An enormous cedar towers above nations and waterways but begins to lean as a dark storm gathers

ಯೆಹೆಜ್ಕೇಲನು 31

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಒಂದು ಕಾಲದಲ್ಲಿ ಆಳವಾದ ನೀರಿನಿಂದ ಪೋಷಿಸಲ್ಪಟ್ಟು ತನ್ನ ಕೊಂಬೆಗಳ ಕೆಳಗೆ ಜನಾಂಗಗಳಿಗೆ ಆಸರೆ ನೀಡಿದ ಭವ್ಯ ದೇವದಾರುವಿನಂತಿದ್ದ ಅಶ್ಶೂರವನ್ನು ಪರಿಗಣಿಸುವಂತೆ ಐಗುಪ್ತವನ್ನು ಕೇಳಲಾಗುತ್ತದೆ. ಮರವು ತನ್ನನ್ನು ಉನ್ನತಗೊಳಿಸಿಕೊಂಡ ಕಾರಣ ಅದನ್ನು ಕಡಿದು ಬಿದ್ದವರೊಂದಿಗೆ ಇಳಿಸಲಾಯಿತು, ಇದೇ ರೀತಿಯ ಅಹಂಕಾರದ ವಿರುದ್ಧ ಫರೋಹನಿಗೆ ಎಚ್ಚರಿಕೆ.
ಅಶ್ಶೂರಐಗುಪ್ತದೇವದಾರುಅಹಂಕಾರ
1ಹನ್ನೊಂದನೆಯ ವರ್ಷದ, ಮೂರನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:
2“ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನೊಂದಿಗೂ ಮತ್ತು ಅವನ ಸಮೂಹದೊಂದಿಗೂ ಮಾತನಾಡಿ, “ ‘ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನವಾಗಿರುವೆ?
3ಅಸ್ಸೀರಿಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಬಹಳ ಎತ್ತರವಾಗಿದೆ, ಅದರ ತುದಿಯು ದಟ್ಟವಾದ ಕೊಂಬೆಗಳ ನಡುವೆಯಿತ್ತು.
4ಅದನ್ನು ಜಲಪ್ರವಾಹಗಳು ಬೆಳೆಸಿದವು, ಆಳವಾದ ಬುಗ್ಗೆಗಳು ಅದನ್ನು ಎತ್ತರಕ್ಕೆ ಬೆಳೆಸಿದವು. ಅವುಗಳ ತೊರೆಗಳು ಅದರ ಬುಡದ ಸುತ್ತಲೂ ಹರಿದು ತಮ್ಮ ಕಾಲುವೆಗಳನ್ನು ಹೊಲದ ಎಲ್ಲಾ ಮರಗಳಿಗೆ ಕಳುಹಿಸಿದವು.
5ಆದ್ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರಗಳಿಗಿಂತ ಎತ್ತರವಾಗಿತ್ತು. ಅದು ಹಬ್ಬಿದ್ದುದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು.
6ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು. ಅದರ ರೆಂಬೆಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮ ಕೊಟ್ಟವು. ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು.
7ಹೀಗೆ ಅದರ ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ನೀಳವಾದ ಕೊಂಬೆಗಳಿಂದ ಸುಂದರವಾಗಿತ್ತು. ಏಕೆಂದರೆ ಅದರ ಬೇರು ಸಾಕಷ್ಟು ನೀರಿನ ಆಸರೆ ಪಡೆದಿತ್ತು.
8ದೇವರ ತೋಟದ ದೇವದಾರುಗಳು ಅದನ್ನು ಮರೆಮಾಡಲಿಲ್ಲ. ತುರಾಯಿ ಮರಗಳು ಅದರ ಕೊಂಬೆಗಳಿಗೆ ಸಮವಾಗಲಿಲ್ಲ. ಆಲದ ಮರಗಳು ಅದರ ರೆಂಬೆಗಳಷ್ಟೂ ಇಲ್ಲ. ಆ ದೇವರ ತೋಟದ ಯಾವುದೇ ಮರವು ಇದರ ಸೌಂದರ್ಯಕ್ಕೆ ಸಮವಾಗಿಲ್ಲ.
9ನಾನು ಅದನ್ನು ಅದರ ಕೊಂಬೆಗಳ ಸಮೂಹದಿಂದ ಸುಂದರಗೊಳಿಸಿದೆನು. ಅದರಿಂದ ದೇವರ ತೋಟದಲ್ಲಿನ ಏದೆನಿನ ಮರಗಳೆಲ್ಲಾ ಅದರ ಮೇಲೆ ಹೊಟ್ಟೆಕಿಚ್ಚು ಪಟ್ಟವು.
10“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಅವನು ಎತ್ತರವಾಗಿ ಬೆಳೆದು ತನ್ನ ತುದಿ ಮೋಡಗಳನ್ನು ಮುಟ್ಟುವಷ್ಟು ನೀಳವಾಗಿದ್ದುದರ ಬಗ್ಗೆ ಗರ್ವಪಟ್ಟನು.
11ಆದ್ದರಿಂದ ನಾನು ಅವನನ್ನು ಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಕೊಟ್ಟಿದ್ದೇನೆ. ಇವನು ನಿಶ್ಚಯವಾಗಿ ಅದನ್ನು ದಂಡಿಸುತ್ತಾನೆ ಅದರ ದುಷ್ಟತ್ವದ ನಿಮಿತ್ತ ನಾನು ಅದನ್ನು ತಳ್ಳಿಹಾಕಿದ್ದೇನೆ.
12ಜನಾಂಗಗಳಲ್ಲಿ ಭಯಂಕರವಾದ ವಿದೇಶಿಯರು ಅದನ್ನು ಕಡಿದುಹಾಕುವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅದರ ಕೊಂಬೆಗಳು ಬೀಳುವುವು. ದೇಶದ ಹಳ್ಳಗಳಲ್ಲೆಲ್ಲಾ ಅದರ ರೆಂಬೆಗಳು ಮುರಿದು ಹೋಗುವುವು. ಭೂಮಿಯ ಜನಗಳೆಲ್ಲಾ ಅದರ ನೆರಳಿನಿಂದ ದೂರ ಸರಿದು ಅದನ್ನು ಬಿಟ್ಟುಬಿಡುವರು.
13ಕೆಳಗೆ ಬಿದ್ದ ಮರದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವುವು. ಎಲ್ಲಾ ಕಾಡುಮೃಗಗಳು ಅದರ ರೆಂಬೆಗಳ ಬಳಿಯಲ್ಲಿರುವುವು.
14ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗುಲಿಸದೆ ಇರುವುದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವುವು. ಅವುಗಳಿಗೆ ಅಧೋಲೋಕವೇ ಗತಿಯಾಗುವುದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವುವು.
15“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮಾಧಿಗೆ ಇಳಿದ ದಿನದಲ್ಲಿ ನಾನು ಆಳವಾದ ಬುಗ್ಗೆಗಳನ್ನು ದುಃಖದಿಂದ ಮುಚ್ಚಿದೆನು; ನಾನು ಅದರ ಪ್ರವಾಹವನ್ನು ತಡೆಹಿಡಿದೆನು. ಮಹಾಜಲವನ್ನು ನಿಲ್ಲಿಸಿದೆನು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಿಡುವಂತೆ ಮಾಡಿದೆನು. ಬಯಲಿನ ಮರಗಳೆಲ್ಲಾ ಕುಗ್ಗಿಹೋದವು.
16ನಾನು ಅದನ್ನು ಕುಳಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು. ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವುವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿಕೊಂಡವು.
17ಇದಲ್ಲದೆ, ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯೆ ಅದರ ನೆರಳನ್ನು ಆಶ್ರಯಿಸಿದವರು, ಅದರೊಂದಿಗೆ ಪಾತಾಳಕ್ಕಿಳಿದು, ಖಡ್ಗಹತರ ಜೊತೆಗೆ ಸೇರಿದರು.
18“ ‘ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆಯಿಂದಲೂ ಏದೆನಿನ ಯಾವ ಮರಗಳಿಗೆ ಸಮನಾಗಿರುವೆ? ಆದರೂ ನೀನು ಏದೆನಿನ ಮರಗಳ ಸಂಗಡ ಭೂಮಿಯ ಕೆಳಭಾಗಗಳಿಗೆ ದೂಡಿದವನಾಗುವೆ. ಸುನ್ನತಿಯಿಲ್ಲದವರ ಮಧ್ಯದಲ್ಲಿ ಖಡ್ಗದಿಂದ ಹತರಾದವರ ಸಂಗಡ ಮಲಗುವೆ. “ ‘ಇದೇ ಫರೋಹನನೂ ಅವನ ಎಲ್ಲಾ ಜನಸಮೂಹವೂ ಆಗಿವೆ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.