Jerusalem's purified remnant gathered beneath a protective canopy of cloud and fire

ಯೆಶಾಯ 4

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ನ್ಯಾಯತೀರ್ಪಿನ ನಂತರ, ಕರ್ತನ ಚಿಗುರು ಯೆರೂಸಲೇಮಿನ ಉಳಿದ ಶೇಷಕ್ಕೆ ಸುಂದರವೂ ಮಹಿಮಾನ್ವಿತವೂ ಆಗುತ್ತದೆ. ದೇವರು ಅಪರಾಧವನ್ನು ತೊಳೆದು, ಚೀಯೋನಿನ ಮೇಲೆ ಮೋಡ, ಬೆಂಕಿ, ನೆರಳು ಮತ್ತು ಆಶ್ರಯವನ್ನು ಸೃಷ್ಟಿಸಿ, ಪವಿತ್ರತೆಯನ್ನೂ ರಕ್ಷಿಸುವ ಸಾನ್ನಿಧ್ಯವನ್ನೂ ಪುನಃಸ್ಥಾಪಿಸುತ್ತಾನೆ.
ಶೇಷಶುದ್ಧೀಕರಣಪವಿತ್ರತೆಆಶ್ರಯ
1ಆ ದಿವಸದಲ್ಲಿ ಏಳುಮಂದಿ ಹೆಂಗಸರು ಒಬ್ಬ ಮನುಷ್ಯನನ್ನು ಹಿಡಿದು, “ನಾವು ಸ್ವಂತವಾಗಿ ದುಡಿದು ಉಣ್ಣುವೆವು, ನಾವೇ ಸಂಪಾದಿಸಿ ವಸ್ತ್ರಗಳನ್ನು ಉಟ್ಟುಕೊಳ್ಳುವೆವು, ನಮ್ಮ ನಿಂದೆಯನ್ನು ನೀಗಿಸುವುದಕ್ಕೆ ನಿನ್ನ ಹೆಸರು ನಮಗಿದ್ದರೆ ಸಾಕು,” ಎಂದು ಕೇಳಿಕೊಳ್ಳುವರು.
2ಆ ದಿನದಲ್ಲಿ ಯೆಹೋವ ದೇವರ ಕೊಂಬೆಯು ಸುಂದರವಾಗಿಯೂ, ಮಹಿಮೆಯುಳ್ಳದ್ದಾಗಿಯೂ ಇರುವುದು. ಭೂಮಿಯ ಫಲವು ಇಸ್ರಾಯೇಲರಲ್ಲಿ ಉಳಿದವರಿಗೆ ಅಭಿಮಾನವೂ, ರಮ್ಯವಾಗಿಯೂ ಇರುವುದು.
3ಹೀಗಿರುವಲ್ಲಿ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಹಾಗೂ ಯೆರೂಸಲೇಮಿನಲ್ಲಿ ವಾಸಿಸುವವರೆಂದೂ ದಾಖಲೆಗೊಂಡ ಪ್ರತಿಯೊಬ್ಬರೂ ಪವಿತ್ರರು ಎಂದು ಕರೆಯಲಾಗುವರು.
4ಯೆಹೋವ ದೇವರು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಪುತ್ರಿಯರ ಕಲ್ಮಷವನ್ನು ತೊಳೆದು, ಯೆರೂಸಲೇಮಿನ ಮೇಲಿನ ರಕ್ತದ ಕಲೆಗಳನ್ನು ತೆಗೆದುಹಾಕುವರು.
5ಆಗ ಯೆಹೋವ ದೇವರು ಚೀಯೋನ್ ಪರ್ವತದ ಪ್ರತಿಯೊಂದು ನಿವಾಸದ ಮೇಲೂ, ಅದರ ಸಭೆಗಳ ಮೇಲೂ, ಹಗಲಿನಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಿನಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ಏಕೆಂದರೆ ದೇವರ ಮಹಿಮೆ ಎಲ್ಲದರ ಮೇಲೆ ಚಪ್ಪರದಂತೆಯೂ ಆವರಿಸುವುದು.
6ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ, ಬಿರುಗಾಳಿಗೂ, ಮಳೆಗೂ ಆಶ್ರಯವನ್ನು ಕೊಡುವ ಮಂಟಪವಾಗಿ ಇರುವುದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.