
ಯೆರೆಮೀಯ 47
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಫರೋಹನು ಗಾಜಾವನ್ನು ಆಕ್ರಮಿಸುವ ಮೊದಲು, ಫಿಲಿಷ್ಟಿಯವನ್ನೂ ಅದರ ಮಿತ್ರರನ್ನೂ ಮುಳುಗಿಸಲು ಉತ್ತರದಿಂದ ಏರುವ ನೀರುಗಳನ್ನು ಯೆರೆಮೀಯನು ವರ್ಣಿಸುತ್ತಾನೆ. ಸಮೀಪಿಸುವ ವಿಪತ್ತು ತಂದೆತಾಯಿಗಳ ಬಲವನ್ನು ಬರಿದುಮಾಡಿ, ನೆರೆಯ ಕರಾವಳಿಗಳ ಬೆಂಬಲವನ್ನು ಮೌನಗೊಳಿಸಿ, ಇನ್ನೂ ವಿಶ್ರಮಿಸಲಾಗದ ಕತ್ತಿಯಾಗುತ್ತದೆ.
ಫಿಲಿಷ್ಟಿಯಪ್ರವಾಹನ್ಯಾಯತೀರ್ಪುಪ್ರಲಾಪ
1ಫರೋಹನು ಗಾಜಾ ಪಟ್ಟಣವನ್ನು ಮುತ್ತಿಗೆ ಹಾಕುವ ಮೊದಲು, ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:
2ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪ್ರವಾಹಗಳು ಉತ್ತರದಿಂದ ಬರುತ್ತವೆ, ಅದು ತುಂಬಿ ತುಳುಕುವ ಪ್ರಳಯವಾಗುವುದು; ದೇಶವನ್ನೂ ಅದರಲ್ಲಿರುವ ಸಮಸ್ತ ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ಆಕ್ರಮಿಸುವುವು; ಆಗ ಮನುಷ್ಯರು ಕೂಗುವರು; ದೇಶದ ನಿವಾಸಿಗಳೆಲ್ಲರು ಗೋಳಾಡುವರು.
3ಅವನ ಬಲವಾದ ಕುದುರೆಗಳ ಗೊರಸುಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಅವನ ಚಕ್ರಗಳ ಧ್ವನಿಯಿಂದಲೂ ತಂದೆಗಳು ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂದಿರುಗಿ ನೋಡರು.
4ಏಕೆಂದರೆ ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವುದಕ್ಕೂ ಟೈರಿನಿಂದಲೂ ಸೀದೋನಿನಿಂದಲೂ ಉಳಿದವರನ್ನು ಕಡಿದುಬಿಡುವುದಕ್ಕೂ ಆ ದಿವಸ ಬಂತು. ಏಕೆಂದರೆ ಯೆಹೋವ ದೇವರು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆಮಾಡುವನು.
5ಗಾಜಾ ಊರು ಬೋಳಿಸಿಕೊಂಡಿದೆ. ಅಷ್ಕೆಲೋನ್ ನಾಶನ ಹೊಂದಿದೆ. ಫಿಲಿಷ್ಟಿಯದ ಬಯಲುಸೀಮೆಯಲ್ಲಿ ಉಳಿದ ಪಟ್ಟಣವೇ ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?
6“ಅಯ್ಯೋ, ಯೆಹೋವ ದೇವರ ಖಡ್ಗವೇ, ಎಷ್ಟರವರೆಗೆ ವಿಶ್ರಮಿಸಿಕೊಳ್ಳದೇ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ; ವಿಶ್ರಮಿಸಿಕೋ, ಸುಮ್ಮನಿರು.
7ಅದು ಹೇಗೆ ಸುಮ್ಮನಿರುವುದು? ಅಷ್ಕೆಲೋನಿಗೆ ವಿರೋಧವಾಗಿ ಮತ್ತು ಸಮುದ್ರ ತೀರಕ್ಕೆ ವಿರೋಧವಾಗಿ ಯೆಹೋವ ದೇವರೇ ಅದಕ್ಕೆ ಆಜ್ಞಾಪಿಸಿದ್ದಾರಲ್ಲಾ? ಅಲ್ಲಿ ಅದನ್ನು ನೇಮಿಸಿದ್ದಾನೆ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.