ಅವರ ಮೇಲಂಗಿಗಳೊಂದಿಗೆ ಹೊತ್ತುಕೊಂಡು ಪಾಳೆಯದ ಹೊರಗೆ ಹೋದರು.
6ಆಗ ಮೋಶೆಯು ಆರೋನನಿಗೂ ಅವನ ಪುತ್ರರಾದ ಎಲಿಯಾಜರನಿಗೂ ಈತಾಮಾರನಿಗೂ, “ನೀವು ಮರಣ ಹೊಂದದಂತೆಯೂ ಕೋಪವು ಜನರೆಲ್ಲರ ಮೇಲೆ ಬಾರದಂತೆಯೂ ನೀವು ನಿಮ್ಮ ಮುಚ್ಚಿದ ತಲೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ತೆಗೆಯಬೇಡಿರಿ. ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದುಕೊಳ್ಳಬೇಡಿರಿ. ಆದರೆ ನಿಮ್ಮ ಸಹೋದರರಾಗಿರುವ ಇಸ್ರಾಯೇಲಿನ ಮನೆತನದವರೆಲ್ಲರು ಯೆಹೋವ ದೇವರು ಉರಿಸಿದ ಬೆಂಕಿಯ ನಾಶದ ನಿಮಿತ್ತ ಗೋಳಾಡಲಿ.
7ನೀವು ಮರಣ ಹೊಂದದಂತೆ ದೇವದರ್ಶನದ ಗುಡಾರದ ಬಾಗಿಲಿನಿಂದ ಹೊರಗೆ ಹೋಗಬಾರದು. ಏಕೆಂದರೆ ಯೆಹೋವ ದೇವರ ಅಭಿಷೇಕ ತೈಲವು ನಿಮ್ಮ ಮೇಲಿದೆ,” ಎಂದನು. ಆಗ ಅವರು ಮೋಶೆಯ ಮಾತಿನ ಪ್ರಕಾರವೇ ಮಾಡಿದರು.
8ಯೆಹೋವ ದೇವರು ಮಾತನಾಡಿ ಆರೋನನಿಗೆ,
9“ನೀನು ಸಾಯದಂತೆ ದೇವದರ್ಶನದ ಗುಡಾರಕ್ಕೆ ಬರುವಾಗ ನೀನೂ ಇಲ್ಲವೆ ನಿನ್ನ ಪುತ್ರರೂ ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿಯಬಾರದು. ಇದು ನಿಮ್ಮ ವಂಶಾವಳಿಯು ಇರುವವರೆಗೂ ಶಾಶ್ವತವಾಗಿರುವ ಕಟ್ಟಳೆಯಾಗಿದೆ.
10ನೀವು ಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಮಧ್ಯೆ ಇರುವ ವ್ಯತ್ಯಾಸವನ್ನು ತೋರಿಸುವುದಕ್ಕಾಗಿಯೂ
11ನೀವು ಇಸ್ರಾಯೇಲರಿಗೆ ಯೆಹೋವ ದೇವರು ಮೋಶೆಯ ಕೈಗೆ ಒಪ್ಪಿಸಿ ಹೇಳಿದ ಹಾಗೆ, ಎಲ್ಲಾ ಕಟ್ಟಳೆಗಳನ್ನು ಬೋಧಿಸುವುದಕ್ಕಾಗಿಯೂ ಇರುವುದು,” ಎಂದರು.
12ಮೋಶೆಯು ಆರೋನನೊಂದಿಗೂ ಉಳಿದ ಅವನ ಪುತ್ರರಾದ ಎಲಿಯಾಜರನೊಂದಿಗೂ ಈತಾಮಾರನೊಂದಿಗೂ ಮಾತನಾಡಿ, “ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಬಲಿಗಳಲ್ಲಿ ಉಳಿದಿರುವ ಧಾನ್ಯ ಸಮರ್ಪಣೆಯನ್ನು ತೆಗೆದುಕೊಳ್ಳಿರಿ ಮತ್ತು ಅದನ್ನು ಯಜ್ಞವೇದಿಯ ಬಳಿಯಲ್ಲಿ ಹುಳಿಯಿಲ್ಲದ ರೊಟ್ಟಿ ತಿನ್ನಿರಿ. ಏಕೆಂದರೆ ಅದು ಮಹಾಪರಿಶುದ್ಧವಾದದ್ದು.
13ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ದಹನ ಮಾಡಿದ ಯೆಹೋವ ದೇವರ ಯಜ್ಞಗಳಲ್ಲಿ ಇವು ನಿನಗೂ ನಿನ್ನ ಪುತ್ರರಿಗೂ ಸಲ್ಲತಕ್ಕವುಗಳು. ಏಕೆಂದರೆ ಹಾಗೆ ನನಗೆ ಆಜ್ಞೆಯಾಗಿದೆ.
14ನೀನೂ, ನಿನ್ನೊಂದಿಗೆ ನಿನ್ನ ಪುತ್ರರೂ ನಿನ್ನ ಪುತ್ರಿಯರೂ ನೈವೇದ್ಯ ಮಾಡಿದ ಎದೆಯ ಭಾಗವನ್ನೂ, ಅರ್ಪಿಸುವ ತೊಡೆಯ ಭಾಗವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು. ಏಕೆಂದರೆ ಅದು ಇಸ್ರಾಯೇಲರ ಸಮಾಧಾನದ ಬಲಿಗಳಲ್ಲಿ ನಿನಗೂ ನಿನ್ನ ಪುತ್ರರಿಗೂ ಸಲ್ಲುವಂಥವುಗಳಾಗಿವೆ.
15ನೈವೇದ್ಯವಾಗಿ ಅರ್ಪಿಸುವ ಎದೆಯನ್ನೂ ತೊಡೆಯನ್ನೂ ಅವರು ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನು ನೈವೇದ್ಯವಾಗಿ ನಿವಾಳಿಸುವುದಕ್ಕೆ ಯೆಹೋವ ದೇವರ ಸನ್ನಿಧಿಯಲ್ಲಿ ತರಬೇಕು. ಯೆಹೋವ ದೇವರು ಆಜ್ಞಾಪಿಸಿದ ಹಾಗೆ ಅದು ನಿನಗೂ, ನಿನ್ನೊಂದಿಗೆ ನಿನ್ನ ಪುತ್ರರಿಗೂ ನಿತ್ಯ ಕಟ್ಟಳೆಯಾಗಿ ಸಿಕ್ಕಬೇಕು,” ಎಂದು ಹೇಳಿದನು.
16ಅನಂತರ ಮೋಶೆಯು ಶ್ರದ್ಧೆಯಿಂದ ಪಾಪ ಪರಿಹಾರದ ಬಲಿಯ ಹೋತವನ್ನು ಹುಡುಕಿದಾಗ, ಅದು ಸುಟ್ಟು ಹೋಗಿತ್ತು. ಅವನು ಆರೋನನ ಉಳಿದ ಪುತ್ರರಾದ ಎಲಿಯಾಜರ್ ಮತ್ತು ಈತಾಮಾರನ ಮೇಲೆ ಕೋಪಗೊಂಡು, ಹೇಳಿದ್ದೇನೆಂದರೆ,
17“ಅದು ಮಹಾಪರಿಶುದ್ಧವಾದ್ದರಿಂದಲೂ ಯೆಹೋವ ಸನ್ನಿಧಿಯಲ್ಲಿ ಅವರಿಗಾಗಿ ಪ್ರಾಯಶ್ಚಿತ್ತ ಮಾಡುವುದಕ್ಕಾಗಿಯೂ ನೀವು ಸಭೆಯ ಅಪರಾಧವನ್ನು ಹೊರುವುದಕ್ಕಾಗಿ ದೇವರು ಅದನ್ನು ಕೊಟ್ಟಿದ್ದೆಂದೂ ನೀವು ತಿಳಿದು ಪಾಪ ಪರಿಹಾರದ ಬಲಿಯನ್ನು ಪರಿಶುದ್ಧವಾದ ಸ್ಥಳದಲ್ಲಿ ಏಕೆ ತಿನ್ನಲಿಲ್ಲ?
18ಇಗೋ, ಅದರ ರಕ್ತವು ಪರಿಶುದ್ಧಸ್ಥಳದ ಒಳಗೆ ತರಲಿಲ್ಲವಾದ ಕಾರಣ ನಾನು ಆಜ್ಞಾಪಿಸಿದಂತೆ ನಿಶ್ಚಯವಾಗಿ ನೀವು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕಾಗಿತ್ತು,” ಎಂದನು.
19ಆಗ ಆರೋನನು ಮೋಶೆಗೆ, “ಈ ದಿನ ಅವರು ಪಾಪಪರಿಹಾರ ಬಲಿಯನ್ನು ಮತ್ತು ಅದರ ದಹನಬಲಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸಿದ್ದರು. ಆದರೆ ಈ ದುಃಖ ಘಟನೆಗಳು ನನಗೆ ಸಂಭವಿಸಿದೆ. ಹೀಗಿರುವಲ್ಲಿ ಇಂದು ನಾನು ಆ ಪಾಪ ಪರಿಹಾರದ ಬಲಿದ್ರವ್ಯವನ್ನು ಊಟಮಾಡಿದ್ದರೆ, ಯೆಹೋವ ದೇವರು ಸಂತೋಷಪಡುತ್ತಿದ್ದರೋ?” ಎಂದನು.
20ಆಗ ಮೋಶೆಯು ಈ ಮಾತನ್ನು ಕೇಳಿದಾಗ ತೃಪ್ತಿಪಟ್ಟನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.