
ಯೆಶಾಯ 64
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ಆಕಾಶವನ್ನು ಹರಿದು ಹಿಂದಿನ ದಿನಗಳಲ್ಲಿದ್ದಂತೆ ಕಾರ್ಯಮಾಡಲಿ ಎಂದು ಸಮುದಾಯವು ಹಂಬಲಿಸುತ್ತದೆ. ಅಶುದ್ಧತೆಯನ್ನೂ ಪಾಪವನ್ನೂ ಅರಿಕೆ ಮಾಡುತ್ತಾ, ಜನರು ಕುಂಬಾರನಿಗೆ ಮಣ್ಣಿನಂತೆ ತಮ್ಮ ಸೃಷ್ಟಿಕರ್ತನಿಗೆ ಮೊರೆಯಿಟ್ಟು ಯೆರೂಸಲೇಮಿನ ಪಾಳುಗಳ ಬಗ್ಗೆ ಬೇಡುತ್ತಾರೆ.
ಪಶ್ಚಾತ್ತಾಪಪ್ರಾರ್ಥನೆಕುಂಬಾರಪುನಃಸ್ಥಾಪನೆ
1ಆಹಾ, ಆಕಾಶಗಳನ್ನು ಹರಿದುಬಿಟ್ಟು ಇಳಿದು ಬಾ! ನಿಮ್ಮ ದರ್ಶನವನ್ನು ಕಂಡು ಪರ್ವತಗಳು ಗಡಗಡನೆ ನಡುಗುವಂತೆಯೂ,
2ಬೆಂಕಿ ಕಟ್ಟಿಗೆಯನ್ನು ಹೊತ್ತಿಸುವಂತೆಯೂ, ಬೆಂಕಿ ನೀರನ್ನು ಉಕ್ಕಿಸುವಂತೆಯೂ, ನೀನು ಇಳಿದುಬಂದು ನಿನ್ನ ಹೆಸರನ್ನು ನಿನ್ನ ವೈರಿಗಳಿಗೆ ತಿಳಿಯುವಂತೆ ಮಾಡು!
3ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದೆ, ಬೆಟ್ಟಗಳು ನಿನ್ನ ಸಮ್ಮುಖಕ್ಕೆ ಕರಗಿ ಹೋದವು.
4ದೇವರೇ, ನಿನಗೋಸ್ಕರ ಕಾದುಕೊಳ್ಳುವವರಿಗೆ ನೀನು ಮಾಡುವುದನ್ನು ಲೋಕದ ಉತ್ಪತ್ತಿಗೆ ಮುಂಚೆ ದೇವರೇ ನಿನ್ನ ಹೊರತಾಗಿ ಯಾರೂ ಕೇಳಲಿಲ್ಲ. ಯಾರ ಕಿವಿಯೂ ಕೇಳಲಿಲ್ಲ. ಯಾರ ಕಣ್ಣೂ ಕಾಣಲಿಲ್ಲ.
5ಸಂತೋಷಪಟ್ಟು ನೀತಿಯನ್ನು ಕೈಗೊಳ್ಳುವವರನ್ನೂ, ನಿಮ್ಮ ಮಾರ್ಗಗಳನ್ನು ಜ್ಞಾಪಕ ಮಾಡುವವನನ್ನೂ ನೀವು ಸಹಾಯಮಾಡಲು ಬರುತ್ತೀರಿ. ಆದರೂ ನಾವು ಪಾಪದಲ್ಲೇ ಮುನ್ನಡೆದೆವು. ಆದ್ದರಿಂದ ನೀವು ಬೇಸರಗೊಂಡಿರುವಿರಿ. ಹಾಗಾದರೆ, ನಮ್ಮಂಥವರಿಗೆ ರಕ್ಷಣೆ ಇದೆಯೇ?
6ನಾವೆಲ್ಲರೂ ಅಶುದ್ಧನ ಹಾಗೆ ಇದ್ದೇವೆ. ನಮ್ಮ ನೀತಿ ಕಾರ್ಯಗಳೆಲ್ಲಾ ಮೈಲಿಗೆ ವಸ್ತ್ರದ ಹಾಗೆ ಇವೆ. ನಾವೆಲ್ಲರೂ ಎಲೆಯ ಹಾಗೆ ಒಣಗಿಹೋಗಿದ್ದೇವೆ. ನಮ್ಮ ಪಾಪಗಳು ಗಾಳಿಯಂತೆ ನಮ್ಮನ್ನು ಬಡಿದುಕೊಂಡು ಹೋಗಿವೆ.
7ನಿನ್ನ ಹೆಸರನ್ನು ಕರೆಯುವವನೂ, ನಿನ್ನನ್ನು ಹಿಡಿದುಕೊಳ್ಳುವುದಕ್ಕೆ ಎಚ್ಚರಗೊಳ್ಳುವವನು ಒಬ್ಬನೂ ಇಲ್ಲ. ಏಕೆಂದರೆ ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ. ನಮ್ಮ ಪಾಪಗಳಿಗಾಗಿ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.
8ಆದರೆ ಈಗ ಯೆಹೋವ ದೇವರೇ, ನಮ್ಮ ತಂದೆಯು ನೀನೇ, ನಾವು ಮಣ್ಣು. ನೀನು ನಮ್ಮ ಕುಂಬಾರನು. ನಾವೆಲ್ಲರೂ ನಿನ್ನ ಕೈಕೆಲಸಗಳು.
9ಯೆಹೋವ ದೇವರೇ, ಅತ್ಯಧಿಕವಾಗಿ ಬೇಸರಗೊಳ್ಳಬೇಡ. ಎಂದೆಂದಿಗೂ ಪಾಪವನ್ನು ಜ್ಞಾಪಕ ಮಾಡಬೇಡ. ನೋಡಿರಿ, ನಾವು ಬೇಡುತ್ತೇವೆ, ದೃಷ್ಟಿ ಇಡಿರಿ. ನಾವೆಲ್ಲರೂ ನಿನ್ನ ಜನರೇ.
10ನಿನ್ನ ಪರಿಶುದ್ಧ ಪಟ್ಟಣಗಳು ಅಡವಿಯಾದವು. ಚೀಯೋನು ಅಡವಿಯಾಯಿತು. ಯೆರೂಸಲೇಮು ಹಾಳಾಯಿತು.
11ನಮ್ಮ ತಂದೆಗಳು ನಿನ್ನನ್ನು ಕೊಂಡಾಡಿದ ನಮ್ಮ ಪರಿಶುದ್ಧ ಶೃಂಗಾರವಾದ ದೇವಾಲಯ ಬೆಂಕಿಯಿಂದ ಸುಟ್ಟುಹೋಯಿತು. ನಮ್ಮ ಅಮೂಲ್ಯ ವಸ್ತುಗಳೆಲ್ಲ ನಾಶವಾದವು.
12ಇವು ಹೀಗಿರಲಾಗಿ ಯೆಹೋವ ದೇವರೇ, ನೀವು ಹಿಂಜರಿಯುತ್ತೀರೋ? ಮೌನವಾಗಿದ್ದು ನಮ್ಮನ್ನು ಅತ್ಯಧಿಕವಾಗಿ ಕುಗ್ಗಿಸುವಿರೋ?
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.