Jeremiah speaking in the temple court as priests accuse him and an elder raises a restraining hand

ಯೆರೆಮೀಯ 26

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವಾಲಯವು ಶೀಲೋವಿನಂತಾಗಬಹುದೆಂಬ ಯೆರೆಮೀಯನ ಎಚ್ಚರಿಕೆಯು ಯಾಜಕರನ್ನೂ ಪ್ರವಾದಿಗಳನ್ನೂ ಅವನ ಮರಣವನ್ನು ಬೇಡುವಂತೆ ಪ್ರೇರೇಪಿಸುತ್ತದೆ. ಅಧಿಕಾರಿಗಳು, ನಾಗರಿಕರು ಮತ್ತು ಹಿರಿಯರು ಅವನ ಸಮರ್ಥನೆಯನ್ನು ಕೇಳಿ ಮೀಕನ ಪೂರ್ವನಿದರ್ಶನವನ್ನು ನೆನಪಿಸಿಕೊಳ್ಳುತ್ತಾರೆ, ಅಹೀಕಾಮನು ಅವನನ್ನು ರಕ್ಷಿಸುತ್ತಾನೆ; ಊರೀಯನ ಮರಣದಂಡನೆಯು ನಿಜವಾದ ಅಪಾಯವನ್ನು ಪ್ರಕಟಿಸುತ್ತದೆ.
ಧೈರ್ಯದೇವಾಲಯಸಾರ್ವಜನಿಕ ವಿಚಾರಣೆರಕ್ಷಣೆ
1ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ದೊರೆತನದ ಪ್ರಾರಂಭದಲ್ಲಿ ಈ ವಾಕ್ಯವು ಯೆಹೋವ ದೇವರಿಂದ ಉಂಟಾಯಿತು.
2“ಯೆಹೋವ ದೇವರು ಹೀಗೆ ಹೇಳುತ್ತಾನೆ: ಯೆಹೋವ ದೇವರು ಆಲಯದ ಅಂಗಳದಲ್ಲಿ ನಿಂತುಕೊಂಡು, ಯೆಹೋವ ದೇವರ ಆಲಯದಲ್ಲಿ ಆರಾಧಿಸುವುದಕ್ಕೆ ಬರುವ ಯೆಹೂದದ ಪಟ್ಟಣದವರೆಲ್ಲರಿಗೆ ಹೇಳಬೇಕೆಂದು ನಾನು ನಿನಗೆ ಆಜ್ಞಾಪಿಸಿದ ವಾಕ್ಯಗಳನ್ನೆಲ್ಲಾ ಹೇಳು. ಒಂದು ಮಾತಾದರೂ ಕಡಿಮೆ ಮಾಡಬೇಡ.
3ಒಂದು ವೇಳೆ ಅವರು ಕೇಳಿ, ನಾನು ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರಿಗೆ ಮಾಡುವುದಕ್ಕೆ ಆಲೋಚಿಸಿದ ಕೇಡಿನ ವಿಷಯ ಪಶ್ಚಾತ್ತಾಪ ಪಡುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿಕೊಂಡಾರು.
4ನೀನು ಅವರಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾನೆ, ನೀವು ನನಗೆ ಕಿವಿಗೊಡದೆ, ನಾನು ನಿಮ್ಮ ಮುಂದೆ ಇಟ್ಟ ನನ್ನ ನಿಯಮದಲ್ಲಿ ನಡೆದುಕೊಳ್ಳದೆ,
5ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳುಹಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆ ಹೋದರೆ,
6ಆಗ ನಾನು ಈ ಆಲಯವನ್ನು ಶೀಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲಾ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.’ ”
7ಹೀಗೆ ಯೆರೆಮೀಯನು ಈ ವಾಕ್ಯಗಳನ್ನು ಯೆಹೋವ ದೇವರ ಆಲಯದಲ್ಲಿ ಸಾರುವುದನ್ನು ಯಾಜಕರೂ, ಪ್ರವಾದಿಗಳೂ, ಜನರೆಲ್ಲರೂ ಕೇಳುತ್ತಿದ್ದರು.
8ಯೆರೆಮೀಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ, ಪ್ರವಾದಿಗಳೂ, ಜನರೆಲ್ಲರೂ ಅವನನ್ನು ಹಿಡಿದು, “ನೀನು ನಿಶ್ಚಯವಾಗಿ ಸಾಯಬೇಕು.
9ಈ ದೇವಾಲಯಕ್ಕೆ ಶೀಲೋವಿನ ಹಾಗೆ ಆಗುವುದೆಂದೂ, ಈ ಪಟ್ಟಣವೂ ನಿವಾಸಿಗಳಿಲ್ಲದೆ ಹಾಳಾಗುವುದೆಂದೂ ಯೆಹೋವ ದೇವರ ಹೆಸರಿನಲ್ಲಿ ಏಕೆ ನೀನು ಪ್ರವಾದಿಸಿದ್ದೀ?” ಎಂದರು. ಆಗ ಜನರೆಲ್ಲರು ಯೆಹೋವ ದೇವರ ಆಲಯದಲ್ಲಿ ಯೆರೆಮೀಯನಿಗೆ ವಿರೋಧವಾಗಿ ಕೂಡಿಕೊಂಡರು.
10ಯೆಹೂದದ ಪ್ರಧಾನರು ಈ ಸಂಗತಿಗಳನ್ನು ಕೇಳಿದಾಗ, ಅರಸನ ಅರಮನೆಯಿಂದ ಯೆಹೋವ ದೇವರ ಆಲಯಕ್ಕೆ ಬಂದು, ಯೆಹೋವ ದೇವರ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಕುಳಿತುಕೊಂಡರು.
11ಆಗ ಯಾಜಕರೂ, ಪ್ರವಾದಿಗಳೂ, ಅಧಿಕಾರಿಗಳಿಗೂ, ಜನರೆಲ್ಲರಿಗೂ, “ಈ ಮನುಷ್ಯನು ಮರಣಕ್ಕೆ ತಕ್ಕವನು. ಏಕೆಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ, ಇವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ,” ಎಂದರು.
12ಆಗ ಯೆರೆಮೀಯನು ಪ್ರಧಾನರೆಲ್ಲರಿಗೂ ಜನರೆಲ್ಲರಿಗೂ: “ನೀವು ಕೇಳಿದ ವಾಕ್ಯಗಳನ್ನೆಲ್ಲಾ ಈ ಆಲಯಕ್ಕೆ ವಿರೋಧವಾಗಿಯೂ, ಈ ಪಟ್ಟಣಕ್ಕೆ ವಿರೋಧವಾಗಿಯೂ ಪ್ರವಾದಿಸುವುದಕ್ಕೆ ಯೆಹೋವ ದೇವರು ನನ್ನನ್ನು ಕಳುಹಿಸಿದ್ದಾರೆ.
13ಹೀಗಿರುವುದರಿಂದ ನಿಮ್ಮ ಮಾರ್ಗಗಳನ್ನೂ, ನಿಮ್ಮ ಕೃತ್ಯಗಳನ್ನೂ ತಿದ್ದಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ವಿಧೇಯರಾಗಿರಿ. ಆಗ ಯೆಹೋವ ದೇವರು ನಿಮಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯಕ್ಕಾಗಿ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು.
14ನಾನಾದರೋ ನಿಮ್ಮ ಕೈಯಲ್ಲಿ ಇದ್ದೇನೆ. ನಿಮಗೆ ಒಳ್ಳೆಯದಾಗಿಯೂ, ನ್ಯಾಯವಾಗಿಯೂ ತೋರುವ ಪ್ರಕಾರ ನನಗೆ ಮಾಡಿರಿ.
15ಆದರೂ ನೀವು ನನ್ನನ್ನು ಕೊಂದುಹಾಕಿದರೆ, ನಿಮ್ಮ ಮೇಲೆಯೂ, ಈ ಪಟ್ಟಣದ ಮೇಲೆಯೂ, ಅದರ ನಿವಾಸಿಗಳ ಮೇಲೆಯೂ ನಿರ್ದೋಷಿಯ ರಕ್ತವನ್ನು ಬರಮಾಡುತ್ತೀರೆಂದು ನಿಶ್ಚಯವಾಗಿ ತಿಳಿದುಕೊಳ್ಳಿರಿ. ಈ ವಾಕ್ಯಗಳನ್ನೆಲ್ಲಾ ನಿಮ್ಮ ಕಿವಿಗಳಲ್ಲಿ ಹೇಳುವ ಹಾಗೆ ಸತ್ಯವಾಗಿ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ,” ಎಂದನು.
16ಆಗ ಪ್ರಧಾನರೂ ಜನರೆಲ್ಲರೂ ಯಾಜಕರಿಗೂ ಪ್ರವಾದಿಗಳಿಗೂ, “ಈ ಮನುಷ್ಯನು ಮರಣದಂಡನೆಗೆ ತಕ್ಕವನಲ್ಲ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಹೆಸರಿನಲ್ಲಿ ನಮ್ಮ ಸಂಗಡ ಮಾತನಾಡಿದ್ದಾನೆ,” ಎಂದರು.
17ದೇಶದ ಹಿರಿಯರಲ್ಲಿ ಕೆಲವರು ಎದ್ದು ಜನರ ಕೂಟಕ್ಕೆಲ್ಲಾ ಹೇಳಿದ್ದೇನೆಂದರೆ:
18“ಮೊರೇಷೆತಿನವನಾದ ಮೀಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ, ಯೆಹೂದದ ಜನರಿಗೆಲ್ಲಾ ಹೇಳಿದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಚೀಯೋನನ್ನು ಹೊಲದ ಹಾಗೆ ಉಳಲಾಗುವುದು; ಯೆರೂಸಲೇಮು ಹಾಳುದಿಬ್ಬಗಳಾಗುವುದು; ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.’
19ಯೆಹೂದದ ಅರಸನಾದ ಹಿಜ್ಕೀಯನೂ, ಎಲ್ಲಾ ಯೆಹೂದ್ಯರೂ ಅವನನ್ನು ಕೊಂದು ಹಾಕಿದರೋ? ಇಲ್ಲವೇ ಇಲ್ಲ. ಅವನು ಯೆಹೋವ ದೇವರಿಗೆ ಭಯಪಟ್ಟು, ಯೆಹೋವ ದೇವರ ಸಮ್ಮುಖದಲ್ಲಿ ಮೊರೆಯಿಟ್ಟನಲ್ಲವೋ? ಆಮೇಲೆ ಯೆಹೋವ ದೇವರು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪ ಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು!” ಎಂದರು.
20ಕಿರ್ಯತ್ ಯಾರೀಮಿನವನಾದ ಶೆಮಾಯನ ಮಗ ಊರೀಯ ಎಂಬುವವನು ಸಹ ಯೆಹೋವ ದೇವರ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆಮೀಯನ ಎಲ್ಲಾ ಮಾತುಗಳ ಪ್ರಕಾರ, ಈ ಪಟ್ಟಣಕ್ಕೂ, ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.
21ಆಗ ಅರಸನಾದ ಯೆಹೋಯಾಕೀಮನೂ, ಅವನ ಪರಾಕ್ರಮಶಾಲಿಗಳೆಲ್ಲರೂ, ಪ್ರಧಾನರೆಲ್ಲರೂ ಅವನ ಮಾತುಗಳನ್ನೆಲ್ಲಾ ಕೇಳಿದಾಗ, ಅರಸನು ಅವನನ್ನು ಕೊಂದುಹಾಕಬೇಕೆಂದಿದ್ದನು. ಆದರೆ ಊರೀಯನು ಅದನ್ನು ಕೇಳಿ ಭಯಪಟ್ಟು ಓಡಿಹೋಗಿ, ಈಜಿಪ್ಟಿಗೆ ಸೇರಿಕೊಂಡನು.
22ಆದರೆ ಅರಸನಾದ ಯೆಹೋಯಾಕೀಮನು ಈಜಿಪ್ಟ್ ಜನರನ್ನು, ಅಕ್ಬೋರನ ಮಗ ಎಲ್ನಾಥಾನನನ್ನೂ, ಅವನ ಸಂಗಡ ಇನ್ನೂ ಕೆಲವರನ್ನೂ ಈಜಿಪ್ಟಿಗೆ ಕಳುಹಿಸಿದನು.
23ಅವರು ಊರೀಯನನ್ನು ಈಜಿಪ್ಟಿನಿಂದ ತೆಗೆದುಕೊಂಡು ಅರಸನಾದ ಯೆಹೋಯಾಕೀಮನ ಬಳಿಗೆ ತಂದರು. ಇವನು ಅವನನ್ನು ಖಡ್ಗದಿಂದ ಹೊಡೆದು, ಅವನ ಹೆಣವನ್ನು ಸಾಧಾರಣವಾದ ಜನರ ಸಮಾಧಿಗಳಲ್ಲಿ ಹಾಕಿಸಿದನು.
24ಇತ್ತ ಯಾಜಕರೂ, ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ, ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.