Two Israelite groups confronting one another across a Jordan River ford

ನ್ಯಾಯಸ್ಥಾಪಕರು 12

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಎಫ್ರಾಯೀಮ್ ಕೋಪದಿಂದ ಯೆಫ್ತಾಹನನ್ನು ಎದುರಿಸುತ್ತದೆ, ಮತ್ತು ವಿವಾದವು ಯೊರ್ದನಿನ ದಾಟುದಾರಿಗಳಲ್ಲಿ ಮಾರಕ ಆಂತರಿಕ ಸಂಘರ್ಷವಾಗುತ್ತದೆ, ಅಲ್ಲಿ ಉಚ್ಚಾರಣೆಯು ಓಡಿಹೋದವರನ್ನು ಗುರುತಿಸುತ್ತದೆ. ಯೆಫ್ತಾಹನ ಸಂಕ್ಷಿಪ್ತ ನ್ಯಾಯಸ್ಥಾಪನೆ ಮುಗಿದು, ಇಬ್ಚಾನ್, ಏಲೋನ್ ಮತ್ತು ಅಬ್ದೋನರ ಶಾಂತ ಆಡಳಿತಗಳು ಅನುಸರಿಸುತ್ತವೆ.
ಆಂತರಿಕ ಸಂಘರ್ಷಗರ್ವವಿಭಜನೆನಾಯಕತ್ವ
1ಎಫ್ರಾಯೀಮನ ಜನರು ಕೂಡಿಕೊಂಡು ಉತ್ತರದ ಜಪೋನಿಗೆ ಹೋಗಿ, ಯೆಫ್ತಾಹನಿಗೆ, “ನೀನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಹೋದಾಗ, ನಮ್ಮನ್ನು ಏಕೆ ನಿನ್ನ ಸಂಗಡ ಹೋಗಲು ಕರೆಕಳುಹಿಸಲಿಲ್ಲ? ನಾವು ನಿನ್ನ ಮನೆಯನ್ನು ನಿನ್ನನ್ನು ಸಹಿತವಾಗಿ ಬೆಂಕಿಯಿಂದ ಸುಟ್ಟುಬಿಡುತ್ತೇವೆ,” ಎಂದರು.
2ಯೆಫ್ತಾಹನು ಅವರಿಗೆ, “ನನಗೂ, ನಮ್ಮ ಜನರಿಗೂ ಅಮ್ಮೋನಿಯರ ಸಂಗಡ ದೊಡ್ಡ ವ್ಯಾಜ್ಯವಿರುವಾಗ, ನಾನು ನಿಮ್ಮನ್ನು ಕರೆದೆನು. ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ.
3ನೀವು ನನ್ನನ್ನು ರಕ್ಷಿಸುವುದಿಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ಅಮ್ಮೋನಿಯರಿಗೆ ವಿರೋಧವಾಗಿ ಹೋದೆನು. ಯೆಹೋವ ದೇವರು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ನೀವು ನನ್ನ ಸಂಗಡ ಯುದ್ಧಮಾಡುವುದಕ್ಕೆ ಈ ಹೊತ್ತು ನನಗೆ ವಿರೋಧವಾಗಿ ಏಕೆ ಬಂದಿರಿ?” ಎಂದನು.
4ಆಗ ಯೆಫ್ತಾಹನು ಗಿಲ್ಯಾದ್ ಜನರೆಲ್ಲರನ್ನು ಕೂಡಿಸಿ, ಎಫ್ರಾಯೀಮ್ಯರ ಸಂಗಡ ಯುದ್ಧಮಾಡಿದನು. ಏಕೆಂದರೆ, “ಎಫ್ರಾಯೀಮ್ಯರನ್ನು ಮನಸ್ಸೆಯವರ ಮಧ್ಯದಲ್ಲಿದ್ದ ಗಿಲ್ಯಾದ್ಯರಾದ ನೀವು ಸ್ವಕುಲವನ್ನು ಬಿಟ್ಟು ತಪ್ಪಿಸಿಕೊಂಡವರಾಗಿದ್ದೀರಿ,” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಎಫ್ರಾಯೀಮ್ಯರನ್ನು ಹೊಡೆದರು.
5ಗಿಲ್ಯಾದ್ಯರು ಎಫ್ರಾಯೀಮ್ಯರಿಗೆ ಮುಂದುಗಡೆ ಯೊರ್ದನ್ ನದಿ ರೇವುಗಳನ್ನು ಹಿಡಿದರು. ಆಗ ಏನಾಯಿತೆಂದರೆ, ಎಫ್ರಾಯೀಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು, “ದಾಟುತ್ತೇನೆ,” ಎಂದು ಹೇಳಿದರೆ, ಗಿಲ್ಯಾದ್ಯರು, “ನೀನು ಎಫ್ರಾಯೀಮ್ಯನೋ?” ಎಂದು ಅವನನ್ನು ಕೇಳುತ್ತಿದ್ದರು. ಅವನು, “ಇಲ್ಲ,” ಎಂದರೆ, ಅವನಿಗೆ, “ನೀನು ಷಿಬ್ಬೋಲೆತ್ ಅನ್ನು,” ಎಂದು ಹೇಳುತ್ತಿದ್ದರು.
6ಆಗ ಅವನು ಹಾಗೆ ಹೇಳಲಾರದೆ, “ಸಿಬ್ಬೋಲೆತ್,” ಎಂದು ಉಚ್ಛರಿಸುವವನನ್ನು ಹಿಡಿದು ಯೊರ್ದನ್ ನದಿ ರೇವುಗಳ ಬಳಿಯಲ್ಲಿ ಕೊಂದುಹಾಕುತ್ತಿದ್ದರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ನಾಶವಾದರು.
7ಯೆಫ್ತಾಹನು ಇಸ್ರಾಯೇಲರಿಗೆ ಆರು ವರ್ಷ ನ್ಯಾಯತೀರಿಸಿದನು. ಅನಂತರ ಗಿಲ್ಯಾದ್ಯನಾದ ಯೆಫ್ತಾಹನು ಮರಣಹೊಂದಿದನು. ಅವನ ಶವವನ್ನು ಗಿಲ್ಯಾದ್ ಪಟ್ಟಣಗಳ ಒಂದರಲ್ಲಿ ಸಮಾಧಿಮಾಡಿದರು.
8ಅವನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲಿಗೆ ನ್ಯಾಯತೀರಿಸಿದನು.
9ಅವನಿಗೆ ಮೂವತ್ತು ಮಂದಿ ಪುತ್ರರು, ಮೂವತ್ತು ಮಂದಿ ಪುತ್ರಿಯರು ಇದ್ದರು. ಪುತ್ರಿಯರನ್ನು ಹೊರಗೆ ಮದುವೆ ಮಾಡಿಕೊಟ್ಟನು; ಹೊರಗಿನಿಂದ ಮೂವತ್ತು ಮಂದಿ ಕನ್ಯೆಯರನ್ನು ತನ್ನ ಪುತ್ರರಿಗೆ ತೆಗೆದುಕೊಂಡನು. ಅವನು ಇಸ್ರಾಯೇಲಿಗೆ ಏಳು ವರ್ಷ ನ್ಯಾಯತೀರಿಸಿದನು.
10ನಂತರ ಇಬ್ಚಾನನು ಮರಣಹೊಂದಿ ಬೇತ್ಲೆಹೇಮಿನಲ್ಲಿ ಸಮಾಧಿಯಾದನು.
11ಅವನ ತರುವಾಯ ಜೆಬುಲೂನಿನವನಾದ ಏಲೋನನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಅವನು ಹತ್ತು ವರ್ಷಗಳು ಇಸ್ರಾಯೇಲಿಗೆ ನ್ಯಾಯತೀರಿಸಿದನು.
12ಜೆಬುಲೂನಿನವನಾದ ಏಲೋನನು ಮರಣಹೊಂದಿ, ಜೆಬುಲೂನ್ ದೇಶವಾದ ಅಯ್ಯಾಲೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು.
13ಅವನ ತರುವಾಯ ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಇಸ್ರಾಯೇಲಿಗೆ ನ್ಯಾಯತೀರಿಸಿದನು.
14ಅವನಿಗೆ ಎಪ್ಪತ್ತು ಕತ್ತೆಗಳ ಮೇಲೆ ಏರುವ ನಾಲ್ವತ್ತು ಮಂದಿ ಮಕ್ಕಳೂ, ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲಿಗೆ ಎಂಟು ವರ್ಷ ನ್ಯಾಯತೀರಿಸಿದನು.
15ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಮರಣಹೊಂದಿ, ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.