Zophar rebuking Job while gesturing toward a distant restored camp

ಯೋಬ 11

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ಮಾತನಾಡಿ ಯೋಬನ ಗುಪ್ತ ಅಪರಾಧವನ್ನು ಬಯಲಿಗೆ ತರಲಿ ಎಂದು ಚೋಫರನು ಗಟ್ಟಿಯಾಗಿ ಬಯಸುತ್ತಾನೆ. ಆಕಾಶಕ್ಕಿಂತ ಎತ್ತರವೂ ಪಾತಾಳಕ್ಕಿಂತ ಆಳವೂ ಆದ ದೇವರ ಆಳವಾದ ವಿಷಯಗಳನ್ನು ಯೋಬನು ಗ್ರಹಿಸಬಲ್ಲನೇ ಎಂದು ಕೇಳುತ್ತಾನೆ, ನಂತರ ಯೋಬನು ಪಾಪವನ್ನು ದೂರಮಾಡಿದರೆ ಅವನ ಜೀವನ ಮಧ್ಯಾಹ್ನಕ್ಕಿಂತ ಪ್ರಕಾಶಮಾನವಾಗುವುದು ಮತ್ತು ಅವನು ಭಯವಿಲ್ಲದೆ ಮಲಗುವನು ಎಂದು ವಾಗ್ದಾನ ಮಾಡುತ್ತಾನೆ.
ಚೋಫರಗದರಿಕೆಪಶ್ಚಾತ್ತಾಪನಿರೀಕ್ಷೆ
1ಆಗ ನಾಮಾಥ್ಯನಾದ ಚೋಫರನು ಹೀಗೆಂದನು:
2“ಬಹಳ ಮಾತುಗಳಿಂದ ಉತ್ತರ ಕೊಡಬಾರದೋ? ಬಾಯಿ ಬಡುಕನು ನೀತಿವಂತನೆಂದು ಎನಿಸಿಕೊಳ್ಳುವನೋ?
3ನಿನ್ನ ವ್ಯರ್ಥ ಮಾತಿಗೆ ಮನುಷ್ಯರು ಮೌನವಾಗಿರಬೇಕೋ? ನೀನು ಗೇಲಿ ಮಾಡುವಾಗ ಯಾವನೂ ನಿನ್ನನ್ನು ಖಂಡಿಸುವುದಿಲ್ಲವೋ?
4ಏಕೆಂದರೆ ನೀನು, ‘ನನ್ನ ನಂಬಿಕೆ ತಪ್ಪಿಲ್ಲದ್ದು, ನಿಮ್ಮ ದೃಷ್ಟಿಯಲ್ಲಿ ನಾನು ಶುದ್ಧನಾಗಿದ್ದೇನೆ,’ ಎಂದು ದೇವರಿಗೆ ಹೇಳಿದ್ದೀ.
5ಆಹಾ, ದೇವರು ಮಾತನಾಡಿ, ನಿನ್ನ ವಿರೋಧವಾಗಿ ತಮ್ಮ ತುಟಿಗಳನ್ನು ತೆರೆದು,
6ಜ್ಞಾನದ ಮರ್ಮಗಳನ್ನು ನಿನಗೆ ತೋರಿಸಿದರೆ ಒಳ್ಳೆಯದು, ನಿಜ ಜ್ಞಾನಕ್ಕೆ ಎರಡು ಬದಿಗಳಿವೆ; ದೇವರು ನಿನ್ನ ಪಾಪಗಳನ್ನು ತಮ್ಮ ಲಕ್ಷ್ಯಕ್ಕೆ ತರಲಿಲ್ಲ ಎಂದು ತಿಳಿದುಕೋ.
7“ನೀನು ದೇವರ ರಹಸ್ಯಗಳನ್ನು ಕಂಡುಕೊಳ್ಳುವಿಯಾ? ಸರ್ವಶಕ್ತರ ಮಿತಿಯನ್ನು ನಿನ್ನಿಂದ ಪರೀಕ್ಷಿಸಲಾದೀತೇ?
8ಅದು ಆಕಾಶಕ್ಕಿಂತಲೂ ಎತ್ತರವಾಗಿದೆ; ಆಗ ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳವಾಗಿದೆ; ಆಗ ನೀನೇನು ತಿಳುಕೊಳ್ಳುವಿ?
9ಅದರ ಅಳತೆ ಭೂಮಿಗಿಂತ ಉದ್ದವೂ, ಸಮುದ್ರಕ್ಕಿಂತ ಅಗಲವೂ ಆಗಿದೆ.
10“ದೇವರು ಬಂದು ನಿನ್ನನ್ನು ಸೆರೆಮನೆಯಲ್ಲಿಟ್ಟರೂ, ನ್ಯಾಯವಿಚಾರಣೆಗೆ ಕರೆದರೂ, ದೇವರನ್ನು ತಡೆಯುವವರು ಯಾರು?
11ಖಂಡಿತವಾಗಿ ದೇವರು ಮೋಸಗಾರರನ್ನು ಗುರುತಿಸುತ್ತಾರೆ; ದೇವರು ದುಷ್ಟತನವನ್ನು ನೋಡಿ ಅದನ್ನು ಗ್ರಹಿಸಿಕೊಳ್ಳದೆ ಇರುತ್ತಾರೋ?
12ಒಂದು ಕಾಡುಕತ್ತೆ ಮರಿಗೆ ಹೇಗೆ ಮನುಷ್ಯನಾಗಲು ಸಾಧ್ಯವಿಲ್ಲವೋ, ಹಾಗೆಯೇ ದಡ್ಡ ಮನುಷ್ಯನು ಜ್ಞಾನಿಯಾಗಲು ಸಾಧ್ಯವಿಲ್ಲ.
13“ಆದರೂ ನೀನು ನಿನ್ನ ಹೃದಯವನ್ನು ದೇವರಿಗೆ ಸಮರ್ಪಿಸಿ, ನಿನ್ನ ಕೈಗಳನ್ನು ದೇವರ ಕಡೆಗೆ ಚಾಚಿ,
14ನಿನ್ನ ಕೈಯಲ್ಲಿರುವ ಪಾಪವನ್ನು ದೂರಮಾಡಿಬಿಟ್ಟು, ದುಷ್ಟತನವನ್ನು ನಿನ್ನ ಗುಡಾರಗಳಲ್ಲಿ ವಾಸಿಸಲು ಅನುಮತಿಸದಿದ್ದರೆ,
15ನೀನು ದೋಷದಿಂದ ಬಿಡುಗಡೆಯಾಗಿ ನಿನ್ನ ಮುಖವನ್ನು ಎತ್ತುವಿ; ಹೌದು, ನೀನು ಸ್ಥಿರವಾಗಿದ್ದು, ಹೆದರದೆ ಇರುವಿ.
16ಖಂಡಿತವಾಗಿ ನಿನ್ನ ಕಷ್ಟವನ್ನು ಮರೆತುಬಿಡುವಿ; ಹರಿದುಹೋದ ನೀರಿನ ಹಾಗೆ ಅದನ್ನು ಜ್ಞಾಪಕಮಾಡಿಕೊಳ್ಳುವಿ.
17ನಿನ್ನ ಜೀವಮಾನವು ಮಧ್ಯಾಹ್ನಕ್ಕಿಂತ ಪ್ರಜ್ವಲಿಸುವುದು; ನಿನ್ನ ಕತ್ತಲೆಯು ಬೆಳಗಿನಂತೆ ಇರುವುದು.
18ನೀನು ನಿರೀಕ್ಷೆ ಇದೆ ಎಂದು ಭರವಸೆಯಿಂದ ಇರುವಿ; ನೀನು ನಿನ್ನ ಬಗ್ಗೆ ಯೋಚಿಸಿ ಭರವಸೆಯಿಂದ ವಿಶ್ರಾಂತಿ ತೆಗೆದುಕೊಳ್ಳುವಿ.
19ನೀನು ಮಲಗಿಕೊಂಡಾಗ ಯಾರೂ ನಿನ್ನನ್ನು ಹೆದರಿಸರು; ಅನೇಕರು ನಿನ್ನಿಂದ ಮೆಚ್ಚಿಕೆಯನ್ನು ಅಪೇಕ್ಷಿಸುವರು.
20ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವುದಿಲ್ಲ; ಪ್ರಾಣಬಿಡಬೇಕೆಂಬುದೇ ಅವರ ನಿರೀಕ್ಷೆಯಾಗಿರುವುದು.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.