Job standing before a luminous whirlwind spanning sea, earth, snow, and stars

ಯೋಬ 38

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರಿಸುತ್ತಾನೆ, ವಿವರಣೆಗಳ ಬದಲು ಪ್ರಶ್ನೆಗಳಿಂದ ಉತ್ತರಿಸುತ್ತಾನೆ. ಭೂಮಿಗೆ ಅಸ್ತಿವಾರ ಹಾಕಿದಾಗ, ಸಮುದ್ರವನ್ನು ಬಾಗಿಲುಗಳ ಹಿಂದೆ ಮುಚ್ಚಿದಾಗ, ಬೆಳಕಿಗೂ ಕತ್ತಲೆಗೂ ಸ್ಥಳಗಳನ್ನು ಕೊಟ್ಟಾಗ ಯೋಬನು ಎಲ್ಲಿದ್ದನು? ಪ್ರಶ್ನೆಗಳು ಹಿಮ, ಮಳೆ, ನಕ್ಷತ್ರಪುಂಜಗಳು, ಸಿಂಹದ ಬೇಟೆ ಮತ್ತು ಆಹಾರಕ್ಕಾಗಿ ಕೂಗುವ ಕಾಗೆಯ ಮರಿಗಳ ಮೂಲಕ ಮುಂದುವರಿಯುತ್ತವೆ.
ಬಿರುಗಾಳಿಸೃಷ್ಟಿದೈವಿಕ ಜ್ಞಾನಮಾನವ ಮಿತಿಗಳು
1ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಹೀಗೆಂದು ಉತ್ತರಕೊಟ್ಟರು:
2“ಅಜ್ಞಾನದ ಮಾತುಗಳಿಂದ ನನ್ನ ಯೋಜನೆಗಳನ್ನು ಮಂಕುಮಾಡುವ ನೀನು ಯಾರು?
3ಶೂರನ ಹಾಗೆ ನಡುವನ್ನು ಕಟ್ಟಿಕೋ, ನಾನು ನಿನ್ನನ್ನು ಪ್ರಶ್ನೆಮಾಡುವೆನು; ನೀನೇ ನನಗೆ ಉತ್ತರಕೊಡು.
4“ನಾನು ಭೂಮಿಗೆ ಅಸ್ತಿವಾರ ಹಾಕಿದಾಗ, ನೀನು ಎಲ್ಲಿ ಇದ್ದೀ? ನಿನಗೆ ತಿಳುವಳಿಕೆ ಇದ್ದರೆ ನನಗೆ ಹೇಳು.
5ಭೂಮಿಯ ಅಳತೆಯನ್ನು ಗೊತ್ತುಮಾಡಿದವರು ಯಾರು? ನಿಶ್ಚಯವಾಗಿ ನಿನಗೆ ಗೊತ್ತಿರಬೇಕಲ್ಲಾ? ಭೂಮಿಯ ಮೇಲೆ ನೂಲು ಹಿಡಿದವರು ಯಾರು?
6ಯಾವುದರ ಮೇಲೆ ಭೂಮಿಯ ಅಸ್ತಿವಾರ ಸ್ಥಿರಪಡಿಸಲಾಗಿದೆ? ಅದಕ್ಕೆ ಮೂಲೆಗಲ್ಲನ್ನು ಇಟ್ಟವರು ಯಾರು?
7ಉದಯದ ನಕ್ಷತ್ರಗಳು ಕೂಡಿ ಹಾಡುತ್ತಿರುವಾಗ, ದೇವದೂತರೆಲ್ಲರೂ ಹರ್ಷಧ್ವನಿಮಾಡುತ್ತಿರುವಾಗ, ಭೂಮಿಗೆ ಮೂಲೆಗಲ್ಲು ಹಾಕಿದವರಾರು?
8“ಭೂಗರ್ಭವನ್ನು ನುಗ್ಗಿಕೊಂಡು ಬಂದ, ಸಮುದ್ರವನ್ನು ದ್ವಾರಗಳಿಂದ ಮುಚ್ಚಿದವರು ಯಾರು?
9ನಾನು ಸಮುದ್ರಕ್ಕೆ ಮೇಘವನ್ನು ವಸ್ತ್ರವನ್ನಾಗಿ ತೊಡಿಸಿ, ಅದಕ್ಕೆ ಕಾರ್ಗತ್ತಲನ್ನು ಉಡಿಸಿದೆನು.
10ನಾನು ಸಮುದ್ರಕ್ಕೆ ಮಿತಿಗಳನ್ನು ನಿಗದಿಪಡಿಸಿ, ಅಗುಳಿಗಳನ್ನೂ, ಬಾಗಿಲುಗಳನ್ನೂ ಇಟ್ಟೆನು.
11‘ಇಲ್ಲಿಯ ತನಕ ಬರಬಹುದು, ಇದನ್ನು ಮೀರಿ ಬರಕೂಡದು; ಇಲ್ಲಿಗೇ ನಿನ್ನ ತೆರೆಗಳ ಹೆಮ್ಮೆ ನಿಲ್ಲಲಿ,’ ಎಂದು ಆಜ್ಞಾಪಿಸಿದೆನು.
12“ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ, ‘ಅರುಣೋದಯವಾಗಲಿ,’ ಎಂದು ಆಜ್ಞಾಪಿಸಿರುವೆಯಾ? ಮುಂಜಾನೆಯ ಬೆಳಗಿಗೆ ಅದರ ಸ್ಥಳವನ್ನು ತಿಳಿಯಪಡಿಸಿರುವೆಯಾ?
13‘ದುಷ್ಟರನ್ನು ಅದರೊಳಗಿಂದ ಒದರಿಬಿಡು,’ ಎಂದು ನೀನು ಭೂಮಿಯ ಅಂಚುಗಳನ್ನು ಹಿಡಿದು ಉದಯಕ್ಕೆ ಎಂದಾದರೂ ಅಪ್ಪಣೆಮಾಡಿದೆಯಾ?
14ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪ ತಾಳುತ್ತದೆ; ನೆರಿಗೆ ಕಟ್ಟಿದ ಉಡಿಗೆಯಂತೆ ಭೂಮಿಯ ವಿಶೇಷತೆಗಳು ಕಾಣಿಸುತ್ತವೆ.
15ಅದರಂತೆ ದುಷ್ಟರಿಗೆ ಬೆಳಕು ನಿರಾಕರಿಸಲಾಗುವುದು; ಅವರ ಹಿಂಸಾಚಾರವೂ ಮುರಿದು ಹೋಗುವುದು.
16“ನೀನು ಎಂದಾದರೂ ಸಮುದ್ರದ ಬುಗ್ಗೆಗಳಲ್ಲಿ ನಡೆದಿರುವೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ?
17ನಿನಗೆ ಮರಣದ ಬಾಗಿಲುಗಳು ತೋರಿಸಲಾಗಿದೆಯೋ? ಘೋರಾಂಧಕಾರದ ಬಾಗಿಲುಗಳನ್ನು ನೀನು ಕಂಡಿರುವೆಯೋ?
18ಭೂವಿಸ್ತಾರಗಳನ್ನು ನೀನು ಗ್ರಹಿಸಿರುವೆಯೋ? ಇದನ್ನೆಲ್ಲಾ ನೀನು ತಿಳಿದಿದ್ದರೆ ನನಗೆ ಹೇಳು ನೋಡೋಣ.
19“ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
20ನೀನು ಬೆಳಕನ್ನೂ ಕತ್ತಲನ್ನೂ ಅವುಗಳ ಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅವು ತಮ್ಮ ಮನೆಗಳಿಗೆ ಹೋಗುವ ಹಾದಿಗಳನ್ನು ನೀನು ಬಲ್ಲೆಯಾ?
21ನಿಜವಾಗಿಯೂ ನೀನು ಆಗ ಹುಟ್ಟಿದ್ದರೆ, ಇವೆಲ್ಲಾ ನಿನಗೆ ಗೊತ್ತಾಗುತಿತ್ತು. ಮತ್ತು ಈಗ ನೀನು ಬಹಳ ವರ್ಷಗಳ ವೃದ್ಧನಾಗಿರುತ್ತಿದ್ದೆ.
22“ಯೋಬನೇ, ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿರುವೆಯಾ? ಕಲ್ಮಳೆಯ ಉಗ್ರಾಣಗಳನ್ನು ನೋಡಿರುವೆಯಾ?
23ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿ ಇಟ್ಟಿರುವೆನು; ಯುದ್ಧಕದನಗಳ ದಿನಗಳಿಗಾಗಿಯೂ ಕಾದಿಟ್ಟಿರುವೆನು.
24ಬೆಳಕಿನ ಮೂಲ ಮಾರ್ಗ ಎಲ್ಲಿದೆ? ಪೂರ್ವ ಗಾಳಿಯ ಮಾರ್ಗವು ಯಾವುದು?
25ಮಳೆಯ ಪ್ರವಾಹಕ್ಕೆ ಕಾಲುವೆಗಳನ್ನು ಕಡಿದವರು ಯಾರು? ಸಿಡಿಲಿಗೆ ಮಾರ್ಗವನ್ನು ನೇಮಿಸಿದವರು ಯಾರು?
26ಮಳೆ ಮನುಷ್ಯರಿಲ್ಲದ ಕಾಡಿನಲ್ಲಿಯೂ ನಿರ್ಜನ ಪ್ರದೇಶದಲ್ಲಿಯೂ, ಸುರಿಯುವುದು.
27ಹಾಳು ಬೈಲುಗಳಿಗೆ ತೃಪ್ತಿಯನ್ನು ಉಂಟುಮಾಡುವುದು; ಹಸಿರಾದ ಹುಲ್ಲನ್ನು ಮೊಳಿಸುವುದು.
28ಮಳೆಗೆ ತಂದೆ ಇದ್ದಾನೆಯೇ? ಮಂಜಿನ ಹನಿಗಳನ್ನು ಹೆತ್ತವಳಿದ್ದಾಳೆಯೆ?
29ಯಾರ ಗರ್ಭದಿಂದ ಹಿಮಗಡ್ಡೆ ಹೊರಡುತ್ತದೆ? ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು?
30ಕಲ್ಲಿನ ಹಾಗೆ ನೀರು ಗಟ್ಟಿಯಾಗುವುದು ಯಾವಾಗ? ಸಮುದ್ರದ ಮೇಲ್ಭಾಗವು ಹೆಪ್ಪುಗಟ್ಟುವುದು ಯಾವಾಗ?
31“ನೀನು ಕೃತ್ತಿಕೆಯ ಸರಪಣಿಯನ್ನು ಬಂಧಿಸಬಲ್ಲೆಯಾ? ಮೃಗಶಿರದ ಸಂಕೋಲೆಯನ್ನು ಬಿಚ್ಚಬಲ್ಲೆಯಾ?
32ನೀನು ನಕ್ಷತ್ರರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ಬರಮಾಡುವೆಯಾ? ಸಪ್ತರ್ಷಿ ತಾರೆಗಳನ್ನು ಅವುಗಳ ಪರಿವಾರ ಸಹಿತವಾಗಿ ನೀನು ನಡೆಸುವೆಯಾ?
33ಖಗೋಳದ ನಿಯಮಗಳನ್ನು ನೀನು ತಿಳಿದಿರುವೆಯಾ? ದೇವರ ಆಳಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿರುವೆಯಾ?
34“ನೀರು ಪ್ರವಾಹವಾಗಿ ನಿನ್ನನ್ನು ತಲುಪುವಂತೆ, ನಿನ್ನ ಧ್ವನಿಯೆತ್ತಿ ಮೋಡಗಳಿಗೆ ಅಪ್ಪಣೆಕೊಡುವೆಯಾ?
35ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು, ‘ಇಗೋ, ನಾವು ಇಲ್ಲಿದ್ದೇವೆ,’ ಎಂದು ನಿನಗೆ ಹೇಳುತ್ತವೆಯೋ?
36ಇಬಿಸ್ ಪಕ್ಷಿಗೆ ಜ್ಞಾನವನ್ನು ಕೊಟ್ಟವರು ಯಾರು? ಕೋಳಿಹುಂಜಕ್ಕೆ ಅರಿವನ್ನು ಕೊಟ್ಟವರು ಯಾರು?
37ಮೋಡಗಳನ್ನು ಎಣಿಸುವ ಜ್ಞಾನ ಯಾರಿಗೆ ಇದೆ? ಆಕಾಶದಲ್ಲಿನ ಬುದ್ದಲಿಗಳನ್ನು ಸಾಗಿಸುವವರು ಯಾರು?
38ಧೂಳುಮಣ್ಣನ್ನು ಒತ್ತಟ್ಟಿಗೆ ಸೇರುವಂತೆ ಮಾಡುವವರು ಯಾರು? ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಯಾರು ಮಾಡುವರು?
39“ಗುಹೆಯಲ್ಲಿ ಮಲಗಿರುವ ಸಿಂಹದ ಆಹಾರಕ್ಕೋಸ್ಕರ ನೀನು ಬೇಟೆಯಾಡುವೆಯಾ? ಪ್ರಾಯದ ಸಿಂಹಗಳ ಹಸಿವೆಯನ್ನು ನೀನು ನೀಗಿಸುವೆಯಾ?
40ಪೊದೆಯಲ್ಲಿ ಹೊಂಚು ಹಾಕಿರುವ, ಪ್ರಾಯದ ಸಿಂಹಗಳ ಹಸಿವೆಯನ್ನು ತೀರಿಸುವೆಯಾ?
41ಹಸಿದ ಕಾಗೆ ಮರಿಗಳು ಆಹಾರ ಇಲ್ಲದೆ ಅಲೆದು, ದೇವರಿಗೆ ಮೊರೆ ಇಡುವಾಗ, ತಾಯಿ ಕಾಗೆಗೆ ಆಹಾರವನ್ನು ಒದಗಿಸುವವರು ಯಾರು?

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.