
ಇಬ್ರಿಯರಿಗೆ 3
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಮೋಶೆಯು ದೇವರ ಮನೆಯಲ್ಲಿ ಸೇವಕನಾಗಿ ನಂಬಿಗಸ್ತನಾಗಿದ್ದರೂ ಯೇಸು ಮೋಶೆಗಿಂತ ಹೆಚ್ಚಿನ ಗೌರವಕ್ಕೆ ಯೋಗ್ಯನು. ಇಸ್ರಾಯೇಲಿನ ಅರಣ್ಯದ ವೈಫಲ್ಯದ ಮೂಲಕ ಹೃದಯಗಳನ್ನು ಕಠಿಣಗೊಳಿಸದಂತೆ, ಅಪನಂಬಿಕೆಗೆ ಬೀಳದಂತೆ ಅಥವಾ ಭರವಸೆಯನ್ನು ಬಿಡದಂತೆ ಈ ಅಧ್ಯಾಯವು ಓದುಗರನ್ನು ಎಚ್ಚರಿಸುತ್ತದೆ.
ಯೇಸು ಮತ್ತು ಮೋಶೆದೇವರ ಮನೆಕಠಿಣ ಹೃದಯಗಳುನಂಬಿಗಸ್ತಿಕೆ
1ಆದ್ದರಿಂದ ಪರಿಶುದ್ಧರಾದ ಪ್ರಿಯರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಅರಿಕೆಮಾಡುವ ಅಪೊಸ್ತಲರೂ ಮಹಾಯಾಜಕರೂ ಆಗಿರುವ ಯೇಸುವನ್ನೇ ಆಲೋಚಿಸಿರಿ.
2ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ ಯೇಸು ತಮ್ಮನ್ನು ನೇಮಿಸಿದವರಿಗೆ ನಂಬಿಗಸ್ತರಾಗಿದ್ದಾರೆ.
3ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ, ಮೋಶೆಗಿಂತ ಯೇಸು ಹೆಚ್ಚಾದ ಮಹಿಮೆಗೆ ಯೋಗ್ಯರೆಂದು ಎಣಿಸಿಕೊಂಡಿದ್ದಾರೆ.
4ಏಕೆಂದರೆ ಪ್ರತಿಯೊಂದು ಮನೆಯೂ ಯಾರೋ ಒಬ್ಬರಿಂದ ಕಟ್ಟಲಾಗುತ್ತದೆ. ಆದರೆ ಸಮಸ್ತವನ್ನು ಕಟ್ಟಿದವರು ದೇವರೇ.
5“ನಿಜವಾಗಿಯೂ ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು.” ಅವನು, ಮುಂದೆ ಪ್ರಕಟವಾಗಬೇಕಾಗಿದ್ದ ಒಬ್ಬರಿಗೆ ಸಾಕ್ಷಿಯಾಗಿದ್ದನು.
6ಕ್ರಿಸ್ತ ಯೇಸುವಾದರೋ ಮಗನಾಗಿ ದೇವರ ಮನೆಯ ಮೇಲೆ ನಂಬಿಗಸ್ತರಾಗಿದ್ದಾರೆ. ಆದುದರಿಂದ ನಾವು ನಮ್ಮ ಧೈರ್ಯವನ್ನೂ ನಾವು ಹೊಗಳಿಕೊಳ್ಳುವ ನಿರೀಕ್ಷೆಯನ್ನೂ ಕಡೆಯತನಕ ದೃಢವಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ.
7ಆದ್ದರಿಂದ ಪವಿತ್ರಾತ್ಮ ದೇವರು ಹೇಳುವ ಪ್ರಕಾರ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
8ಅರಣ್ಯದಲ್ಲಿದ್ದಾಗ ನನ್ನನ್ನು ಪರೀಕ್ಷಿಸಿದ ದಿನದಲ್ಲಿ ಕೋಪಕ್ಕೆ ಈಡುಮಾಡಿದಂತೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.
9ನಿಮ್ಮ ಪಿತೃಗಳು ನನ್ನನ್ನು ಕೆಣಕಿ ಪರೀಕ್ಷಿಸಿದರು, ನಲವತ್ತು ವರ್ಷ ನನ್ನ ಕಾರ್ಯಗಳನ್ನು ನೋಡಿದರು.
10ಆದ್ದರಿಂದ ನಾನು ಆ ಸಂತತಿಯವರ ಮೇಲೆ ಕೋಪಿಸಿಕೊಂಡು, ‘ಅವರು ಯಾವಾಗಲೂ ತಮ್ಮ ಹೃದಯದಲ್ಲಿ ತಪ್ಪಿಹೋಗುತ್ತಾರೆ, ಅವರು ನನ್ನ ಮಾರ್ಗಗಳನ್ನು ತಿಳಿದುಕೊಳ್ಳಲಿಲ್ಲ.’
11ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ!’ ಎಂದು ನಾನು ನನ್ನ ಕೋಪದಲ್ಲಿ ಪ್ರಮಾಣಮಾಡಿದೆನು!”
12ಪ್ರಿಯರೇ, ದೇವರನ್ನು ಬಿಟ್ಟುಹೋಗುವ ಅವಿಶ್ವಾಸಯುಳ್ಳ ದುಷ್ಟ ಹೃದಯವು ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ.
13ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ, “ಈ ಹೊತ್ತು” ಎಂಬುದು ಇರುವವರೆಗೆ ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.
14ಮೊದಲಿನಿಂದಿರುವ ನಮ್ಮ ನಿರೀಕ್ಷೆಯನ್ನು ಅಂತ್ಯದವರೆಗೂ ನಾವು ದೃಢವಾಗಿ ಹಿಡಿದುಕೊಳ್ಳುವುದಾದರೆ ಕ್ರಿಸ್ತ ಯೇಸುವಿನ ಭಾಗಿಗಳಾಗಿದ್ದೇವಲ್ಲಾ!
15ಈಗಲೇ ಹೇಳಿದಂತೆ: “ನೀವು ಈ ಹೊತ್ತು ದೇವರ ಸ್ವರವನ್ನು ಕೇಳಿದರೆ, ತಿರುಗಿಬಿದ್ದಾಗ ನಡೆದಂತೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”
16“ದೇವರು ನುಡಿದದ್ದನ್ನು ಕೇಳಿ ಕೋಪಗೊಂಡು ವಿರೋಧಿಸಿದವರು ಯಾರು? ಆದರೂ ಮೋಶೆಯ ಮೂಲಕ ಈಜಿಪ್ಟಿನಿಂದ ಹೊರಟು ಬಂದವರೆಲ್ಲರೂ ಹಾಗೆ ಮಾಡಲಿಲ್ಲವಲ್ಲಾ?
17ನಲವತ್ತು ವರ್ಷ ದೇವರು ಯಾರ ಮೇಲೆ ಕೋಪಗೊಂಡರು? ಪಾಪಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!
18ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲ!” ಎಂದು ಯಾರನ್ನು ಕುರಿತು ಅವರು ಪ್ರಮಾಣ ಮಾಡಿದರು, ಅವಿಧೇಯರಾದವರ ಕುರಿತಲ್ಲವೇ?
19ಅವರು ಸೇರಲಾರದೆ ಹೋದದ್ದು ಅವರ ಅವಿಶ್ವಾಸದಿಂದಲೇ ಎಂದು ಕಾಣುತ್ತೇವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.