
ಯೆಹೆಜ್ಕೇಲನು 15
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ದ್ರಾಕ್ಷಿಬಳ್ಳಿಯ ಮರವು ಸಾಮಾನ್ಯ ಕಾಡಿನ ಮರಕ್ಕಿಂತ ಕಡಿಮೆ ಉಪಯುಕ್ತ ಮತ್ತು ಸುಟ್ಟ ನಂತರ ಸಂಪೂರ್ಣ ನಿಷ್ಪ್ರಯೋಜಕ. ಈ ಚಿಕ್ಕ ಸಾಮ್ಯದ ಮೂಲಕ, ಯೆರೂಸಲೇಮನ್ನು ಸುಟ್ಟ ಬಳ್ಳಿಯ ಮರಕ್ಕೆ ಹೋಲಿಸಲಾಗಿದೆ: ನಿರಂತರ ಅಪನಂಬಿಗಸ್ತಿಕೆಯು ಅದನ್ನು ತನ್ನ ಉದ್ದೇಶವನ್ನು ಈಡೇರಿಸಲಾಗದಂತೆ ಮಾಡಿದ ಕಾರಣ ಒಪ್ಪಿಸಲ್ಪಟ್ಟಿದೆ.
ಬಳ್ಳಿಯೆರೂಸಲೇಮ್ನಂಬಿಗಸ್ತಿಕೆನ್ಯಾಯತೀರ್ಪು
1ಯೆಹೋವ ದೇವರ ವಾಕ್ಯವು ನನಗೆ ಬಂದಿತು,
2“ಮನುಷ್ಯಪುತ್ರನೇ, ದ್ರಾಕ್ಷಿ ಗಿಡವು ಅಡವಿಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?
3ಇದರಿಂದ ಕಟ್ಟಿಗೆಯನ್ನು ತೆಗೆದುಕೊಂಡು ಯಾವ ಕೆಲಸವನ್ನಾದರೂ ಮಾಡುವರೋ ಅಥವಾ ಅದರ ಮೇಲೆ ಯಾವನನ್ನಾದರೂ ನೇತುಹಾಕುವುದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?
4ಇದನ್ನು ಬೆಂಕಿಗೆ ಸೌದೆಯಾಗಿ ಹಾಕುತ್ತಾರೆ. ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡುತ್ತದೆ. ಅದರ ಮಧ್ಯ ಭಾಗವು ಸುಟ್ಟು ಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವುದೋ?
5ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ, ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟುಹೋದ ಮೇಲೆ ಯಾವ ಕೆಲಸಕ್ಕೆ ಬಂದೀತು?”
6“ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ವನವೃಕ್ಷಗಳಲ್ಲಿ ದ್ರಾಕ್ಷಿಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಯಾಗಿ ಮಾಡಿರುವೆನೋ ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ವಿನಾಶಕ್ಕೆ ಗುರಿಮಾಡಿದ್ದೇನೆ.
7ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಬೆಂಕಿಯೊಳಗಿಂದ ಹೊರಗೆ ಬಂದು ತಪ್ಪಿಸಿಕೊಂಡರೂ, ಮತ್ತೊಂದು ಬೆಂಕಿಯು ಅವರನ್ನು ದಹಿಸಿಬಿಡುವುದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ, ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.
8ಅವರು ದ್ರೋಹ ಮಾಡಿದ್ದರಿಂದ ನಾನು ಆ ದೇಶವನ್ನು ಹಾಳುಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.