Bildad speaking beside an imagined landscape of traps and darkness

ಯೋಬ 18

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯೋಬನು ತಮ್ಮನ್ನು ಮೂರ್ಖ ದನಗಳಂತೆ ಕಾಣುತ್ತಾನೆ ಎಂದು ಬಿಲ್ದದನು ದೂರುತ್ತಾನೆ, ನಂತರ ದುಷ್ಟನ ಅಂತ್ಯವನ್ನು ಸ್ಪಷ್ಟ ಚಿತ್ರಗಳಲ್ಲಿ ಬಣ್ಣಿಸುತ್ತಾನೆ. ಅವನ ದೀಪ ಆರಿಹೋಗುತ್ತದೆ, ಪ್ರತಿ ಹೆಜ್ಜೆಗೂ ಬಲೆಗಳು ಕಾಯುತ್ತವೆ, ಭೀತಿ ಹಿಂದಿನಿಂದ ಅವನನ್ನು ಬೇಟೆಯಾಡುತ್ತದೆ, ರೋಗ ಅವನ ಚರ್ಮವನ್ನು ತಿನ್ನುತ್ತದೆ, ಬೆಂಕಿ ಅವನ ಗುಡಾರದ ಮೇಲೆ ನೆಲೆಸುತ್ತದೆ, ಮತ್ತು ಅವನ ಹೆಸರನ್ನು ಮುಂದುವರಿಸಲು ಯಾವ ಸಂತಾನವೂ ಉಳಿಯುವುದಿಲ್ಲ.
ಬಿಲ್ದದದುಷ್ಟರುನ್ಯಾಯತೀರ್ಪುಭೀತಿ
1ಆಗ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೀಗೆಂದನು:
2“ಯೋಬನೇ, ಈ ಮಾತುಗಳನ್ನು ನೀನು ಯಾವಾಗ ಕೊನೆಗೊಳಿಸುತ್ತೀ? ವಿವೇಕಿಯಾಗು, ಆಮೇಲೆ ಮಾತನಾಡೋಣ.
3ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?
4ಕೋಪದಿಂದ ನಿನ್ನನ್ನು ನೀನೇ ಸೀಳಿಕೊಳ್ಳುವೆಯಾ? ನಿನ್ನ ನಿಮಿತ್ತ ಭೂಮಿ ಹಾಳಾಗಬೇಕೋ? ಬಂಡೆಯು ತನ್ನ ಸ್ಥಳದಿಂದ ತೊಲಗಬೇಕೋ?
5“ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿಹೋಗುವುದು; ಅವನ ಬಾಳಿನ ಬೆಂಕಿಯ ಜ್ವಾಲೆಯು ಉರಿಯದೆ ಹೋಗುವುದು.
6ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು; ಅವನ ಮೇಲಣ ತೂಗು ದೀಪವು ಆರಿಹೋಗುವುದು.
7ಅವನ ಬಲವುಳ್ಳ ಹೆಜ್ಜೆಗಳು ದುರ್ಬಲಗೊಳ್ಳುವುದು; ಅವನ ಯೋಜನೆಗಳೇ ಅವನನ್ನು ಕೆಡವಿಹಾಕುವವು.
8ಏಕೆಂದರೆ ದುಷ್ಟನು ತನ್ನ ಹೆಜ್ಜೆಗಳಿಂದಲೇ ಬಲೆಯಲ್ಲಿ ಬೀಳುವನು; ಅವನು ಕುಣಿಯಲ್ಲಿ ಬಿದ್ದು ಅಲೆದಾಡುವನು.
9ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು; ಉರುಳು ಅವನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು.
10ನೆಲದ ಮೇಲೆ ಪಾಶವೂ, ದಾರಿಯಲ್ಲಿ ಜಾಲವೂ ಅವನಿಗೆ ಹೊಂಚಿಕೊಂಡಿರುವುವು.
11ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ, ಅವನ ಕಾಲುಗಳನ್ನು ಓಡುವಂತೆ ಮಾಡುವುವು.
12ಅವನ ಬಲವು ಕುಸಿಯುವುದು; ವಿನಾಶವು ಅವನ ಬೀಳುವಿಕೆಗಾಗಿ ಸಿದ್ಧವಾಗಿರುವುದು.
13ಅದು ಅವನ ಚರ್ಮದ ಬಲವನ್ನು ತಿಂದುಬಿಡುವುದು; ಮರಣದ ಚೊಚ್ಚಲತನವು ಅವನ ಅಂಗಾಂಗಗಳನ್ನು ನುಂಗಿಬಿಡುವುದು.
14ಅವನು ಭದ್ರತೆಯ ಗುಡಾರದಿಂದ ಹೊರಬೀಳುವನು. ಅವನು ಭಯಂಕರ ಅರಸನ ಬಳಿಗೆ ಸಾಗಬೇಕಾಗುವುದು.
15ಬೆಂಕಿಯು ಅವನ ಮನೆಯನ್ನು ಸುಡುವುದು; ಅವನ ಮನೆಯ ಮೇಲೆ ಗಂಧಕವನ್ನು ಎರಚಲಾಗುವುದು.
16ಬುಡದಿಂದ ಅವನ ಬೇರುಗಳು ಒಣಗುವುವು; ಮೇಲಿನಿಂದ ಅವನ ರೆಂಬೆಯು ಬಾಡುವುದು.
17ಅವನ ಸ್ಮರಣೆಯು ಭೂಮಿಯಿಂದ ಅಳಿದುಹೋಗುವುದು; ನಾಡಿನಲ್ಲಿ ಅವನ ಹೆಸರು ಇಲ್ಲದೆ ಹೋಗುವುದು.
18ಬೆಳಕಿನಿಂದ ಅವನನ್ನು ಕತ್ತಲೆಗೆ ದಬ್ಬಲಾಗುವುದು; ಅವನು ಲೋಕದಿಂದ ಬಹಿಷ್ಕರಿಸಲಾಗುವನು.
19ಅವನ ಜನರಲ್ಲಿ ಅವನಿಗೆ ಮಗನೂ, ಮೊಮ್ಮಗನೂ ಇರುವುದಿಲ್ಲ, ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.
20ಪಶ್ಚಿಮ ಜನರು ಅವನ ಸ್ಥಿತಿಯನ್ನು ನೋಡಿ ಆಶ್ಚರ್ಯಪಡುವರು; ಪೂರ್ವದ ಕಡೆಯವರನ್ನು ದಿಗಿಲು ಹಿಡಿಯುವುದು.
21ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು; ದೇವರನ್ನು ಅರಿಯದವನ ಸ್ಥಿತಿ ಇದೇ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.