Elihu pointing from human wrongdoing and kindness toward the high sky

ಯೋಬ 35

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಮಾನವ ನೀತಿಯು ದೇವರಿಗೆ ಏನನ್ನೂ ಸೇರಿಸುವುದಿಲ್ಲ ಮತ್ತು ಮಾನವ ಪಾಪವು ಅವನಿಂದ ಏನನ್ನೂ ಕಳೆಯುವುದಿಲ್ಲ, ಆದರೂ ಎರಡೂ ಇತರ ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ಎಲೀಹುವು ವಾದಿಸುತ್ತಾನೆ. ದಬ್ಬಾಳಿಕೆಗೊಳಗಾದವರು ತಮ್ಮ ಸೃಷ್ಟಿಕರ್ತನ ಕಡೆಗೆ ತಿರುಗುವ ಬದಲು ಅನೇಕ ಬಾರಿ ನೋವಿನಿಂದ ಮಾತ್ರ ಕೂಗುತ್ತಾರೆ, ಮತ್ತು ಅಹಂಕಾರದಿಂದ ಬರುವ ಖಾಲಿ ಬೇಡಿಕೆಗಳಿಗೆ ದೇವರು ಉತ್ತರಿಸುವುದಿಲ್ಲ ಎಂದು ಹೇಳುತ್ತಾನೆ.
ಎಲೀಹುಮಾನವ ನಡತೆಪ್ರಾರ್ಥನೆತಾಳ್ಮೆ
1ಎಲೀಹು ಮತ್ತೆ ಹೇಳಿದ್ದೇನೆಂದರೆ:
2“ಯೋಬನೇ, ‘ನನ್ನ ನೀತಿಯು ದೇವರ ನೀತಿಗಿಂತ ದೊಡ್ಡದು,’ ಎಂದು ನೀನು ಹೇಳಿದ್ದು ಸರಿಯೆಂದು ನೆನಸುತ್ತೀಯೋ?
3ಏಕೆಂದರೆ, ‘ನೀತಿಯಿಂದ ನನಗೇನು ಪ್ರಯೋಜನವಾಯಿತು? ನಾನು ಪಾಪಮಾಡದೆ ಇದ್ದುದರಿಂದ ನನಗೆ ಲಾಭವೇನು? ಎಂದು ನೀನು ದೇವರಿಗೆ ಕೇಳಿದಿ.’
4“ನಾನು ನಿನಗೂ, ನಿನ್ನ ಸಂಗಡ ಇರುವ ಸ್ನೇಹಿತರಿಗೂ ಈಗ ಉತ್ತರ ಕೊಡುತ್ತೇನೆ.
5ಆಕಾಶಗಳನ್ನು ದೃಷ್ಟಿಸಿ ನೋಡು; ನಿನಗಿಂತಲೂ ಎತ್ತರವಾಗಿರುವ ಮೇಘಗಳನ್ನು ದೃಷ್ಟಿಸು.
6ನೀನು ಪಾಪಮಾಡಿದರೆ, ಅದು ದೇವರನ್ನು ಹೇಗೆ ಬಾಧಿಸುತ್ತದೆ? ನಿನ್ನ ಪಾಪಗಳು ಹೆಚ್ಚಾಗಿದ್ದರೆ, ಅದು ದೇವರಿಗೆ ಏನು ಮಾಡುವುದು?
7ನೀನು ನೀತಿವಂತನಾಗಿದ್ದರೆ, ದೇವರಿಗೇನು ಕೊಟ್ಟಂತಾಯಿತು? ಅಥವಾ ದೇವರು ನಿನ್ನ ಕೈಯಿಂದ ಏನು ತೆಗೆದುಕೊಂಡಂತಾಯಿತು?
8ನಿನ್ನ ದುಷ್ಟತನವು ನಿನ್ನಂಥವರನ್ನೇ ಬಾಧಿಸುವುದು; ನಿನ್ನ ನೀತಿಯಿಂದ ಬೇರೆ ಜನರಿಗೆ ಮಾತ್ರ ಲಾಭವಾಗುವುದು.
9“ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ; ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ.
10ಆದರೆ, ‘ರಾತ್ರಿಯಲ್ಲಿ ಗೀತೆಗಳನ್ನು ಕೊಡುವ ನನ್ನ ಸೃಷ್ಟಿಕರ್ತರಾದ ದೇವರು ಎಲ್ಲಿ?
11ಭೂಮಿಯ ಮೃಗಗಳಿಗಿಂತ ನಮಗೆ ಹೆಚ್ಚು ಬುದ್ಧಿಕಲಿಸಿಕೊಡುವ ದೇವರು ಎಲ್ಲಿ? ಆಕಾಶದ ಪಕ್ಷಿಗಳಿಗಿಂತ ನಮಗೆ ಅಧಿಕ ಜ್ಞಾನವನ್ನು ಕೊಡುವ ದೇವರು ಎಲ್ಲಿ?’ ಎಂದು ಯಾರೂ ಹೇಳುವುದಿಲ್ಲ.
12ಜನರು ದುಷ್ಟರ ಸೊಕ್ಕಿನಿಂದ ನೊಂದು ಗೋಳಾಡುತ್ತಾರೆ; ಆದರೂ ದೇವರು ಅವರಿಗೆ ಉತ್ತರವನ್ನು ದಯಪಾಲಿಸುವುದಿಲ್ಲ.
13ನಿಶ್ಚಯವಾಗಿ ವ್ಯರ್ಥಮಾತನ್ನು ದೇವರು ಕೇಳುವುದಿಲ್ಲ; ಸರ್ವಶಕ್ತರು ಬರೀಮಾತನ್ನು ಲಕ್ಷಿಸುವುದಿಲ್ಲ.
14ಹೀಗಿರಲು, ‘ದೇವರು ಕಾಣುವುದಿಲ್ಲ, ನನ್ನ ವ್ಯಾಜ್ಯವು ದೇವರ ಮುಂದೆ ಇದೆ; ದೇವರಿಗಾಗಿ ಕಾದಿರುತ್ತೇನೆ,’ ಎಂದು ನೀನು ಹೇಳಿದರೆ, ದೇವರು ನಿನಗೆ ಕಿವಿಗೊಡುವರೋ?
15ದೇವರು ಕೋಪದಿಂದ ದುಷ್ಟರನ್ನು ದಂಡಿಸದೆ ಇರುವ ಕಾರಣ, ‘ಆಹಾ, ದೇವರು ದ್ರೋಹವನ್ನು ಅಷ್ಟಾಗಿ ಗಮನಿಸುವುದಿಲ್ಲ,’ ಎಂದು ನೀನು ಹೇಳುವಾಗ ದೇವರು ಕೇಳಿಸಿಕೊಳ್ಳುವರೋ?
16ಆದ್ದರಿಂದ ಯೋಬನಾದ ನೀನು ವ್ಯರ್ಥವಾಗಿ ಬಾಯಿತೆರೆದು, ತಿಳುವಳಿಕೆಯಿಲ್ಲದೆ ಬಹಳ ಮಾತಾಡಿರುವಿ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.