
ಯೋಬ 8
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ನ್ಯಾಯವನ್ನು ವಕ್ರಗೊಳಿಸುವುದಿಲ್ಲ ಎಂದು ಬಿಲ್ದದನು ಒತ್ತಿಹೇಳುತ್ತಾನೆ ಮತ್ತು ಯೋಬನ ಮಕ್ಕಳು ತಮ್ಮ ಸ್ವಂತ ಪಾಪದಿಂದ ಸತ್ತರು ಎಂದು ಸೂಚಿಸುತ್ತಾನೆ. ಹಿಂದಿನ ತಲೆಮಾರುಗಳ ಜ್ಞಾನವನ್ನು ಉಲ್ಲೇಖಿಸಿ, ಭಕ್ತಿಹೀನರನ್ನು ನೀರಿಲ್ಲದೆ ಬಾಡುವ ಜೊಂಡಿಗೆ ಹೋಲಿಸುತ್ತಾನೆ ಮತ್ತು ಯೋಬನು ಶುದ್ಧನಾಗಿದ್ದರೆ ದೇವರು ಇನ್ನೂ ಅವನ ಬಾಯನ್ನು ನಗೆಯಿಂದ ತುಂಬಿಸುವನು ಎಂದು ಭರವಸೆ ನೀಡುತ್ತಾನೆ.
ಬಿಲ್ದದಸಂಪ್ರದಾಯನ್ಯಾಯಪ್ರತಿಫಲ
1ಆಗ, ಶೂಹ್ಯನಾದ ಬಿಲ್ದದನು ಈ ಪ್ರಕಾರ ಉತ್ತರಕೊಟ್ಟನು:
2“ನೀನು ಎಷ್ಟರವರೆಗೆ ಇವುಗಳನ್ನು ನುಡಿಯುತ್ತಿರುವೆ? ನೀನು ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ.
3ದೇವರು ತೀರ್ಪಿಗೆ ವಿರುದ್ಧವಾದದ್ದನ್ನು ಮಾಡುತ್ತಾರೋ? ಸರ್ವಶಕ್ತರು ನೀತಿಗೆ ವಿರುದ್ಧವಾದದ್ದನ್ನು ಮಾಡುವರೋ?
4ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪಮಾಡಿದ್ದರೆ, ದೇವರು ಅವರ ಪಾಪಕ್ಕಾಗಿ ಅವರನ್ನು ದಂಡಿಸುವರು.
5ಆದರೆ ನೀನೇ ದೇವರನ್ನು ಜಾಗ್ರತೆಯಾಗಿ ಹುಡುಕಿ, ಸರ್ವಶಕ್ತರಿಗೆ ಬಿನ್ನಹ ಮಾಡು.
6ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ, ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.
7ನಿನ್ನ ಆರಂಭವು ಅಲ್ಪವಾಗಿದ್ದರೂ, ನಿನ್ನ ಅಂತ್ಯವು ಬಹಳವಾಗಿ ವೃದ್ಧಿ ಹೊಂದುವುದು.
8“ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಲಿತಿದ್ದನ್ನು ಕಂಡುಕೊಳ್ಳುವುದಕ್ಕೆ ಸಿದ್ಧನಾಗು.
9ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯದವರೂ ಆಗಿದ್ದೇವೆ; ಏಕೆಂದರೆ ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿನಂತಿವೆ.
10ಪೂರ್ವಿಕರು ನಿನಗೆ ಬೋಧಿಸಿ ಬುದ್ಧಿ ಹೇಳಲಿಲ್ಲವೋ? ಅವರು ತಮ್ಮ ತಿಳುವಳಿಕೆಯನ್ನು ಹೊರತರಲಿಲ್ಲವೋ?
11ಕೆಸರಿಲ್ಲದೆ ಆಪು ಹುಲ್ಲು ಬೆಳೆಯುವುದೋ? ನೀರಿಲ್ಲದೆ ಜಂಬು ಹುಲ್ಲು ಮೊಳೆಯುವುದೋ?
12ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ, ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಒಣಗಿಹೋಗುವುದು.
13ದೇವರನ್ನು ಮರೆಯುವವರೆಲ್ಲರ ದಾರಿ ಹಾಗೆಯೇ; ಭಕ್ತಿಹೀನರ ನಿರೀಕ್ಷೆಯು ನಾಶವಾಗುವುದು.
14ಅಂಥವರ ಭರವಸೆಯು ಭಂಗವಾಗುವುದು ; ಅವರ ಆಶ್ರಯವು ಜೇಡರ ಹುಳದ ಮನೆಯಂತಿರುವುದು.
15ಅಂಥಾ ಮನೆ ಮೇಲೆ ಒರಗಿಕೊಂಡರೆ, ಅದು ನಿಲ್ಲದು; ಅದನ್ನು ಬಿಗಿಹಿಡಿದರೆ, ಅದು ತಡೆಯಲಾರದು.
16ಸೂರ್ಯನ ಮುಂದೆ ಭಕ್ತಿಹೀನರು ಹಸುರು ಬಳ್ಳಿಯಂತೆ ಇದ್ದಾರೆ; ಆ ಬಳ್ಳಿಯು ತೋಟದಲ್ಲೆಲ್ಲಾ ಹಬ್ಬುತ್ತಿದೆ.
17ಅವರ ಬೇರುಗಳು ಬಂಡೆಗಳ ರಾಶಿಯ ಮೇಲೆ ಸುತ್ತಿ, ಕಲ್ಲುಗಳ ನಡುವೆ ನುಗ್ಗುತ್ತವೆ.
18ಭಕ್ತಿಹೀನನನ್ನು ಅವನ ಸ್ಥಳದಿಂದ ಕಿತ್ತುಹಾಕಿದರೆ, ‘ನಾನು ನಿನ್ನನ್ನು ಎಂದಿಗೂ ನೋಡಿಲ್ಲ,’ ಎಂದು ಆ ನೆಲವು ಅವನನ್ನು ಅಲ್ಲಗಳೆಯುವುದು.
19ಹೀಗೆ ಭಕ್ತಿಹೀನನ ಜೀವವು ಒಣಗಿಹೋಗುವುದು; ಆದರೆ ಆ ಮಣ್ಣಿನ ನೆಲದಿಂದ ಬೇರೆ ಸಸಿಗಳು ಮೊಳೆಯುವುದು.
20“ದೇವರು ನಿರ್ದೋಷಿಯನ್ನು ತಿರಸ್ಕರಿಸುವುದಿಲ್ಲ; ಕೆಡುಕರ ಕೈಗಳನ್ನು ದೇವರು ಬಲಪಡಿಸುವದಿಲ್ಲ.
21ದೇವರು ನಿನ್ನ ಬಾಯನ್ನು ನಗೆಯಿಂದ ತುಂಬಿಸುವರು; ನಿನ್ನ ತುಟಿಗಳನ್ನು ಜಯ ಧ್ವನಿಯಿಂದಲೂ ತುಂಬಿಸುವರು.
22ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.