Watchmen raising a plain banner as families and a newly married couple enter restored Jerusalem

ಯೆಶಾಯ 62

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಚೀಯೋನಿನ ನೀತಿಯು ಪ್ರಕಾಶಿಸಿ ಪಟ್ಟಣವು ಆನಂದದ ಹೊಸ ಹೆಸರನ್ನು ಪಡೆಯುವವರೆಗೂ ಯೆಶಾಯನು ಮೌನವನ್ನು ನಿರಾಕರಿಸುತ್ತಾನೆ. ಕಾವಲುಗಾರರು ನಿರಂತರವಾಗಿ ಪ್ರಾರ್ಥಿಸುತ್ತಾರೆ, ರಾಜಮಾರ್ಗವನ್ನು ಸ್ವಚ್ಛಗೊಳಿಸಲಾಗುತ್ತದೆ, ಮತ್ತು ವಿಮೋಚಿತ ಜನರು ಇನ್ನು ಪರಿತ್ಯಕ್ತವಲ್ಲದ ಪಟ್ಟಣವನ್ನು ಪ್ರವೇಶಿಸುತ್ತಾರೆ.
ಎಚ್ಚರಿಕೆಹೊಸ ಗುರುತುಪುನಃಸ್ಥಾಪನೆಆನಂದ
1ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ! ಯೆರೂಸಲೇಮಿಗೋಸ್ಕರ ಅದರ ವಿಮೋಚನೆಯು ಪ್ರಕಾಶದಂತೆಯೂ, ಅದರ ರಕ್ಷಣೆಯು ಉರಿಯುವ ದೀವಿಟಿಗೆಯಂತೆಯೂ ಹೊರಡುವವರೆಗೆ ನಾನು ವಿಶ್ರಾಂತಿಯಿಂದ ಇರುವುದಿಲ್ಲ.
2ಆಗ ಇತರ ಜನಾಂಗಗಳು ನಿನ್ನ ವಿಮೋಚನೆಯನ್ನೂ, ಅರಸರೆಲ್ಲರು ನಿನ್ನ ಮಹಿಮೆಯನ್ನೂ ನೋಡುವರು. ಯೆಹೋವ ದೇವರ ಬಾಯಿ ನೇಮಿಸುವ ಹೊಸ ಹೆಸರು ನಿನಗೆ ದೊರೆಯುವುದು.
3ಯೆಹೋವ ದೇವರ ಕೈಯಲ್ಲಿ ಮಹಿಮೆಯ ಕಿರೀಟವಾಗಿಯೂ, ನಿನ್ನ ದೇವರ ಅಂಗೈಯಲ್ಲಿ ರಾಜ ಮುಕುಟವಾಗಿಯೂ ಇರುವೆ.
4ಇನ್ನು ಮೇಲೆ ನೀನು ಗಂಡಬಿಟ್ಟವಳೆಂದು ಎನಿಸಿಕೊಳ್ಳುವುದಿಲ್ಲ ನಿನ್ನ ದೇಶಕ್ಕೆ ಹಾಳಾದದ್ದು ಎಂಬ ಹೆಸರೂ ಇರುವುದಿಲ್ಲ. ಆದರೆ ನೀನು ಹೆಪ್ಸಿಬಾ ಎಂದೂ ನಿನ್ನ ದೇಶಕ್ಕೆ ಬ್ಯೂಲಾ ಎಂದೂ ಹೆಸರಾಗುವುದು. ಏಕೆಂದರೆ ಯೆಹೋವ ದೇವರು ನಿನ್ನನ್ನು ಮೆಚ್ಚುವರು, ನಿನ್ನ ದೇಶಕ್ಕೆ ವಿವಾಹವಾಗುವುದು.
5ಯುವಕನು ಕನ್ಯೆ ಯುವತಿಯನ್ನು ವರಿಸುವಂತೆ, ನಿನ್ನ ಜನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು. ವರನು ವಧುವಿನ ಮೇಲೆ ಆನಂದ ಪಡುವ ಪ್ರಕಾರ, ನಿನ್ನ ದೇವರು ನಿನ್ನ ಮೇಲೆ ಆನಂದಿಸುವರು.
6ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ. ಅವರು ಹಗಲಿರುಳು ಮೌನವಾಗಿರುವುದೇ ಇಲ್ಲ. ಯೆಹೋವ ದೇವರಿಗೆ ಜ್ಞಾಪಕಪಡಿಸುವವರೇ, ನೀವೂ ಸುಮ್ಮನಿರಬೇಡಿರಿ.
7ಯೆರೂಸಲೇಮನ್ನು ಸ್ಥಾಪಿಸಿ, ಲೋಕಪ್ರಸಿದ್ಧಿಗೆ ತರುವ ತನಕ ಆತನಿಗೂ ವಿಶ್ರಾಂತಿ ಕೊಡಬೇಡಿರಿ.
8ಯೆಹೋವ ದೇವರು ತನ್ನ ಬಲಗೈಯಿಂದಲೂ, ತನ್ನ ಬಲವುಳ್ಳ ತೋಳಿನಿಂದಲೂ ಆಣೆಯಿಟ್ಟು ಹೇಳಿದ್ದೇನೆಂದರೆ: “ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವುದಿಲ್ಲ. ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ವಿದೇಶಿಯರು ಕುಡಿಯುವುದಿಲ್ಲ.
9ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆ ಹಾಕಿದವರೇ, ಅದನ್ನು ಉಂಡು ಯೆಹೋವ ದೇವರನ್ನು ಸ್ತುತಿಸುವರು. ನಿನ್ನ ದ್ರಾಕ್ಷಿಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು.”
10ಹಾದುಹೋಗಿರಿ, ಬಾಗಿಲುಗಳಲ್ಲಿ ಹಾದುಹೋಗಿರಿ, ಜನರಿಗೆ ದಾರಿಯನ್ನು ಸಿದ್ಧಮಾಡಿರಿ, ಎತ್ತರಿಸಿರಿ, ರಾಜಮಾರ್ಗವನ್ನು ಎತ್ತರಿಸಿ, ಕಲ್ಲುಗಳನ್ನು ಆಯ್ದು ಕೂಡಿಸಿರಿ. ಜನಾಂಗಗಳಿಗೋಸ್ಕರ ಧ್ವಜವನ್ನು ಎತ್ತಿರಿ.
11ಇಗೋ, ಯೆಹೋವ ದೇವರು ಭೂಮಿಯ ಅಂತ್ಯದವರೆಗೆ ಹೀಗೆ ಘೋಷಣೆ ಮಾಡಿದ್ದಾರೆ: “ಚೀಯೋನಿನ ಪುತ್ರಿ ಇಗೋ, ‘ನಿನ್ನ ರಕ್ಷಣೆಯು ಬರುತ್ತದೆ. ಆತನ ಬಹುಮಾನವು ಆತನ ಸಂಗಡ, ಆತನ ಪ್ರತಿಫಲವು ಆತನ ಮುಂದೆಯೂ ಇದೆ ಎಂದು ಹೇಳಿರಿ.’ ”
12ಆಗ ಅವರು, ಪರಿಶುದ್ಧ ಜನರೂ, ಯೆಹೋವ ದೇವರು ವಿಮೋಚಿಸಿದವರೂ ಎಂದು ಎನಿಸಿಕೊಳ್ಳುವರು ನಿನಗೆ ಹುಡುಕಿದ ಹಾಗೂ ಕೈ ಬಿಡದ ಪಟ್ಟಣ, ಎಂದು ಹೆಸರು ಬರುವುದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.