Jeremiah resting beneath an olive tree while shadowed conspirators approach and distant hilltop altars burn

ಯೆರೆಮೀಯ 11

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಹಿಂದಿನ ತಲೆಮಾರುಗಳ ವಿಗ್ರಹಗಳಿಗೆ ಮರಳುವ ಮೂಲಕ ಯೆಹೂದವು ಒಡಂಬಡಿಕೆಯನ್ನು ಮುರಿದಿದೆ, ಸಾರ್ವಜನಿಕ ಆರಾಧನೆಯ ಹೊರತಾಗಿಯೂ ನ್ಯಾಯತೀರ್ಪನ್ನು ಅನಿವಾರ್ಯವಾಗಿಸಿದೆ. ಅನಾತೋತಿನ ಜನರು ತನ್ನನ್ನು ಕೊಲ್ಲಲು ಸಂಚು ಹೂಡಿದ್ದನ್ನು ಅರಿಯದೆ ಯೆರೆಮೀಯನು ತನ್ನ ನಿಯೋಗವನ್ನು ಪಾಲಿಸಿ, ಅವರ ವ್ಯಾಜ್ಯವನ್ನು ದೇವರ ನ್ಯಾಯಯುತ ಪರೀಕ್ಷೆಗೆ ಒಪ್ಪಿಸುತ್ತಾನೆ.
ಒಡಂಬಡಿಕೆವಿಗ್ರಹಾರಾಧನೆದ್ರೋಹನ್ಯಾಯ
1ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ,
2“ಒಡಂಬಡಿಕೆಯ ಈ ವಚನಗಳನ್ನು ಕೇಳಿ, ಯೆಹೂದ್ಯರಿಗೂ ಯೆರೂಸಲೇಮಿನ ನಿವಾಸಿಗಳಿಗೂ ಸಾರು.
3ನೀನು ಅವರಿಗೆ ಹೇಳಬೇಕಾದುದು: ಇಸ್ರಾಯೇಲ್ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನಾನು ಅವರಿಗೆ ವಿಧಿಸಿದ ನಿಬಂಧನ ವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ.
4ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಈಜಿಪ್ಟ್ ದೇಶದಿಂದ ನಿಮ್ಮ ಪೂರ್ವಜರನ್ನು ನಾನು ಬರಮಾಡಿದಾಗ, ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ವಿಧಿಗಳನ್ನೆಲ್ಲಾ ಕೈಗೊಂಡರೆ, ನನ್ನ ಪ್ರಜೆಯಾಗುವಿರಿ; ನಾನು ನಿಮ್ಮ ದೇವರಾಗಿರುವೆನು.
5ಹಾಲು ಜೇನು ಹರಿಯುವ ನಾಡನ್ನು, ಎಂದರೆ ಇಂದು ನೀವಿರುವ ನಾಡನ್ನು ಕೊಡುವುದಾಗಿ ನಿಮ್ಮ ಮೂಲ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು,’ ಎಂದು ಹೇಳಿದ್ದೆ. ಈ ಒಡಂಬಡಿಕೆಯ ವಚನಗಳಿಗೆ ಕಿವಿಗೊಡದವನು ಶಾಪಗ್ರಸ್ತನು. ಇದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವ ಮಾತು.” “ಓ ಯೆಹೋವ ದೇವರೇ, ಹಾಗೆಯೇ ಆಗಲಿ ,” ಎಂದೆನು.
6ತರುವಾಯ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಮಾತುಗಳನ್ನೆಲ್ಲಾ ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿಯ ಬೀದಿಗಳಲ್ಲಿಯೂ ಸಾರಿ ಹೇಳು. ‘ಹೇಗೆಂದರೆ, ಈ ಒಡಂಬಡಿಕೆಯ ಮಾತುಗಳನ್ನು ಕೇಳಿ, ಅವುಗಳನ್ನು ಮಾಡಿರಿ.
7ಏಕೆಂದರೆ ನಾನು ನಿಮ್ಮ ತಂದೆಗಳಿಗೆ, “ನನ್ನ ಮಾತನ್ನು ಕೇಳಿ,” ಎಂದು ಖಂಡಿತವಾಗಿ ಹೇಳಿದೆನು. ಅವರನ್ನು ಈಜಿಪ್ಟ್ ದೇಶದೊಳಗಿಂದ ಮೇಲೆ ಬರಮಾಡಿದ ದಿವಸ ಮೊದಲುಗೊಂಡು ಇಂದಿನವರೆಗೂ ಆಜ್ಞಾಪಿಸುತ್ತಾ ಬಂದಿದ್ದೇನೆ.
8ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ತಮ್ಮ ಕೆಟ್ಟ ಹೃದಯದ ಕಲ್ಪನೆಯಂತೆ ನಡೆದುಕೊಂಡರು. ಆದ್ದರಿಂದ ಅವರು ಮಾಡಬೇಕೆಂದು ನಾನು ಆಜ್ಞಾಪಿಸಿದಂಥ, ಅವರು ಮಾಡುವಂಥ, ಈ ಒಡಂಬಡಿಕೆಯ ಶಾಪಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು.’ ”
9ತರುವಾಯ, ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ, “ಯೆಹೂದದ ಮನುಷ್ಯರಲ್ಲಿಯೂ ಯೆರೂಸಲೇಮಿನ ನಿವಾಸಿಗಳಲ್ಲಿಯೂ ಒಳಸಂಚು ಕಂಡುಬಂದಿದೆ.
10ನನ್ನ ಮಾತುಗಳನ್ನು ಕೇಳಲೊಲ್ಲದ ತಮ್ಮ ಪಿತೃಗಳ ಅಕ್ರಮಗಳಿಗೆ ತಿರುಗಿಕೊಂಡಿದ್ದಾರೆ. ಬೇರೆ ದೇವರುಗಳನ್ನು ಸೇವಿಸುವುದಕ್ಕೆ ಅವುಗಳ ಹಿಂದೆ ಹೋಗಿದ್ದಾರೆ. ಇಸ್ರಾಯೇಲಿನ ವಂಶದವರೂ ಯೆಹೂದದ ವಂಶದವರೂ ನಾನು ಅವರ ತಂದೆಗಳ ಸಂಗಡ ಮಾಡಿದ ಒಡಂಬಡಿಕೆಗಳನ್ನು ಮೀರಿದ್ದಾರೆ.
11ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ಅವರು ತಪ್ಪಿಸಿಕೊಳ್ಳಲಾಗದ ಕೇಡನ್ನು ಅವರ ಮೇಲೆ ತರುವೆನು. ಅವರು ನನಗೆ ಕೂಗಿದರೂ ನಾನು ಅವರನ್ನು ಕೇಳುವುದಿಲ್ಲ.
12ಆಗ ಯೆಹೂದದ ಪಟ್ಟಣಗಳೂ ಯೆರೂಸಲೇಮಿನ ನಿವಾಸಿಗಳೂ ಹೋಗಿ ತಾವು ಧೂಪವನ್ನರ್ಪಿಸುವ ದೇವರುಗಳಿಗೆ ಕೂಗುವರು. ಆದರೆ ಇವು ಅವರ ಕೇಡಿನ ಕಾಲದಲ್ಲಿ ಅವರನ್ನು ರಕ್ಷಿಸುವುದೇ ಇಲ್ಲ.
13ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು. ಯೆರೂಸಲೇಮಿಗೆ ಎಷ್ಟು ಬೀದಿಗಳೋ, ಅಷ್ಟು ಬಲಿಪೀಠಗಳನ್ನು ನಾಚಿಗೆಗೆ ಎಂದರೆ, ಅಷ್ಟು ಬಲಿಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವುದಕ್ಕೆ ಇಟ್ಟಿದ್ದೀ.’
14“ಆದ್ದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ. ಅವರಿಗೋಸ್ಕರ ಮೊರೆಯನ್ನೂ, ಪ್ರಾರ್ಥನೆಯನ್ನೂ ಎತ್ತಬೇಡ. ಏಕೆಂದರೆ, ತಮ್ಮ ಕೇಡಿನ ನಿಮಿತ್ತ ನನ್ನ ಕೂಗುವ ಸಮಯದಲ್ಲಿ ನಾನು ಕೇಳೆನು.
15“ನನ್ನ ಪ್ರಿಯಳಿಗೆ ನನ್ನ ಆಲಯದಲ್ಲಿ ಏನು ಕೆಲಸ, ಅವಳು ಬಹಳ ಮಂದಿಯ ಸಂಗಡ ಕುಯುಕ್ತಿಯನ್ನು ನಡೆಸಿದ್ದಾಳೆ. ನೀನು ಸಮರ್ಪಿಸಿದ ಮಾಂಸದ ಬಲಿಯು ನಿನ್ನ ಶಿಕ್ಷೆಯನ್ನು ರದ್ದುಗೊಳಿಸುವುದೋ? ನೀನು ಕೆಟ್ಟತನ ಮಾಡುವಾಗ ಉಲ್ಲಾಸಪಡುತ್ತೀ.”
16ಸೌಂದರ್ಯವಾದ ಒಳ್ಳೆಯ ಹಣ್ಣುಳ್ಳ ಹಸುರಾದ ಓಲಿವ್ ಗಿಡವೆಂದು ಯೆಹೋವ ದೇವರು ನಿನಗೆ ಹೆಸರಿಟ್ಟರು. ದೊಡ್ಡ ಗದ್ದಲದಿಂದ ಅದರ ಮೇಲೆ ಬೆಂಕಿ ಹತ್ತಿಸುವನು. ಅದರ ಕೊಂಬೆಗಳು ಮುರಿದು ಹೋಗುವುವು.
17ಇಸ್ರಾಯೇಲಿನ ವಂಶವೂ ಯೆಹೂದದ ವಂಶವೂ ನನಗೆ ಕೋಪವನ್ನೆಬ್ಬಿಸುವ ಹಾಗೆ ಬಾಳನಿಗೆ ಧೂಪವನ್ನರ್ಪಿಸಿ, ತಮಗೆ ವಿರೋಧವಾಗಿ ಮಾಡಿಕೊಂಡ ಕೇಡಿನ ನಿಮಿತ್ತ, ನಿನ್ನನ್ನು ನೆಟ್ಟ ಸೇನಾಧೀಶ್ವರ ಯೆಹೋವ ದೇವರು ನಿನ್ನ ಮೇಲೆ ಕೆಡುಕಾಗಲಿ ಎಂದು ಪ್ರಕಟಿಸಿದ್ದಾರೆ.
18ಯೆಹೋವ ದೇವರು ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು.
19ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. ಆದರೆ ನನ್ನ ವಿರುದ್ಧ ಸಂಚು ಹೂಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. “ಮರವನ್ನು ಫಲ ಸಹಿತ ನಾಶ ಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ, ಅವನ ಹೆಸರೇ ಇಲ್ಲದಂತಾಗಲಿ.”
20ಆದರೆ ನೀತಿಯಾಗಿ ನ್ಯಾಯತೀರಿಸುವಂಥ ಅಂತರಿಂದ್ರಿಯಗಳನ್ನೂ, ಹೃದಯವನ್ನೂ ಶೋಧಿಸುವಂಥ ಸೇನಾಧೀಶ್ವರ ಯೆಹೋವ ದೇವರೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ಏಕೆಂದರೆ ನಿನಗೆ ನನ್ನ ವ್ಯಾಜ್ಯವನ್ನು ಒಪ್ಪಿಸಿದ್ದೇನೆ.
21ಆದ್ದರಿಂದ ನಿನ್ನ ಪ್ರಾಣವನ್ನು ಹುಡುಕುವ ಅನಾತೋತಿನ ಮನುಷ್ಯರಿಗೆ ನೀನು, “ನಮ್ಮ ಕೈಯಿಂದ ಸಾಯದ ಹಾಗೆ ಯೆಹೋವ ದೇವರ ಹೆಸರಿನಲ್ಲಿ ಪ್ರವಾದನೆ ಹೇಳಬೇಡ,” ಅನ್ನುವವರಿಗೆ ಯೆಹೋವ ದೇವರು ಹೇಳುವುದೇನೆಂದರೆ,
22ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರನ್ನು ಶಿಕ್ಷಿಸುತ್ತೇನೆ, ಯೌವನಸ್ಥರು ಖಡ್ಗದಿಂದ ಸಾಯುವರು. ಅವರ ಪುತ್ರಪುತ್ರಿಯರು ಹಸಿವೆಯಿಂದ ಸಾಯುವರು.
23ಅವರಲ್ಲಿ ಶೇಷವು ಇರುವುದಿಲ್ಲ. ಏಕೆಂದರೆ ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಎಂದರೆ ಅವರ ಶಿಕ್ಷೆಯ ವರ್ಷವನ್ನೇ ತರುತ್ತೇನೆ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.