Elderly Joshua giving farewell counsel to Israel’s leaders beneath a broad tree

ಯೆಹೋಶುವ 23

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ವೃದ್ಧಾಪ್ಯದಲ್ಲಿ ಯೆಹೋಶುವನು ಇಸ್ರಾಯೇಲಿನ ನಾಯಕರನ್ನು ಒಟ್ಟುಗೂಡಿಸಿ, ದೇವರು ಅವರಿಗಾಗಿ ಹೋರಾಡಿ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದರೆಂದು ನೆನಪಿಸುತ್ತಾನೆ. ಅವನು ಧೈರ್ಯದ ವಿಧೇಯತೆ, ಪ್ರತ್ಯೇಕ ನಿಷ್ಠೆ ಮತ್ತು ದೇವರ ಪ್ರೀತಿಗೆ ಒತ್ತಾಯಿಸಿ, ರಾಜಿ ಮತ್ತು ಒಡಂಬಡಿಕೆಯ ಅವಿಶ್ವಾಸವು ತೀವ್ರ ಪರಿಣಾಮಗಳನ್ನು ತರುವುದೆಂದು ಎಚ್ಚರಿಸುತ್ತಾನೆ.
ವಿದಾಯನಂಬಿಗಸ್ತಿಕೆವಿಧೇಯತೆಒಡಂಬಡಿಕೆಯ ಎಚ್ಚರಿಕೆ
1ಯೆಹೋವ ದೇವರು ಇಸ್ರಾಯೇಲರನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ, ಅವರಿಗೆ ವಿಶ್ರಾಂತಿಕೊಟ್ಟ ಬಹಳ ದಿವಸಗಳ ತರುವಾಯ ಯೆಹೋಶುವನ ದಿವಸಗಳು ಗತಿಸಿ ವೃದ್ಧನಾದನು.
2ಒಂದು ದಿನ ಅವನು ಸಮಸ್ತ ಇಸ್ರಾಯೇಲರನ್ನೂ ಅವರ ಹಿರಿಯರನ್ನೂ ಅವರ ಮುಖ್ಯಸ್ಥರನ್ನೂ ಅವರ ನ್ಯಾಯಾಧಿಪತಿಗಳನ್ನೂ ಅವರ ಅಧಿಕಾರಿಗಳನ್ನೂ ಕರೆಯಿಸಿ ಅವರಿಗೆ, “ನಾನು ದಿನತುಂಬಿದ ವೃದ್ಧನಾಗಿದ್ದೇನೆ.
3ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಈ ಸಕಲ ಜನಾಂಗಗಳಿಗೆ ಮಾಡಿದ ಎಲ್ಲವನ್ನೂ ನೋಡಿದ್ದೀರಿ. ನಿಮಗೋಸ್ಕರವಾಗಿ ಯುದ್ಧ ಮಾಡಿದವರು ನಿಮ್ಮ ದೇವರಾದ ಯೆಹೋವ ದೇವರು.
4ನಾನು ಯೊರ್ದನ್ ನದಿ ಮೊದಲುಗೊಂಡು ಪಶ್ಚಿಮಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ರಾಷ್ಟ್ರಗಳನ್ನು ಸೋಲಿಸಿ, ಉಳಿದ ಸಕಲ ನಾಡನ್ನು ನಿಮ್ಮ ಗೋತ್ರಗಳಿಗೆ ಸೊತ್ತಾಗಿ ಕೊಟ್ಟಿದ್ದೇನೆ.
5ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ಉಳಿದವರನ್ನು ನಿಮ್ಮ ಮುಂದೆ ತಳ್ಳಿಬಿಟ್ಟು, ನಿಮ್ಮ ಕಣ್ಣೆದುರಿನಿಂದ ಅವರನ್ನು ಹೊರಡಿಸಿ ಬಿಡುವರು. ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಹಾಗೆಯೇ ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ.
6“ನೀವು ಬಲಗೊಳ್ಳಿರಿ, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ, ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವ ಎಲ್ಲವನ್ನು ಕೈಗೊಂಡು ನಡೆಯಿರಿ.
7ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಳ್ಳಬೇಡಿರಿ. ಅವರ ದೇವರುಗಳ ಹೆಸರುಗಳನ್ನು ಸ್ಮರಿಸಲೂ ಬೇಡಿರಿ. ಅವುಗಳ ಮೇಲೆ ಆಣೆಯೂ ಇಡಬೇಡಿರಿ. ಅವುಗಳಿಗೆ ಆರಾಧನೆ ಮಾಡಬಾರದು. ಅಡ್ಡಬೀಳಲೂಬಾರದು.
8ಆದರೆ, ಈವರೆಗೂ ಹೇಗೋ ಹಾಗೆಯೇ ಇನ್ನು ಮುಂದೆಯೂ ನಿಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿರಿ.
9“ಯೆಹೋವ ದೇವರು ನಿಮ್ಮ ಮುಂದೆ ಬಲವಾದ ದೊಡ್ಡ ರಾಷ್ಟ್ರಗಳನ್ನು ಸಹ ಹೊರಡಿಸಿಬಿಟ್ಟರು. ನಿಮ್ಮ ಮುಂದೆ ಈವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.
10ನಿಮ್ಮ ದೇವರಾದ ಯೆಹೋವ ದೇವರು ತಮ್ಮ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವುದಕ್ಕೆ ಶಕ್ತನಾದನು.
11ಹೀಗಿರುವುದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವ ದೇವರನ್ನೇ ಪ್ರೀತಿಸಿರಿ.
12“ಆದರೆ, ನೀವು ದೇವರಿಂದ ತಿರುಗಿಕೊಂಡು ನಿಮ್ಮಲ್ಲಿ ಉಳಿದಿರುವ ಈ ಜನಾಂಗಗಳಲ್ಲಿ ಸೇರಿಕೊಂಡು ಅವರೊಂದಿಗೆ ಮದುವೆ ಮಾಡಿಕೊಟ್ಟರೆ, ನೀವು ಅವರ ಬಳಿಗೂ ಅವರು ನಿಮ್ಮ ಬಳಿಗೂ ಪ್ರವೇಶಿಸಿದರೆ,
13ನಿಮ್ಮ ದೇವರಾದ ಯೆಹೋವ ದೇವರು ಇನ್ನು ಮೇಲೆ ಈ ಜನಾಂಗಗಳನ್ನು ನಿಮ್ಮ ಮುಂದೆ ಹೊರಡಿಸಿಬಿಡುವುದಿಲ್ಲ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ನಾಡಿನೊಳಗಿಂದ ನೀವು ನಾಶವಾಗುವವರೆಗೂ ಅವರು ನಿಮಗೆ ಉರುಲೂ ಬೋನೂ ಆಗಿರುವರು. ಇದಲ್ಲದೆ ದೇವರು ನಿಮ್ಮ ಪಕ್ಕೆಯಲ್ಲಿ ಶೂಲವಾಗಿಯೂ ನಿಮ್ಮ ಕಣ್ಣುಗಳಿಗೆ ಮುಳ್ಳುಗಳಾಗಿಯೂ ಇರುವರೆಂದು ನಿಶ್ಚಯವಾಗಿ ತಿಳಿದುಕೊಳ್ಳುವಿರಿ.
14“ಭೂನಿವಾಸಿಗಳೆಲ್ಲರು ಹೋಗುವ ಮಾರ್ಗವಾಗಿ ಇಂದು ನಾನು ಹೋಗಬೇಕಾಗಿದೆ. ನಿಮ್ಮ ದೇವರಾದ ಯೆಹೋವ ದೇವರು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೆಯ ವಾಗ್ದಾನಗಳಲ್ಲಿ ಒಂದೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ. ಅವುಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು.
15ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದ ಒಳ್ಳೆಯ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ
16ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಒಡಂಬಡಿಕೆಯನ್ನು ನೀವು ಉಲ್ಲಂಘಿಸಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಈ ಒಳ್ಳೆಯ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಅವರು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವರು. ಯೆಹೋವ ದೇವರ ಕೋಪವು ನಿಮ್ಮ ಮೇಲೆ ಉರಿಯುವುದು. ಅವರು ನಿಮಗೆ ಕೊಟ್ಟ ಒಳ್ಳೆಯ ದೇಶದಿಂದ ನೀವು ಬೇಗನೆ ನಾಶವಾಗಿಹೋಗುವಿರಿ,” ಎಂದನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.