Eliphaz accusing Job while hot wind crosses a darkening camp

ಯೋಬ 15

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಎಲೀಫಜನು ಮತ್ತೆ ಮಾತನಾಡುತ್ತಾನೆ, ಈಗ ಯೋಬನು ಭಯಭಕ್ತಿಯನ್ನು ಕುಗ್ಗಿಸುತ್ತಿದ್ದಾನೆಂದೂ ಕುತಂತ್ರದ ನಾಲಿಗೆಯಿಂದ ವಾದಿಸುತ್ತಿದ್ದಾನೆಂದೂ ಆರೋಪಿಸುತ್ತಾನೆ. ನರೆಗೂದಲಿನ ಸಂಪ್ರದಾಯದ ಅಧಿಕಾರವನ್ನು ಹಕ್ಕೆಂದು ಹೇಳಿ, ಭೀತಿಯಲ್ಲಿ ಬದುಕುವ, ಸಮೃದ್ಧಿ ಅಲ್ಪಕಾಲಿಕವಾದ ಮತ್ತು ಮನೆ ನಿರರ್ಥಕವಾಗುವ ದುಷ್ಟನ ವಿಸ್ತೃತ ಚಿತ್ರಣವನ್ನು ಅವನು ನೀಡುತ್ತಾನೆ.
ಎಲೀಫಜಆರೋಪದುಷ್ಟರುಸಂಘರ್ಷ
1ಆಗ ತೇಮಾನ್ಯನಾದ ಎಲೀಫಜನು ಹೀಗೆಂದನು:
2“ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಪೂರ್ವದಿಕ್ಕಿನ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದು ಉಂಟೋ?
3ನಿಷ್ಪ್ರಯೋಜಕವಾದ ನುಡಿಗಳಿಂದಲೂ, ಕೆಲಸಕ್ಕೆ ಬಾರದ ಮಾತುಗಳಿಂದಲೂ ಜ್ಞಾನಿಯು ವಾದಿಸುವನೋ?
4ನೀನಾದರೋ ದೇವರ ಭಯಭಕ್ತಿಯನ್ನು ಹಾಳುಮಾಡುತ್ತಿರುವೆ. ದೇವರ ಮೇಲಿನ ಭಕ್ತಿಯನ್ನು ಕಡಿಮೆ ಮಾಡುತ್ತಿರುವೆ.
5ಏಕೆಂದರೆ ನಿನ್ನ ಪಾಪವೇ ನಿನ್ನ ಬಾಯಿಯನ್ನು ಪ್ರೇರೇಪಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆಯ್ದುಕೊಳ್ಳುತ್ತಿರುವೆ.
6ನಾನಲ್ಲ, ನಿನ್ನ ಬಾಯಿಯೇ ನಿನ್ನನ್ನು ಖಂಡಿಸುತ್ತದೆ; ಹೌದು, ನಿನ್ನ ತುಟಿಗಳೇ ನಿನಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ.
7“ನೀನು ಮೊದಲು ಹುಟ್ಟಿದ ಪುರುಷನೋ? ಬೆಟ್ಟಗಳಿಗೆ ಮುಂಚಿತವಾಗಿ ಹುಟ್ಟಿದವನೋ?
8ನೀನು ದೇವರ ಆಲೋಚನಾ ಸಭೆಯಲ್ಲಿ ಸದಸ್ಯನೋ? ಜ್ಞಾನವು ನಿನಗೆ ಮಾತ್ರ ಮೀಸಲೋ?
9ನಮಗೆ ತಿಳಿಯದೆ ಇರುವುದನ್ನು ನೀನು ಏನು ತಿಳಿದುಕೊಂಡಿರುವೆ? ನಮ್ಮಲ್ಲಿ ಇಲ್ಲದ ಯಾವ ಒಳನೋಟವನ್ನು ನೀನು ಅರ್ಥಮಾಡಿಕೊಂಡಿರುವೆ?
10ತಲೆ ನರೆತವರೂ, ಹೆಚ್ಚು ಮುದುಕರಾದವರೂ, ನಿನ್ನ ತಂದೆಗಿಂತ ವೃದ್ಧರಾದವರೂ ನಮ್ಮಲ್ಲಿ ಇದ್ದಾರೆ.
11ದೇವರ ಸಂತೈಸುವಿಕೆಗಳೂ ಮೃದುವಾದ ಹಿತವಚನಗಳು ನಿನಗೆ ಸಾಕಾಗಿರುವುದಿಲ್ಲವೋ?
12ನಿನ್ನ ಹೃದಯವು ನಿನ್ನನ್ನು ಸೆಳೆದಿರುವುದು ಏಕೆ? ಏಕೆ ನಿನ್ನ ಕಣ್ಣು ಕಿಡಿಕಾರುತ್ತಿದೆ?
13ನೀನು ದೇವರ ವಿರುದ್ಧ ನಿನ್ನ ಕೋಪವನ್ನು ಹೊರಹಾಕುತ್ತಿರುವೆ? ನಿನ್ನ ಬಾಯಿಂದ ಕೋಪದ ಮಾತುಗಳನ್ನು ಹೊರಡಿಸುತ್ತೀಯಲ್ಲಾ?
14“ಮನುಷ್ಯನು ಎಷ್ಟರವನು? ಅವನು ಶುದ್ಧನಿರಲು ಸಾಧ್ಯವೇ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ?
15ದೇವರು ತಮ್ಮ ಪರಿಶುದ್ಧರನ್ನು ಆತುಕೊಂಡಿರುವುದಿಲ್ಲ; ಆಕಾಶಗಳೂ ದೇವರ ದೃಷ್ಟಿಯಲ್ಲಿ ಶುದ್ಧವಲ್ಲ.
16ಹಾಗಿರುವಾಗ, ನೀರಿನಂತೆ ಅನ್ಯಾಯವನ್ನು ಕುಡಿಯುವ ಮನುಷ್ಯನು, ದೇವರ ದೃಷ್ಟಿಯಲ್ಲಿ ಎಷ್ಟು ಅಲ್ಪನೂ ಅಶುದ್ಧನೂ ಆಗಿದ್ದಾನಲ್ಲವೇ?
17“ಕೇಳು, ನಾನು ನಿನಗೆ ವಿವರಿಸುತ್ತೇನೆ, ನಾನು ನೋಡಿದ್ದನ್ನು ನಿನಗೆ ಹೇಳುತ್ತೇನೆ,
18ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನ್ನೇ ಮರೆಮಾಡದೆ ನಮಗೆ ಪ್ರಕಟಿಸಿದರು.
19ಅವರಿಗೆ ದೇಶವು ಕೊಡಲಾಗಿತ್ತು; ಅವರ ಮಧ್ಯದಲ್ಲಿ ಅಂದು ಪರದೇಶೀಯರು ಹಾದುಹೋಗುವಂತಿರಲಿಲ್ಲ.
20ಜ್ಞಾನಿಗಳು ಹೇಳಿದ್ದೇನೆಂದರೆ: ದುಷ್ಟನು ತನ್ನ ಜೀವಮಾನವೆಲ್ಲಾ ವೇದನೆಪಡುತ್ತಾನೆ; ನಿರ್ದಯನು ತನ್ನ ವರ್ಷಗಳೆಲ್ಲ ತೊಂದರೆಗಳನ್ನು ಸಂಗ್ರಹಿಸುತ್ತಾನೆ.
21ಭಯಂಕರವಾದ ಸಂಗತಿಗಳು ಅವನ ಕಿವಿಗೆ ಬೀಳುತ್ತವೆ; ಎಲ್ಲವು ಸುಖವಾಗಿರುವಾಗ ಸುಲಿಗೆ ಮಾಡುವವನು ದುಷ್ಟನ ಮೇಲೆ ದಾಳಿ ಮಾಡುತ್ತಾನೆ.
22ಕತ್ತಲೆಯೊಳಗಿಂದ ಪಾರಾಗುತ್ತೇನೆಂದು ದುಷ್ಟನು ನಂಬುವುದಿಲ್ಲ; ಅವನ ಖಡ್ಗವು ಅವನಿಗಾಗಿ ಕಾದಿದೆ.
23ಅವನು ಆಹಾರ ಎಲ್ಲಿ ಎಂದು ರಣಹದ್ದಿನ ಹಾಗೆ ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ.
24ಇಕ್ಕಟ್ಟೂ, ಸಂಕಟವೂ ಅವನನ್ನು ಹೆದರಿಸಿ, ಆಕ್ರಮಣ ಮಾಡಲು ಸಿದ್ಧನಾದ ರಾಜನಂತೆ ತೊಂದರೆಗಳು ಅವನನ್ನು ಆವರಿಸುತ್ತವೆ,
25ಏಕೆಂದರೆ ದುಷ್ಟನು ದೇವರಿಗೆ ವಿರೋಧವಾಗಿ ಮುಷ್ಠಿ ತೋರಿಸಿದನಲ್ಲಾ, ಸರ್ವಶಕ್ತರ ಎದುರು ನಿಂತು ಶೂರನಂತೆ ಮೆರೆದನಲ್ಲಾ.
26ದೇವರ ವಿರೋಧವಾಗಿ ಬಲವುಳ್ಳ ದೊಡ್ಡ ಗುರಾಣಿಯೊಂದಿಗೆ ಓಡುತ್ತಾನೆ.
27“ದುಷ್ಟನು ತನ್ನ ಮುಖದಲ್ಲಿ ಕೊಬ್ಬೇರಿಸಿಕೊಂಡು, ತನ್ನ ಸೊಂಟದಲ್ಲಿ ಬೊಜ್ಜನ್ನು ಬೆಳೆಸಿಕೊಂಡಿದ್ದಾನೆ.
28ಹಾಳಾದ ಪಟ್ಟಣಗಳಲ್ಲಿಯೂ, ಯಾರೂ ವಾಸಿಸದ, ಕುಸಿಯಲು ಸಿದ್ಧವಾದಂಥ ಮನೆಗಳಲ್ಲಿಯೂ ವಾಸಮಾಡಿಕೊಂಡಿದ್ದಾನೆ.
29ದುಷ್ಟನು ಐಶ್ವರ್ಯವಂತನಾಗುವುದಿಲ್ಲ; ಆದರೂ ಅವನ ಆಸ್ತಿಯು ಸ್ಥಿರವಲ್ಲ; ಅವನ ಸೊತ್ತು ಭೂಮಿಯ ಮೇಲೆ ವಿಸ್ತಾರವಾಗುವುದಿಲ್ಲ.
30ಕತ್ತಲೆಯೊಳಗಿಂದ ಅವನು ಪಾರಾಗುವದಿಲ್ಲ; ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವುದು; ದೇವರ ಬಾಯಿಯ ಶ್ವಾಸದಿಂದ ಅವನು ತೊಲಗಿ ಹೋಗುವನು.
31ದುಷ್ಟನು ವ್ಯರ್ಥವಾದದ್ದನ್ನು ನಂಬಿ ಮೋಸಹೋಗದಿರಲಿ. ಏಕೆಂದರೆ, ವ್ಯರ್ಥವಾದವುಗಳಿಂದ ಅವನಿಗಾಗುವ ಪ್ರತಿಫಲವು ಶೂನ್ಯವೇ.
32ದುಷ್ಟನು ತನ್ನ ಸಮಯಕ್ಕಿಂತ ಮೊದಲು ಬತ್ತಿ ಹೋಗುವನು; ಅವನ ಕೊಂಬೆಯು ಹಸಿರಾಗಿರುವುದಿಲ್ಲ.
33ದ್ರಾಕ್ಷೆಯ ಬಳ್ಳಿಯಂತೆ ಅವನು ತನ್ನ ಮಾಗದ ಫಲವನ್ನು ಹಾಳುಮಾಡಿಕೊಳ್ಳುವನು; ದುಷ್ಟನು ಹೂವುಗಳನ್ನು ಉದುರಿಸುವ ಓಲಿವ್ ಎಣ್ಣೆಯ ಮರದ ಹಾಗೆ ಇರುವನು.
34ದೇವರಿಲ್ಲದವರ ಸಹವಾಸ ಬಂಜರು, ಬೆಂಕಿಯು ಲಂಚಕೋರರ ಮನೆಗಳನ್ನು ಸುಟ್ಟುಹಾಕುವುದು.
35ಅವರು ಹಿಂಸೆಯನ್ನು ಗರ್ಭಧರಿಸಿ, ಕೆಟ್ಟದ್ದನ್ನು ಹೆರುವರು; ಅವರ ಹೊಟ್ಟೆಯು ವಂಚನೆಯಿಂದ ತುಂಬಿರುವುದು.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.