Jeremiah lifting a decayed linen belt from a stream while proud leaders stand outside distant Jerusalem

ಯೆರೆಮೀಯ 13

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯೂಫ್ರೇಟೀಸ್ ಬಳಿ ಅಡಗಿಸಿದ ನಾರಿನ ನಡುಕಟ್ಟು ಹಾಳಾಗುತ್ತದೆ, ಯೆಹೂದದ ಅಹಂಕಾರವು ದೇವರೊಂದಿಗಿನ ಉದ್ದೇಶಿತ ಸಮೀಪತೆಯನ್ನು ಹೇಗೆ ಕೆಡಿಸಿದೆ ಎಂಬುದನ್ನು ಸಂಕೇತಿಸುತ್ತದೆ. ಕತ್ತಲೆ ಆವರಿಸುವ ಮೊದಲು ತಮ್ಮನ್ನು ತಗ್ಗಿಸಿಕೊಳ್ಳುವಂತೆ ಅರಸನನ್ನೂ ಜನರನ್ನೂ ಒತ್ತಾಯಿಸುತ್ತಾ ಯೆರೆಮೀಯನು ಗೊಂದಲ, ದೇಶಭ್ರಷ್ಟತೆ ಮತ್ತು ಅವಮಾನದ ಬಗ್ಗೆ ಎಚ್ಚರಿಸುತ್ತಾನೆ.
ಅಹಂಕಾರಪ್ರವಾದನಾ ಸೂಚನೆದೀನತೆದೇಶಭ್ರಷ್ಟತೆ
1ಯೆಹೋವ ದೇವರು ನನಗೆ, “ನೀನು ಹೋಗಿ, ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆಕೊಟ್ಟರು.
2ನಾನು ಯೆಹೋವ ದೇವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.
3ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು,
4ಯೂಫ್ರೇಟೀಸ್ ನದಿಗೆ ಹೋಗಿ ಅದನ್ನು ಅಲ್ಲಿಯ ಬಂಡೆಯ ಸಂದಿಯೊಳಗೆ ಬಚ್ಚಿಡು,” ಎಂಬುದಾಗಿ ಯೆಹೋವ ದೇವರ ಎರಡನೆಯ ಆದೇಶ ನನಗೆ ಬಂದಿತು.
5ಆಗ ಯೆಹೋವ ದೇವರ ಅಪ್ಪಣೆಯ ಮೇರೆಗೆ ನಾನು ಹೋಗಿ, ಯೂಫ್ರೇಟೀಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.
6ಬಹು ದಿನಗಳ ಮೇಲೆ ಯೆಹೋವ ದೇವರು ನನಗೆ, “ಹೊರಡು, ಯೂಫ್ರೇಟೀಸ್ ನದಿಗೆ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.
7ಆಗ ನಾನು ಯೂಫ್ರೇಟೀಸ್ ನದಿಗೆ ಹೋಗಿ ಹುಡುಕಿ, ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
8ಆಗ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನೆಂದರೆ,
9“ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ, ಯೆರೂಸಲೇಮಿನ ಮಹಾ ಗರ್ವವನ್ನು ಕೆಡಿಸುವೆನು.
10ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡೆದುಕೊಂಡು, ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಅವುಗಳನ್ನು ಆರಾಧಿಸುವುದಕ್ಕೂ ಹಿಂಬಾಲಿಸುವ ಈ ದುಷ್ಟಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
11ಯಾವ ಪ್ರಕಾರ ಇದು ಮನುಷ್ಯನ ನಡುವಿಗೆ ಹತ್ತಿಕೊಳ್ಳುವುದೋ, ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ, ಯೆಹೂದದ ಮನೆತನವನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು, ಆದರೆ ಅವರು ಕೇಳದೇ ಹೋದರು ಎಂದು ಯೆಹೋವ ದೇವರ ಅನ್ನುತ್ತಾರೆ.’
12“ಆದ್ದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು: ‘ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವು. ಆಗ ಅವರು ನಿನಗೆ ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ,’ ಎಂದು ನಿನಗೆ ಹೇಳುವರು.
13ಆಗ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಅರಸರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ, ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.
14ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು ಹಾಗೂ ನಾಶಮಾಡದೆ ಬಿಡೆನು,’ ಇದು ಯೆಹೋವ ದೇವರಾದ ನನ್ನ ನುಡಿ.”
15ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಏಕೆಂದರೆ ಯೆಹೋವ ದೇವರು ಮಾತನಾಡಿದ್ದಾರೆ.
16ಅವರು ಕತ್ತಲೆಯನ್ನು ತರುವುದಕ್ಕಿಂತ ಮೊದಲು ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವುದಕ್ಕಿಂತ ಮುಂಚೆ ನಿಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ನೀವು ಬೆಳಕನ್ನು ನಿರೀಕ್ಷಿಸಿದ್ದೀರಿ. ಆದರೆ ಅವರು ಗಾಡಾಂಧಕಾರದ ಗುಡ್ಡಗಳನ್ನು ತಂದಾರು.
17ನೀವು ಕೇಳದಿದ್ದರೆ, ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿಮಿತ್ತ ಗೋಳಾಡುವುದು, ಯೆಹೋವ ದೇವರ ಮಂದೆಯು ಸೆರೆಯಾಗಿ ಹೋದದ್ದರಿಂದ ಬಹಳವಾಗಿ ಅಳುವೆನು. ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವುದು.
18ರಾಜನಿಗೂ ರಾಜಮಾತೆಗೂ ಹೀಗೆ ಹೇಳಿರಿ, “ನೆಲದಲ್ಲಿ ಕೂತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ.”
19ದಕ್ಷಿಣ ದೇಶದ ಪಟ್ಟಣಗಳು ಮುತ್ತಿಗೆಯಾಗಿವೆ, ಅವುಗಳನ್ನು ಬಿಡಿಸಲು ಯಾರೂ ಇಲ್ಲ. ಯೆಹೂದವೆಲ್ಲಾ ಸೆರೆಹೋಗಿದೆ, ಸಂಪೂರ್ಣವಾಗಿ ಸೆರೆಯಾಗಿದೆ.
20ಚೀಯೋನೇ, ಕಣ್ಣೆತ್ತು, ಉತ್ತರ ದಿಕ್ಕಿನಿಂದ ಬರುವವರನ್ನು ನೋಡು, ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡು ಎಲ್ಲಿ?
21ನಿಮ್ಮ ವಿಶೇಷ ಮಿತ್ರರಾಗಿ ನೀವು ಬೆಳೆಸಿದವರನ್ನು ಯೆಹೋವ ದೇವರು ನಿನಗೆ ತಲೆಯಾಗಿ ನೇಮಿಸುವಾಗ ಏನು ಹೇಳುವಿ? ವೇದನೆಯು ನಿನ್ನನ್ನು ಹೆರುವವಳೋ ಎಂಬಂತೆ ಹಿಡಿಯುವುದಲ್ಲವೆ?
22ಒಂದು ವೇಳೆ, “ಇವು ನನಗೆ ಏಕೆ ಸಂಭವಿಸಿದವು?” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ನೆರಿಗೆಯು ಕೀಳಲಾಗುವುದು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.
23ಕೂಷ್ಯನು ತನ್ನ ಚರ್ಮವನ್ನೂ, ಚಿರತೆಯು ತನ್ನ ಮಚ್ಚೆಯನ್ನೂ ಮಾರ್ಪಡಿಸುವುದಕ್ಕಾಗುವುದೋ? ಹಾಗಾದರೆ ಕೆಟ್ಟತನದ ಅಭ್ಯಾಸವುಳ್ಳವರಾದ ನೀವೂ ಸಹ ಒಳ್ಳೆಯದನ್ನು ಮಾಡುವುದಕ್ಕಾದೀತೇ?
24“ಅಡವಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತೆ ಅವರನ್ನು ಚದರಿಸುವೆನು.
25ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನನ್ನನ್ನು ಮರೆತುಬಿಟ್ಟು, ಸುಳ್ಳು ದೇವರುಗಳಲ್ಲಿ ಭರವಸೆಯಿಟ್ಟಿದ್ದೀಯೇ.
26ಆದ್ದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ, ನಿನ್ನ ಮುಖದ ಮೇಲೆ ಎತ್ತುವೆನು.
27ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಕಾಮುಕತನವನ್ನು, ನಿನ್ನ ಕೀಳಾದ ವೇಶ್ಯತನವನ್ನು ಗುಡ್ಡಗಳಲ್ಲಿಯೂ, ಬಯಲಿನಲ್ಲಿಯೂ ನೀನು ನಡೆಸಿದ ಅಸಹ್ಯ ಕಾರ್ಯಗಳನ್ನು ಕಂಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ಇನ್ನೆಷ್ಟು ಕಾಲ ನೀನು ಅಶುದ್ಧಳಾಗಿರುವೆ?”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.