
ಇಬ್ರಿಯರಿಗೆ 6
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಪ್ರೌಢತೆಯ ಕಡೆಗೆ ಸಾಗುವಂತೆ ಲೇಖಕನು ಪ್ರೇರೇಪಿಸಿ, ಆಳವಾದ ಪಾಲುಗಾರಿಕೆಯ ನಂತರ ಬಿದ್ದುಹೋಗುವುದರ ವಿರುದ್ಧ ಗಂಭೀರವಾಗಿ ಎಚ್ಚರಿಸುತ್ತಾನೆ. ಆದರೂ ಓದುಗರ ಪ್ರೀತಿಯ ಸೇವೆಯಲ್ಲಿ ಭರವಸೆ ಉಳಿದಿದೆ; ದೇವರ ವಾಗ್ದಾನ ಮತ್ತು ಆಣೆಯು ತಾಳ್ಮೆಯ ಬಾಧ್ಯರಿಗೆ ಲಂಗರಿನಂತೆ ನಿಶ್ಚಿತ ನಿರೀಕ್ಷೆಯನ್ನು ನೀಡುತ್ತವೆ.
ಪ್ರೌಢತೆಎಚ್ಚರಿಕೆತಾಳ್ಮೆಯ ಬಾಧ್ಯತೆಲಂಗರಿನ ನಿರೀಕ್ಷೆ
1ಆದ್ದರಿಂದ ಕ್ರಿಸ್ತ ಯೇಸುವಿನ ವಿಷಯವಾದ ಪ್ರಾಥಮಿಕ ಉಪದೇಶಗಳನ್ನು ಬಿಟ್ಟು, ನಿರ್ಜೀವ ಕ್ರಿಯೆಗಳಿಂದ ದೇವರ ಕಡೆಗೆ ತಿರುಗಿಕೊಳ್ಳುವುದೂ ದೇವರಲ್ಲಿ ನಂಬಿಕೆಯಿಡುವುದೂ
2ದೀಕ್ಷಾಸ್ನಾನಗಳ ಬೋಧನೆಯೂ ಹಸ್ತಾರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಮುಂತಾದವುಗಳನ್ನು ಪುನಃ ಅಸ್ತಿವಾರವನ್ನಾಗಿ ಹಾಕದೆ, ನಾವು ಪರಿಪೂರ್ಣತೆಗೆ ಹೋಗೋಣ.
3ದೇವರು ಅನುಮತಿಸಿದರೆ ನಾವು ಇದನ್ನು ಮಾಡೋಣ.
4ಒಂದು ಸಾರಿ ಬೆಳಕನ್ನು ಪಡೆದು, ಪರಲೋಕದ ವರವನ್ನು ರುಚಿ ನೋಡಿ, ಪವಿತ್ರಾತ್ಮ ದೇವರ ಪಾಲನ್ನು ಹೊಂದಿ,
5ದೇವರ ವಾಕ್ಯದ ಒಳ್ಳೆತನವನ್ನೂ ಬರುವ ಲೋಕದ ಶಕ್ತಿಯನ್ನೂ ರುಚಿ ನೋಡಿದವರು
6ಬಿದ್ದುಹೋದರೆ, ಅವರನ್ನು ತಿರುಗಿ ಪಶ್ಚಾತ್ತಾಪಕ್ಕೆ ನಡೆಸುವುದು ಅಸಾಧ್ಯ. ಏಕೆಂದರೆ ಅವರು ತಾವಾಗಿಯೇ ದೇವರ ಪುತ್ರ ಆಗಿರುವವರನ್ನು ಪುನಃ ಶಿಲುಬೆಗೆ ಹಾಕುವವರೂ ಅವರನ್ನು ಬಹಿರಂಗವಾಗಿ ಅವಮಾನ ಪಡಿಸುವವರೂ ಆಗಿರುತ್ತಾರೆ.
7ಭೂಮಿಯು ತನ್ನ ಮೇಲೆ ಆಗಾಗ್ಗೆ ಬೀಳುವ ಮಳೆಯನ್ನು ಹೀರಿಕೊಂಡು ಅದು ತನ್ನ ಒಡೆಯನಿಗೆ ಯೋಗ್ಯವಾದ ಬೆಳೆಯನ್ನು ಕೊಡುವುದಾದರೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ.
8ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ನಿಷ್ಪ್ರಯೋಜಕವಾದದ್ದಾಗಿ ಶಾಪಕ್ಕೆ ಗುರಿಯಾಗಿ, ಕೊನೆಗದು ಬೆಂಕಿಗೆ ತುತ್ತಾಗುತ್ತದೆ.
9ಪ್ರಿಯರೇ, ನಾವು ಈ ರೀತಿಯಾಗಿ ಮಾತನಾಡಿದರೂ ನಿಮ್ಮ ವಿಷಯವಾಗಿಯೂ ನೀವು ಉತ್ತಮವಾದವುಗಳನ್ನೂ ರಕ್ಷಣೆಯ ಕಾರ್ಯಗಳನ್ನೂ ಹೊಂದಿದ್ದೀರಿ ಎಂಬ ನಿಶ್ಚಯ ನಮಗಿದೆ.
10ಅವರು ನಿಮ್ಮ ಸೇವೆಯನ್ನೂ ನೀವು ಪರಿಶುದ್ಧರಿಗೆ ಸೇವೆಮಾಡಿದ್ದರಲ್ಲಿ ಇನ್ನೂ ಮಾಡುತ್ತಿರುವುದರಲ್ಲಿ ದೇವರ ಹೆಸರಿನ ಕಡೆಗೆ ತೋರಿಸಿದ ಪ್ರೀತಿಯನ್ನೂ ಅವರು ಮರೆಯುವುದಕ್ಕೆ ದೇವರು ಅನ್ಯಾಯಗಾರರಲ್ಲ.
11ಅಂತ್ಯದವರೆಗೆ ನೀವು ನಿಮ್ಮ ನಿರೀಕ್ಷೆಯ ಪೂರ್ಣ ನಿಶ್ಚಯವನ್ನು ಗ್ರಹಿಸುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ.
12ನೀವು ಸೋಮಾರಿಗಳಾಗಿರಬಾರದು. ವಿಶ್ವಾಸದಿಂದಲೂ ತಾಳ್ಮೆಯಿಂದಲೂ ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವವರಾಗಿರಬೇಕು.
13ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮಗಿಂತಲೂ ಹೆಚ್ಚು ದೊಡ್ಡವರಾರೂ ಇಲ್ಲದ್ದರಿಂದ ತಮ್ಮ ಮೇಲೆ ಆಣೆಯಿಟ್ಟು,
14“ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು, ನಿನ್ನ ಸಂತಾನವನ್ನು ಹೆಚ್ಚಿಸೇ ಹೆಚ್ಚಿಸುವೆನು,” ಎಂದು ಹೇಳಿದರಷ್ಟೆ.
15ಹೀಗೆ ಅಬ್ರಹಾಮನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಪಡೆದುಕೊಂಡನು.
16ಮನುಷ್ಯರು ನಿಜವಾಗಿಯೂ ದೊಡ್ಡವರ ಮೇಲೆ ಆಣೆ ಇಡುತ್ತಾರಷ್ಟೆ. ಆಣೆಯನ್ನು ದೃಢಪಡಿಸುವುದು ಪ್ರತಿಯೊಂದು ವಿವಾದಕ್ಕೂ ಅಂತ್ಯವಾಗಿರುವುದು.
17ದೇವರು ತಮ್ಮ ಮಾರ್ಪಡದ ಉದ್ದೇಶವನ್ನು ವಾಗ್ದಾನದ ಬಾಧ್ಯಸ್ಥರಿಗೆ ಇನ್ನೂ ಹೆಚ್ಚಾಗಿಯೇ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದರು.
18ದೇವರ ವಾಗ್ದಾನ ಮತ್ತು ಆಣೆ ಇವೆರಡೂ ಬದಲಾಗದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಸುಳ್ಳಾಡುವವರಲ್ಲ. ಇದರಿಂದಾಗಿ, ದೇವರ ಆಶ್ರಯವನ್ನು ಹೊಂದುವುದಕ್ಕೆ ಓಡಿಬಂದಿರುವ ನಾವು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಳ್ಳಲು ಬಲವಾದ ಉತ್ತೇಜನ ಉಂಟಾಯಿತು.
19ಈ ನಿರೀಕ್ಷೆಯು ನಮ್ಮ ಆತ್ಮಕ್ಕೆ ನಿಶ್ಚಯವಾದದ್ದೂ ಸ್ಥಿರವಾದದ್ದೂ ಆಗಿರುವ ಲಂಗರದ ಹಾಗಿದೆ. ಅದು ಅತಿ ಪರಿಶುದ್ಧಸ್ಥಳದ ತೆರೆಯ ಒಳಗಡೆ ಪ್ರವೇಶಿಸುವಂಥದ್ದೂ ಆಗಿದೆ.
20ಯೇಸು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಮಹಾಯಾಜಕರಾಗಿ ಅತಿ ಪರಿಶುದ್ಧ ಸ್ಥಳಕ್ಕೆ ಮುಂದಾಗಿ ಹೋಗಿ ಯೇಸು ನಮ್ಮ ಪರವಾಗಿ ಪ್ರವೇಶಿಸಿದ್ದಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.