
ಯೆಹೆಜ್ಕೇಲನು 2
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಆತ್ಮವು ಯೆಹೆಜ್ಕೇಲನನ್ನು ಎಬ್ಬಿಸಿ, ದಂಗೆಕೋರ ಜನರು ಕೇಳಲಿ ಬಿಡಲಿ ಅವರಿಗೆ ಮಾತನಾಡುವಂತೆ ನೇಮಿಸುತ್ತದೆ. ಅವರ ವೈರತ್ವಕ್ಕೆ ಅವನು ಭಯಪಡಬಾರದು. ಅವನು ಸ್ವೀಕರಿಸಬೇಕಾದ ಸಂದೇಶವಾಗಿ ಪ್ರಲಾಪ ಮತ್ತು ಎಚ್ಚರಿಕೆಯಿಂದ ತುಂಬಿದ ಸುರುಳಿಯನ್ನು ಅವನ ಮುಂದೆ ಚಾಚಲಾಗುತ್ತದೆ.
ನಿಯೋಗಧೈರ್ಯದಂಗೆಪ್ರವಾದನೆ
1ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಎದ್ದು ನಿಲ್ಲು, ನಿನ್ನ ಸಂಗಡ ಮಾತನಾಡಬೇಕು.”
2ಹೀಗೆ ಅವರು ನನ್ನ ಸಂಗಡ ಮಾತನಾಡುವಾಗ, ದೇವರಾತ್ಮರು ನನ್ನೊಳಗೆ ಪ್ರವೇಶಿಸಿ, ನನ್ನನ್ನು ನಿಂತುಕೊಳ್ಳುವಂತೆ ಮಾಡಿದರು. ಆಗ ಅವರು ನನ್ನೊಂದಿಗೆ ಮಾತನಾಡುವುದನ್ನು ಚೆನ್ನಾಗಿ ಕೇಳಿದೆನು.
3ಅವರು, “ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿ ಬಿದ್ದಿರುವ ಮತ್ತು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ. ಅವರೂ, ಅವರ ಪಿತೃಗಳೂ ಇಂದಿನವರೆಗೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ.
4ಅವರು ಕಠಿಣ ಹೃದಯದವರು ಮತ್ತು ಹಠಮಾರಿ ಆಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ. ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಹೇಳಬೇಕು.
5ಅವರು ಕೇಳಲಿ ಅಥವಾ ಕೇಳದೇ ಇರಲಿ, ಏಕೆಂದರೆ ಅವರು ತಿರುಗಿಬೀಳುವ ಜನರು, ಆದರೆ ತಮ್ಮೊಳಗೆ ಪ್ರವಾದಿ ಇರುವನೆಂದು ತಿಳಿದುಕೊಂಡರೆ ಸಾಕು.
6ಮನುಷ್ಯಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯೆ ಇದ್ದರೂ, ಅವರಿಗೆ ಭಯಪಡಬೇಡ. ಅವರ ಗದರಿಕೆಗೆ ಹೆದರದಿರು. ಅವರು ದ್ರೋಹಿ ವಂಶದವರು. ಅವರ ಬಿರುನುಡಿಗೆ ದಿಗಿಲು ಪಡಬೇಡ.
7ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು. ಅವರು ಕೇಳಿದರೂ ಸರಿ, ಕೇಳದಿದ್ದರೂ ಸರಿ, ಏಕೆಂದರೆ ಅವರು ತಿರುಗಿಬೀಳುವ ಜನರು.
8ಆದರೆ ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವುದನ್ನು ಕೇಳು: ಆ ತಿರುಗಿಬೀಳುವ ಜನರ ಹಾಗೆ ನೀನೂ ತಿರುಗಿಬೀಳಬೇಡ. ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವುದನ್ನು ತಿನ್ನು,” ಎಂದರು.
9ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು. ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು.
10ಆ ಸುರುಳಿಯನ್ನು ನನ್ನೆದುರಿನಲ್ಲೇ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಪ್ರಲಾಪ, ಶೋಕ ಮತ್ತು ಶಾಪದ ಪದಗಳನ್ನು ಬರೆಯಲಾಗಿತ್ತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.