People from many nations sharing a mountain feast while mourners have their tears gently wiped

ಯೆಶಾಯ 25

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಕ್ರೂರ ಪಟ್ಟಣಗಳನ್ನು ತಗ್ಗಿಸಿ ದೀನರಿಗೆ ಆಶ್ರಯ ನೀಡಿದ್ದಕ್ಕಾಗಿ ಯೆಶಾಯನು ದೇವರನ್ನು ಸ್ತುತಿಸುತ್ತಾನೆ. ಪರ್ವತದ ಮೇಲೆ, ಮರಣವೂ ಅವಮಾನವೂ ತೆಗೆಯಲ್ಪಡುವಾಗ ಎಲ್ಲಾ ಜನರು ಸಮೃದ್ಧ ಔತಣವನ್ನು ಹಂಚಿಕೊಳ್ಳುತ್ತಾರೆ, ಬಹುಕಾಲ ನಿರೀಕ್ಷಿಸಿದ ರಕ್ಷಣೆಯಲ್ಲಿ ಆನಂದದ ಭರವಸೆಯನ್ನು ಹುಟ್ಟಿಸುತ್ತಾರೆ.
ರಕ್ಷಣೆಜನಾಂಗಗಳುಸಾಂತ್ವನವಿಜಯ
1ಯೆಹೋವ ದೇವರೇ, ನೀವೇ ನನ್ನ ದೇವರು. ನೀವು ಸತ್ಯ ಪ್ರಾಮಾಣಿಕತೆಗಳನ್ನು ಆಲೋಚಿಸಿ, ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಕಾರ್ಯಗಳನ್ನು ನಡೆಸಿದ ಕಾರಣ ನಿಮ್ಮನ್ನು ಉನ್ನತಪಡಿಸಿ, ನಿಮ್ಮ ನಾಮವನ್ನು ಕೊಂಡಾಡುವೆನು.
2ಏಕೆಂದರೆ ನೀವು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳುದಿಬ್ಬವನ್ನಾಗಿಯೂ ವಿದೇಶಿಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಬಾರದಂತೆ ಮಾಡಿದ್ದೀರಿ.
3ಬಲಿಷ್ಠವಾದ ಜನಾಂಗವು ನಿಮ್ಮನ್ನು ಘನಪಡಿಸುವರು, ಭಯಂಕರವಾದ ಜನರ ಪಟ್ಟಣವು ನಿಮಗೆ ಅಂಜುವುದು.
4ನೀವು ದೀನರಿಗೆ ಕೋಟೆಯೂ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ, ಭೀಕರರ ಶ್ವಾಸವು ಬಿಸಿಲಿಗೆ ನೆರಳೂ, ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋಸ್ಕರ ಆಶ್ರಯವೂ ಆಗಿದ್ದೀರಿ.
5ಮೇಘವು ಒಣನೆಲದ ಕಾವನ್ನು ಆರಿಸುವ ಹಾಗೆ, ನೀವು ವಿದೇಶಿಯರ ಗದ್ದಲವನ್ನು ಅಡಗಿಸುವಿರಿ; ಮೋಡದ ನೆರಳಿನಿಂದ ಬಿಸಿಲು ತಡೆಯುವ ಹಾಗೆಯೇ, ನೀವು ಕ್ರೂರಿಗಳ ಉತ್ಸಾಹಗಾನವನ್ನು ನಿಲ್ಲಿಸಿಬಿಡುವಿರಿ.
6ಸೇನಾಧೀಶ್ವರ ಯೆಹೋವ ದೇವರು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ ಸಾರವತ್ತಾದ ಕೊಬ್ಬಿದ ಔತಣವನ್ನೂ, ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ, ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸವನ್ನೂ ಸಿದ್ಧಮಾಡುವರು.
7ಸಮಸ್ತ ಜನಾಂಗಗಳನ್ನು ಮುಚ್ಚಿರುವ ಪರದೆಯನ್ನೂ, ಸಕಲ ದೇಶದವರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ ತೆಗೆದುಹಾಕುವರು.
8ಅವರು ಮರಣವನ್ನು ಜಯದಲ್ಲಿ ನುಂಗಿಬಿಡುವರು. ಸಾರ್ವಭೌಮ ಯೆಹೋವ ದೇವರು ಎಲ್ಲಾ ಮುಖಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವರು. ತಮ್ಮ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕುವರು. ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.
9ಆ ದಿನದಲ್ಲಿ ಜನರು, “ಇಗೋ, ಇವರೇ ನಮ್ಮ ದೇವರು, ನಾವು ಇವರನ್ನೇ ನಂಬಿದ್ದೇವೆ. ಇವರೇ ನಮ್ಮನ್ನು ರಕ್ಷಿಸುವರು. ಇವರೇ ಯೆಹೋವ ದೇವರು, ನಾವು ಇವರನ್ನೇ ನಂಬಿದ್ದೇವೆ, ನಾವು ಇವರ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷಪಡುವೆವು,” ಎಂದು ಹೇಳುವರು.
10ಈ ಪರ್ವತದಲ್ಲಿ ಯೆಹೋವ ದೇವರ ಕೈ ವಿಶ್ರಮಿಸಿಕೊಳ್ಳುವುದು. ಒಣಹುಲ್ಲನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ತುಳಿತಕ್ಕೆ ಈಡಾಗುವುದು.
11ಈಜುವವನು ಈಜುವುದಕ್ಕೆ ಕೈಗಳನ್ನು ಹರಡಿಕೊಂಡ ಹಾಗೆ, ಅವರು ತಮ್ಮ ಕೈಗಳನ್ನು ಚಾಚುವರು. ಆದರೆ ದೇವರು ಅವರ ಗರ್ವವನ್ನೂ ಅವರ ಕೈ ಕೆಲಸವನ್ನೂ ತಗ್ಗಿಸಿಬಿಡುವರು.
12ದುರ್ಗದಂತೆ ಎತ್ತರವಾಗಿರುವ ನಿನ್ನ ಕೋಟೆಗಳನ್ನು ಕೆಡವಿ, ತಗ್ಗಿಸಿ, ನೆಲಸಮಮಾಡುವರು, ಅದು ಧೂಳುಪಾಲಾಗುವುದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.