Joyful travelers walking confidently toward Zion beside desert streams, crocuses, and flourishing hills

ಯೆಶಾಯ 35

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಅರಣ್ಯವು ಹೂಬಿಡುತ್ತದೆ ಮತ್ತು ದುರ್ಬಲ ದೇಹಗಳು ಪುನಃಸ್ಥಾಪಿಸಲ್ಪಡುವಾಗ ಬಲಹೀನರು ಧೈರ್ಯವನ್ನು ಪಡೆಯುತ್ತಾರೆ. ಸುರಕ್ಷಿತ ರಾಜಮಾರ್ಗವು ವಿಮೋಚಿತರನ್ನು ಹಾಡುತ್ತಾ ಚೀಯೋನಿಗೆ ಮನೆಗೆ ನಡೆಸುತ್ತದೆ, ಮತ್ತು ದುಃಖವೂ ನಿಟ್ಟುಸಿರೂ ಶಾಶ್ವತ ಸಂತೋಷಕ್ಕೆ ದಾರಿ ಮಾಡುತ್ತವೆ.
ಪುನಃಸ್ಥಾಪನೆಸ್ವಸ್ಥತೆಸಂತೋಷಮರಳುವಿಕೆ
1ಅರಣ್ಯವೂ, ಮರುಭೂಮಿಯೂ ಆನಂದಿಸುವುದು: ಒಣ ನೆಲವು ಹರ್ಷಿಸಿ, ತಾವರೆಯಂತೆ ಕಳಕಳಿಸುವುದು.
2ಅದು ಸಮೃದ್ಧಿಯಾಗಿ ಅರಳಿ, ಆನಂದ ಧ್ವನಿ ಎತ್ತಿ ಉಲ್ಲಾಸಿಸುವುದು. ಲೆಬನೋನಿನ ಘನತೆಯು ಮತ್ತು ಕರ್ಮೆಲ್, ಶಾರೋನಿನ ಗೌರವವು ಅದಕ್ಕೆ ಕೊಡಲಾಗುವುದು. ಅವರು ಯೆಹೋವ ದೇವರ ಮಹಿಮೆಯನ್ನು ಮತ್ತು ನಮ್ಮ ದೇವರ ಘನತೆಯನ್ನು ಕಾಣುವರು.
3ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ. ನಡುಗುವ ಮೊಣಕಾಲುಗಳನ್ನು ದೃಢಪಡಿಸಿರಿ.
4ಭಯಭ್ರಾಂತ ಹೃದಯವುಳ್ಳವರಿಗೆ ಬಲಗೊಳ್ಳಿರಿ, ಹೆದರಬೇಡಿರಿ. ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವುದಕ್ಕೂ, ದೇವರು ಪ್ರತಿಫಲವನ್ನು ಕೊಡುವುದಕ್ಕೂ ತಾವೇ ಬಂದು ನಿಮ್ಮನ್ನು ರಕ್ಷಿಸುವರು, ಎಂದು ಅವರಿಗೆ ಹೇಳಿರಿ.
5ಆಗ, ಕುರುಡರ ಕಣ್ಣು ಕಾಣುವುದು. ಕಿವುಡರ ಕಿವಿಗಳು ಕೇಳಿಸುವುವು.
6ಆಗ ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. ಏಕೆಂದರೆ ಮರುಭೂಮಿಯಲ್ಲಿ ನೀರೂ, ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು.
7ಒಣ ನೆಲವು ಸರೋವರವಾಗುವುದು, ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗುವುದು. ನರಿಗಳು ವಾಸಿಸುವ ಪ್ರತಿಯೊಂದು ಮಲಗುವ ಸ್ಥಳದಲ್ಲಿ ಹುಲ್ಲು, ಜೊಂಡು, ಆಪು ಹುಲ್ಲುಗಳಿಂದ ತುಂಬಿರುವುದು.
8ಅಲ್ಲಿ ರಾಜಮಾರ್ಗ ಇರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನು ಅದರ ಮೇಲೆ ಹಾದು ಹೋಗನು. ಆದರೆ ಅದು ದೇವಜನರಿಗಾಗಿ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿ ತಪ್ಪನು.
9ಸಿಂಹವು ಅಲ್ಲಿ ಇರದು, ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗವು. ಅದು ಅಲ್ಲಿ ಕಾಣುವುದೇ ಇಲ್ಲ. ಆದರೆ ಬಿಡುಗಡೆಯಾದವರೇ ಅಲ್ಲಿ ನಡೆಯುವರು.
10ಯೆಹೋವ ದೇವರು ವಿಮೋಚಿಸಿದವರು ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.