
ಯೋಹಾನ 2
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕಾನಾದ ಮದುವೆಯಲ್ಲಿ ಯೇಸು ನೀರನ್ನು ದ್ರಾಕ್ಷಾರಸವಾಗಿ ಮಾಡಿ ಶಿಷ್ಯರಿಗೆ ತನ್ನ ಮಹಿಮೆಯನ್ನು ಪ್ರಕಟಿಸುತ್ತಾನೆ. ಯೆರೂಸಲೇಮಿನಲ್ಲಿ ದೇವಾಲಯದ ಅಂಗಳಗಳಿಂದ ವ್ಯಾಪಾರವನ್ನು ಓಡಿಸಿ, ತನ್ನ ದೇಹದ ದೇವಾಲಯವನ್ನು ಎಬ್ಬಿಸುವ ಬಗ್ಗೆ ಮಾತನಾಡಿ, ಜನರ ಒಳಗಿರುವುದನ್ನು ತಿಳಿದಿರುತ್ತಾನೆ.
ಕಾನಾದ ಮದುವೆಮೊದಲ ಸೂಚಕಕಾರ್ಯದೇವಾಲಯದ ಶುದ್ಧೀಕರಣಯೇಸುವಿನ ಅಧಿಕಾರ
1ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು.
2ಯೇಸು ಮತ್ತು ಅವರ ಶಿಷ್ಯರು ಮದುವೆಗೆ ಆಮಂತ್ರಿತರಾಗಿದ್ದರು.
3ಅಲ್ಲಿ ದ್ರಾಕ್ಷಾರಸವು ಮುಗಿದು ಹೋದಾಗ, ಯೇಸುವಿನ ತಾಯಿ, “ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ತಿಳಿಸಿದಳು.
4ಯೇಸು ಆಕೆಗೆ, “ಅಮ್ಮಾ, ನಾನು ನಿಮಗೆ ಏನು ಮಾಡಲು ಬಯಸುತ್ತೀರಿ? ನನ್ನ ಸಮಯವು ಇನ್ನೂ ಬಂದಿಲ್ಲ,” ಎಂದು ಹೇಳಿದರು.
5ಯೇಸುವಿನ ತಾಯಿಯು ಸೇವಕರಿಗೆ, “ಆತನು ನಿಮಗೆ ಹೇಳಿದಂತೆ ಮಾಡಿರಿ,” ಎಂದು ಹೇಳಿದಳು.
6ಯೆಹೂದ್ಯರ ಶುದ್ಧಾಚಾರದ ಪ್ರಕಾರ ಅಲ್ಲಿ ಕಲ್ಲಿನ ಆರು ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಡದ ಅಳತೆಯುಳ್ಳದ್ದಾಗಿತ್ತು.
7ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದರು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.
8ಅನಂತರ ಯೇಸು ಅವರಿಗೆ, “ಈಗ ಇದನ್ನು ತೆಗೆದುಕೊಂಡು ಔತಣದ ಮೇಲ್ವಿಚಾರಕನಿಗೆ ಕೊಡಿರಿ,” ಎಂದರು. ಸೇವಕರು ತೆಗೆದುಕೊಂಡು ಹೋದರು.
9ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂತೆಂದು ಅವನಿಗೆ ತಿಳಿದಿರಲಿಲ್ಲ. ಆದರೆ ನೀರನ್ನು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು,
10“ಪ್ರತಿಯೊಬ್ಬನು ಉತ್ತಮ ದ್ರಾಕ್ಷಾರಸವನ್ನು ಮೊದಲು ತಂದಿಟ್ಟು ಜನರು ತುಂಬಾ ಕುಡಿದ ಮೇಲೆ ಸಾಧಾರಣವಾದದ್ದನ್ನು ಕೊಡುತ್ತಾರೆ, ನೀನಾದರೋ ಉತ್ತಮ ದ್ರಾಕ್ಷಾರಸವನ್ನು ಇನ್ನೂ ಇಟ್ಟುಕೊಂಡಿರುವೆ,” ಎಂದನು.
11ಯೇಸು ಗಲಿಲಾಯದ ಕಾನಾದಲ್ಲಿ ಮಾಡಿದ ಸೂಚಕಕಾರ್ಯಗಳಲ್ಲಿ ಇದು ಮೊದಲನೆಯದಾಗಿತ್ತು. ಹೀಗೆ ಯೇಸು ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಯೇಸುವಿನ ಶಿಷ್ಯರು ಅವರಲ್ಲಿ ನಂಬಿಕೆಯಿಟ್ಟರು.
12ಇದಾದ ಮೇಲೆ ಯೇಸು ತಮ್ಮ ತಾಯಿ, ಸಹೋದರರು ಮತ್ತು ಶಿಷ್ಯರೊಡನೆ ಕಪೆರ್ನೌಮಿಗೆ ಹೋದರು. ಅಲ್ಲಿ ಅವರು ಕೆಲವು ದಿವಸ ಇದ್ದರು.
13ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋದರು.
14ಅವರು ದೇವಾಲಯದ ಅಂಗಳದಲ್ಲಿ ದನ, ಕುರಿ ಹಾಗೂ ಪಾರಿವಾಳಗಳನ್ನು ಮಾರುವವರೂ ಹಣ ಬದಲಾಯಿಸುವವರೂ ಕುಳಿತಿರುವುದನ್ನು ಕಂಡರು.
15ಯೇಸು ಹಗ್ಗಗಳಿಂದ ಕೊರಡೆ ಮಾಡಿ ಕುರಿ, ದನ ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ, ಹಣ ಬದಲಾಯಿಸುವವರ ನಾಣ್ಯಗಳನ್ನು ಮತ್ತು ಮೇಜುಗಳನ್ನು ಕೆಡವಿದರು.
16ಯೇಸು ಪಾರಿವಾಳ ಮಾರುವವರಿಗೆ, “ಇವುಗಳನ್ನು ತೆಗೆದುಕೊಂಡು ಹೋಗಿರಿ, ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯನ್ನಾಗಿ ಮಾಡಬೇಡಿರಿ,” ಎಂದರು.
17ಯೇಸುವಿನ ಶಿಷ್ಯರು, “ನಿನ್ನ ಆಲಯದ ಮೇಲಿನ ಆಸಕ್ತಿಯು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,” ಎಂದು ಪವಿತ್ರ ವೇದದಲ್ಲಿ ಬರೆದಿರುವುದನ್ನು ಜ್ಞಾಪಕಮಾಡಿಕೊಂಡರು.
18ಆಗ ಯೆಹೂದ್ಯರು ಯೇಸುವಿಗೆ, “ಇವುಗಳನ್ನು ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.
19ಅದಕ್ಕೆ ಯೇಸು ಅವರಿಗೆ, “ಈ ದೇವಾಲಯವನ್ನು ಕೆಡವಿರಿ. ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು,” ಎಂದು ಉತ್ತರಕೊಟ್ಟರು.
20ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳಾದವು. ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆಯೋ?” ಎಂದರು.
21ಆದರೆ ಯೇಸು ತಮ್ಮ ದೇಹವೆಂಬ ಆಲಯವನ್ನು ಕುರಿತು ಹೇಳಿದ್ದರು.
22ಆದ್ದರಿಂದ ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದಾಗ, ಅವರ ಶಿಷ್ಯರು ಅವರು ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಪವಿತ್ರ ವೇದವನ್ನೂ ಯೇಸು ತಮಗೆ ಹೇಳಿದ ಮಾತನ್ನೂ ನಂಬಿದರು.
23ಯೇಸು ಪಸ್ಕಹಬ್ಬದಂದು ಯೆರೂಸಲೇಮಿನಲ್ಲಿದ್ದಾಗ ಮಾಡಿದ ಸೂಚಕಕಾರ್ಯಗಳನ್ನು ಅನೇಕರು ಕಂಡು ಅವರ ಹೆಸರಿನಲ್ಲಿ ನಂಬಿಕೆ ಇಟ್ಟರು.
24ಆದರೆ ಯೇಸು ಎಲ್ಲರನ್ನೂ ಅರಿತವರಾದ್ದರಿಂದ ತಮ್ಮನ್ನು ಒಪ್ಪಿಸಿಕೊಡಲಿಲ್ಲ.
25ಯೇಸು ಮನುಷ್ಯರ ಅಂತರಂಗವನ್ನು ತಿಳಿದವರಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಅವರಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.