
ಯೆಶಾಯ 27
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದೇವರು ಗೊಂದಲಮಯ ಕೆಡುಕಿನ ಚಿತ್ರವಾದ ಲಿವ್ಯಾತಾನನ್ನು ಸೋಲಿಸಿ, ಫಲಭರಿತ ದ್ರಾಕ್ಷಿತೋಟವನ್ನು ಪ್ರೀತಿಯಿಂದ ಕಾಯುತ್ತಾನೆ. ಯಾಕೋಬನು ಬೇರೂರುತ್ತಾನೆ, ವಿಗ್ರಹಾರಾಧನೆಯ ಕಲ್ಲುಗಳು ತೆಗೆಯಲ್ಪಡುತ್ತವೆ, ಮತ್ತು ಚದುರಿದ ದೇಶಭ್ರಷ್ಟರು ಯೆರೂಸಲೇಮಿನಲ್ಲಿ ಆರಾಧಿಸಲು ಒಬ್ಬೊಬ್ಬರಾಗಿ ಮರಳುತ್ತಾರೆ.
ವಿಜಯದ್ರಾಕ್ಷಿತೋಟಪುನಃಸ್ಥಾಪನೆಮರಳುವಿಕೆ
1ಆ ದಿನದಲ್ಲಿ ಯೆಹೋವ ದೇವರು, ತಮ್ಮ ಬಲವಾದ ಭೀಕರ ಖಡ್ಗದಿಂದ ವೇಗವಾಗಿ ಓಡುವ ಲೆವಿಯಾತಾನ ಸರ್ಪವನ್ನೂ, ಡೊಂಕಾಗಿ ಹರಿಯುವ ಲೆವಿಯಾತಾನ ಸರ್ಪವನ್ನೂ ದಂಡಿಸಿ, ಸಮುದ್ರದಲ್ಲಿರುವ ಘಟಸರ್ಪವನ್ನೂ ಕೊಂದುಹಾಕುವರು.
2ಆ ದಿನದಲ್ಲಿ, ಫಲಭರಿತ ದ್ರಾಕ್ಷಿತೋಟದ ವಿಷಯವಾಗಿ ಹಾಡಿರಿ.
3ಯೆಹೋವ ದೇವರಾದ ನಾನೇ ಅದನ್ನು ಕಾಯುತ್ತೇನೆ. ಸತತವಾಗಿ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ. ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.
4ರೌದ್ರವು ನನ್ನಲ್ಲಿ ಇಲ್ಲ. ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ, ನಾನು ಅವುಗಳನ್ನು ಹಾದು ಹೋಗಿ, ಅವುಗಳನ್ನು ಒಟ್ಟಿಗೆ ಸುಡುವೆನು.
5ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನಮಾಡಿಕೊಳ್ಳುವ ಹಾಗೆ ನನ್ನನ್ನು ಆಶ್ರಯಿಸಲಿ, ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.
6ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು. ಇಸ್ರಾಯೇಲು ಹೂ ಅರಳಿ ಚಿಗುರುವುದು. ಭೂಲೋಕವನ್ನೆಲ್ಲಾ ಫಲದಿಂದ ತುಂಬಿಸುವನು.
7ಆಕೆಯನ್ನು ಹೊಡೆದವರನ್ನು ಆತನು ಹೊಡೆದಂತೆ ಯೆಹೋವ ದೇವರು ಆಕೆಯನ್ನು ಹೊಡೆದರೋ? ಆಕೆಯನ್ನು ಕೊಂದವರು ಹತರಾದಂತೆ ಆಕೆಯು ಸಂಹಾರವಾದಳೋ?
8ಯುದ್ಧದಿಂದಲೂ ಸೆರೆಯಿಂದಲೂ ಆಕೆಯೊಂದಿಗೆ ತೃಪ್ತರಾಗಿರಿ. ಆತನು ತನ್ನ ಕೋಪದ ಪೆಟ್ಟಿನಿಂದ ಪೂರ್ವದ ಬಿರುಗಾಳಿ ಬೀಸುವಾಗ ಆಗುವಂತೆ, ಆಕೆಯನ್ನು ಹೊರಗೋಡಿಸುವನು.
9ಹೀಗಿರುವದರಿಂದ ಯಾಕೋಬನು ಬಲಿಪೀಠಗಳ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿಪುಡಿಮಾಡಿ, ಅಶೇರ ಸ್ತಂಭಗಳನ್ನೂ ಧೂಪವೇದಿಗಳನ್ನೂ ಇನ್ನು ಪ್ರತಿಷ್ಠಾಪಿಸದೆ ಹೋದರೆ ಅದೇ ಯಾಕೋಬನ ಅಪರಾಧಕ್ಕೆ ಪ್ರಾಯಶ್ಚಿತ್ತವಾಗುವುದು ಮತ್ತು ಅವನ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲವು ಇದೇ ಆಗಿದೆ.
10ಕೋಟೆಯ ಪಟ್ಟಣವು ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸ ಸ್ಥಾನವಾಗುವುದು. ಅಲ್ಲಿ ದನಕರುಗಳು ಮೇದು ಮಲಗುವ ಗೋಮಾಳವಾಗಿದೆ. ಅವು ಅಲ್ಲಿನ ಚಿಗುರುಗಳನ್ನು ತಿಂದುಬಿಡುವುವು.
11ಅಲ್ಲಿನ ರೆಂಬೆಗಳು ಒಣಗಿ ಮುರಿದುಹೋಗಿವೆ. ಸ್ತ್ರೀಯರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು. ಏಕೆಂದರೆ ಇದು ವಿವೇಕವಿಲ್ಲದ ಜನ. ಆದ್ದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವುದಿಲ್ಲ. ಅವರ ಸೃಷ್ಟಿಕರ್ತನು ಅವರನ್ನು ಕರುಣಿಸುವುದಿಲ್ಲ.
12ಇಸ್ರಾಯೇಲರೇ, ಯೆಹೋವ ದೇವರು ಯೂಫ್ರೇಟೀಸ್ ನದಿ ಮೊದಲುಗೊಂಡು ಈಜಿಪ್ಟ್ ದೇಶದ ನದಿಯವರೆಗೆ ಹೊಡೆಯುವರು, ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕೂಡಿಸುವರು.
13ಆ ದಿನದಲ್ಲಿ ದೊಡ್ಡ ತುತೂರಿಯು ಊದಲಾಗುವುದು. ಆಗ ಅಸ್ಸೀರಿಯ ದೇಶದಲ್ಲಿ ಚದರಿಹೋದವರೂ, ಈಜಿಪ್ಟ್ ದೇಶದಲ್ಲಿ ಗಡೀಪಾರಾದವರೂ, ಯೆರೂಸಲೇಮಿನ ಪರಿಶುದ್ಧ ಪರ್ವತದ ಬಳಿಗೆ ಬಂದು ಯೆಹೋವ ದೇವರನ್ನು ಆರಾಧಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.