
ಯೋಬ 13
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಸತ್ಯವನ್ನು ಮುಚ್ಚಿಹಾಕಿ ದೇವರ ಪರವಾಗಿ ಸುಳ್ಳಾಡುವ ನಿಷ್ಪ್ರಯೋಜಕ ವೈದ್ಯರೆಂದು ಯೋಬನು ತನ್ನ ಸ್ನೇಹಿತರನ್ನು ತಳ್ಳಿಹಾಕುತ್ತಾನೆ. ತನ್ನ ವ್ಯಾಜ್ಯವನ್ನು ನೇರವಾಗಿ ವಾದಿಸಲು ನಿರ್ಧರಿಸಿ, ಅದಕ್ಕಾಗಿ ಕೊಲ್ಲಲ್ಪಟ್ಟರೂ ತನ್ನ ಮಾರ್ಗವನ್ನು ಹಿಡಿದಿಟ್ಟುಕೊಳ್ಳುವೆನು ಎಂದು ಹೇಳುತ್ತಾನೆ, ಮತ್ತು ತಾನು ಮಾತನಾಡುವಂತೆ ಭೀತಿಯನ್ನು ಮಾತ್ರ ಹಿಂತೆಗೆದುಕೊಳ್ಳುವಂತೆ ದೇವರನ್ನು ಕೇಳುತ್ತಾನೆ.
ಯಥಾರ್ಥತೆಸುಳ್ಳು ಸಲಹೆದೈವಿಕ ಆಲಿಸುವಿಕೆಧೈರ್ಯ
1“ಇಗೋ, ನನ್ನ ಕಣ್ಣು ಎಲ್ಲವನ್ನು ನೋಡಿದೆ; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿದೆ.
2ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದುಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
3ನಾನು ಸರ್ವಶಕ್ತರ ಸಂಗಡ ಖಂಡಿತವಾಗಿ ಮಾತನಾಡುವೆನು; ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
4ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರು ವ್ಯರ್ಥ ವೈದ್ಯರೇ.
5ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು; ಮೌನವೇ ನಿಮಗೆ ಜ್ಞಾನವು.
6ಈಗ ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
7ದೇವರ ಪರವಾಗಿ ಮಾತಾಡುವ ನೀವು ಅನ್ಯಾಯದಿಂದ ಮಾತಾಡುವಿರೋ? ದೇವರಿಗೋಸ್ಕರ ಮಾತಾಡುವ ನೀವು ವಂಚನೆಯಿಂದ ಮಾತಾಡುವಿರೋ?
8ನೀವು ದೇವರಿಗೆ ಪಕ್ಷಪಾತವನ್ನು ತೋರಿಸುವಿರೋ? ದೇವರ ಪರವಾಗಿ ನೀವು ವಾದಿಸುವಿರೋ?
9ದೇವರು ನಿಮ್ಮನ್ನು ಶೋಧಿಸಿದರೆ, ಅದು ನಿಮಗೆ ಒಳ್ಳೇದೋ? ಒಬ್ಬ ಮನುಷ್ಯನು ಇನ್ನೊಬ್ಬನನ್ನು ವಂಚಿಸುವ ಪ್ರಕಾರ, ನೀವೂ ದೇವರನ್ನು ವಂಚಿಸುವಿರೋ?
10ನೀವು ರಹಸ್ಯವಾಗಿ ಪಕ್ಷಪಾತಮಾಡಿದರೂ, ದೇವರು ನಿಶ್ಚಯವಾಗಿಯೂ ನಿಮ್ಮನ್ನು ಖಂಡಿಸುವರು.
11ದೇವರ ವೈಭವವು ನಿಮ್ಮನ್ನು ಹೆದರಿಸುವುದಿಲ್ಲವೋ? ದೈವಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
12ನಿಮ್ಮ ನೀತಿವಚನಗಳು ಬೂದಿಯ ಗಾದೆಗಳು; ನಿಮ್ಮ ವಾದಗಳು ಬರೀ ಮಣ್ಣಿನ ಗೋಡೆಯೇ.
13“ಸುಮ್ಮನಿರಿ, ನನ್ನನ್ನು ಮಾತನಾಡಲು ಬಿಡಿರಿ; ನನಗೇನಾದರೂ ಆಗಲಿ.
14ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು; ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15ದೇವರು ನನ್ನನ್ನು ಕೊಂದರೂ, ನಾನು ದೇವರ ಮೇಲೆ ನಿರೀಕ್ಷೆಯಿಂದಿರುವೆನು; ನಾನು ನಿಶ್ಚಯವಾಗಿ ನನ್ನ ನಡತೆಯ ಒಳ್ಳೆಯತನವನ್ನು ದೇವರ ಮುಂದೆ ಸ್ಥಾಪಿಸುವೆನು.
16ಇದೇ ನನ್ನ ಬಿಡುಗಡೆಗೆ ಕಾರಣವಾಗಿರುವುದು; ಭಕ್ತಿಹೀನರು ದೇವರ ಮುಂದೆ ಬರಲು ಧೈರ್ಯಮಾಡುವುದಿಲ್ಲ.
17ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ ಮತ್ತು ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
18ಇಗೋ, ನನ್ನ ನ್ಯಾಯವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯ ಹೊಂದುವುದು ನನಗೆ ಗೊತ್ತೇ ಇದೆ.
19ಯಾರಾದರೂ ನನ್ನ ವಿರುದ್ಧ ದೂರನ್ನು ತರಬಹುದೋ? ಹಾಗಿದ್ದರೆ ನಾನು ಮೌನವಾಗಿದ್ದು ಸತ್ತು ಹೋಗುವೆನು.
20“ದೇವರೇ, ಈ ಎರಡು ಸಂಗತಿಗಳನ್ನು ಮಾತ್ರ ನನಗೆ ದಯಪಾಲಿಸಿರಿ; ಆಗ ನಿಮ್ಮಿಂದ ನಾನು ಅಡಗಿಕೊಳ್ಳುವುದಿಲ್ಲ:
21ನಿಮ್ಮ ಕೈಯನ್ನು ನನ್ನಿಂದ ದೂರಮಾಡಿರಿ; ನಿಮ್ಮ ಭಯವು ನನ್ನನ್ನು ಹೆದರಿಸದಿರಲಿ.
22ಆಮೇಲೆ ನೀವು ನನ್ನನ್ನು ಕರೆದರೆ, ನಾನು ಉತ್ತರಿಸುವೆನು; ಅಥವಾ ನಾನು ಮಾತಾಡಿದರೆ, ನೀವು ಉತ್ತರಕೊಡಿರಿ.
23ನಾನು ಎಷ್ಟೋ ಅಕ್ರಮಗಳನ್ನೂ, ಪಾಪಗಳನ್ನೂ ಮಾಡಿದ್ದೇನೆ. ನನ್ನ ಅಪರಾಧವನ್ನೂ, ಪಾಪವನ್ನೂ ನನಗೆ ತೋರಿಸಿಕೊಡಿರಿ.
24ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ? ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?
25ಗಾಳಿಯಿಂದ ಹಾರಿಹೋಗುವ ಎಲೆಯನ್ನು ತೊಂದರೆಪಡಿಸುವಿರೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿರೋ?
26ಏಕೆಂದರೆ ನನಗೆ ವಿರೋಧವಾಗಿ ಕಹಿಯಾದ ತೀರ್ಪನ್ನು ನೀವು ಬರೆದಿರುವಿರಿ; ನನ್ನ ಯೌವನದ ಪಾಪಗಳನ್ನು ನನ್ನ ಮೇಲೆ ಹೊರಿಸಿರುವಿರಿ.
27ನನ್ನ ಪಾದಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಿದ್ದೀರಿ, ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕಿದ್ದೀರಿ; ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡುತ್ತೀರಿ.
28“ಆದ್ದರಿಂದ ಮಾನವನು ಕೊಳೆತ ವಸ್ತುವಿನಂತೆಯೂ, ನುಸಿಹಿಡಿದ ಬಟ್ಟೆಯಂತೆಯೂ ಅಳಿದು ಹೋಗುತ್ತಾನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.