Ezekiel watches radiant living creatures and interlocking wheels rise above Jerusalem's temple in a luminous cloud

ಯೆಹೆಜ್ಕೇಲನು 10

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಯೆರೂಸಲೇಮಿನ ಮೇಲೆ ಬೆಂಕಿ ಚದುರಿಸಲ್ಪಡುವಾಗ ದರ್ಶನದ ಚಕ್ರಗಳೂ ಕೆರೂಬಿಗಳೂ ಮತ್ತೆ ಕಾಣಿಸುತ್ತವೆ. ಕೆಬಾರಿನ ಜೀವಿಗಳನ್ನು ಯೆಹೆಜ್ಕೇಲನು ಗುರುತಿಸುತ್ತಾನೆ. ದೈವಿಕ ಮಹಿಮೆಯು ಹೊಸ್ತಿಲಿನಿಂದ ಪೂರ್ವದ ಬಾಗಿಲಿಗೆ ಚಲಿಸಿ, ಭ್ರಷ್ಟ ದೇವಾಲಯದಿಂದ ಹೊರಡುವಿಕೆಯನ್ನು ಸೂಚಿಸುತ್ತದೆ.
ದೈವಿಕ ಮಹಿಮೆಕೆರೂಬಿಗಳುದೇವಾಲಯಹೊರಡುವಿಕೆ
1ಆಗ ನಾನು ನೋಡಲಾಗಿ, ಕೆರೂಬಿಗಳ ತಲೆಯ ಮೇಲಿದ್ದ ಆಕಾಶಮಂಡಲದಲ್ಲಿ ನೀಲಮಣಿಯಂತೆ ಸಿಂಹಾಸನದ ಆಕಾರದಂತಿರುವ ರೂಪವನ್ನು ಕಂಡೆನು. ಅದು ಅವುಗಳ ಮೇಲೆ ಕಾಣಿಸಿತು.
2ಯೆಹೋವ ದೇವರು ನಾರುಮಡಿಯನ್ನು ಧರಿಸಿಕೊಂಡಿದ್ದ ಮನುಷ್ಯನಿಗೆ, “ನೀನು ಕೆರೂಬಿಗಳ ಕೆಳಗೆ ಇರುವ ಸುಡುವ ಕಲ್ಲಿದ್ದಲನ್ನು ನಿನ್ನ ಕೈತುಂಬ ತೆಗೆದುಕೊಂಡು ಅದನ್ನು ಪಟ್ಟಣದ ಮೇಲೆ ಎರಚು,” ಎಂದರು. ಹಾಗೆಯೇ ನಾನು ನೋಡುತ್ತಿದ್ದಂತೆಯೇ ಅವನು ಒಳಗೆ ಪ್ರವೇಶಿಸಿದನು.
3ಆ ಮನುಷ್ಯನು ಒಳಗೆ ಹೋದಾಗ ಕೆರೂಬಿಗಳು ಆಲಯದ ದಕ್ಷಿಣ ಭಾಗದ ಬಳಿಯಲ್ಲಿ ನಿಂತಿದ್ದರು. ಮೇಘವು ಒಳಗಿನ ಅಂಗಳವನ್ನು ತುಂಬಿಸಿಕೊಂಡಿತ್ತು.
4ಆಗ ಯೆಹೋವ ದೇವರ ಮಹಿಮೆಯು ಕೆರೂಬಿಗಳ ಮೇಲಿನಿಂದ ಮೇಲಕ್ಕೆ ಹೋಗಿ ಆಲಯದ ಹೊಸ್ತಿಲಿಗೆ ಹೋಯಿತು. ಆಲಯವು ಮೇಘದಿಂದ ತುಂಬಿತ್ತು. ಆಗ ಯೆಹೋವ ದೇವರ ಮಹಿಮೆಯ ಪ್ರಕಾಶವು ಅಂಗಳದಲ್ಲಿ ತುಂಬಿತ್ತು.
5ಕೆರೂಬಿಗಳ ರೆಕ್ಕೆಗಳ ಶಬ್ದವು ಸರ್ವಶಕ್ತ ದೇವರು ಮಾತನಾಡುವ ಹಾಗೆ ಹೊರಗಣ ಅಂಗಳದವರೆಗೂ ಕೇಳಿಬಂತು.
6ಯೆಹೋವ ದೇವರು ನಾರುಮಡಿಯನ್ನು ಧರಿಸಿಕೊಂಡ ಮನುಷ್ಯನಿಗೆ, “ಚಕ್ರಗಳ ಮಧ್ಯದಿಂದಲೂ, ಕೆರೂಬಿಯರ ಮಧ್ಯದಿಂದಲೂ ಬೆಂಕಿಯನ್ನು ತೆಗೆದುಕೊಳ್ಳಲು,” ಆಜ್ಞಾಪಿಸಿದನು. ಮನುಷ್ಯನು ಒಳಗೆ ಹೋಗಿ ಚಕ್ರಗಳ ಬಳಿಯಲ್ಲಿ ನಿಂತನು.
7ಒಬ್ಬ ಕೆರೂಬಿಯನು ಕೆರೂಬಿಯರ ಮಧ್ಯದೊಳಗಿಂದ ತನ್ನ ಕೈಯನ್ನು ಬೆಂಕಿಗೆ ಚಾಚಿ, ಸ್ವಲ್ಪ ತೆಗೆದುಕೊಂಡು ನಾರುಮಡಿಯನ್ನು ಧರಿಸಿಕೊಂಡಿದ್ದವನ ಕೈಗೆ ಇಟ್ಟನು. ಇವನು ಅದನ್ನು ತೆಗೆದುಕೊಂಡು ಹೊರಗೆ ಹೋದನು.
8ಕೆರೂಬಿಯರಲ್ಲಿ ಅವರ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗೆ ಸಮಾನವಾದದ್ದು ಕಂಡುಬಂತು.
9ನಾನು ನೋಡಿದಾಗ, ಇಗೋ ಒಬ್ಬೊಬ್ಬ ಕೆರೂಬಿಯನ ಬಳಿಯಲ್ಲಿ ಒಂದು ಚಕ್ರ, ಈ ಪ್ರಕಾರ ಕೆರೂಬಿಯರ ಬಳಿಯಲ್ಲಿ ನಾಲ್ಕು ಚಕ್ರಗಳಿದ್ದವು. ಆ ಚಕ್ರಗಳ ವರ್ಣವು ಹೊಳೆಯುವ ಪೀತರತ್ನದ ಹಾಗಿತ್ತು.
10ಆ ನಾಲ್ಕಕ್ಕೂ ಒಂದೇ ರೂಪವಿತ್ತು. ಚಕ್ರದೊಳಗೆ ಇನ್ನೊಂದು ಚಕ್ರವು ರಚಿಸಿದ್ದ ಹಾಗೆ ಇದ್ದವು.
11ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು. ಕೆರೂಬಿಗಳು ಹೋದಂತೆ ಚಕ್ರಗಳು ತಿರುಗಲಿಲ್ಲ. ಎದುರುಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ.
12ಅವುಗಳ ದೇಹ, ಬೆನ್ನು, ಕೈ, ರೆಕ್ಕೆ ಮತ್ತು ಚಕ್ರಗಳು ಇವೆಲ್ಲವುಗಳ ಸುತ್ತಲೂ ಕಣ್ಣುಗಳಿಂದ ತುಂಬಿದ್ದವು, ಮತ್ತು ಅವನ ಎಲ್ಲಾ ನಾಲ್ಕು ಚಕ್ರಗಳು ಕಣ್ಣುಗಳಿಂದ ತುಂಬಿದ್ದವು.
13ಆ ಚಕ್ರಗಳನ್ನು, “ತಿರುಗುವ ಚಕ್ರಗಳು” ಎಂದು ಕರೆಯುತ್ತಾರೆ ಎಂದು ನಾನು ಕೇಳಿದೆ.
14ಒಬ್ಬೊಬ್ಬ ಕೆರೂಬಿಗೆ ನಾಲ್ಕು ಮುಖಗಳಿದ್ದವು. ಮೊದಲನೆಯ ಮುಖವು ಕೆರೂಬಿಯ ಮುಖ, ಎರಡನೆಯ ಮುಖವು ಮನುಷ್ಯನ ಮುಖ, ಮೂರನೆಯದು ಸಿಂಹದ ಮುಖ ಮತ್ತು ನಾಲ್ಕನೆಯದು ಹದ್ದಿನ ಮುಖಗಳಾಗಿದ್ದವು.
15ಆಗ ಕೆರೂಬಿಯರು ಮೇಲಕ್ಕೆತ್ತಲಾದರು. ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಜೀವಗಳು ಇವೇ.
16ಕೆರೂಬಿಯರು ಚಲಿಸಿದಾಗ, ಚಕ್ರಗಳು ಅವರ ಸಂಗಡ ಹೋದವು. ಕೆರೂಬಿಯರು ಭೂಮಿಯನ್ನು ಬಿಟ್ಟು ಮೇಲೇರುವಾಗ ತಮ್ಮ ರೆಕ್ಕೆಗಳನ್ನು ಚಾಚಿದಾಗ, ಅವರ ಚಕ್ರಗಳು ಪಕ್ಕಕ್ಕೆ ತಿರುಗಲಿಲ್ಲ.
17ಜೀವಿಗಳ ಆತ್ಮ ಆ ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತು ಹೋದಾಗ ಇವೂ ನಿಂತುಹೋದವು. ಅವು ಏರಿದಾಗ, ಇವೂ ಅವುಗಳ ಜೊತೆಯಲ್ಲೇ ಏರಿದವು.
18ಆಗ ಯೆಹೋವ ದೇವರ ಮಹಿಮೆಯು ಆಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಯರ ಮೇಲೆ ನಿಂತಿತು.
19ನಾನು ನೋಡುವಾಗಲೇ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿಕೊಂಡು, ಭೂಮಿಯನ್ನು ಬಿಟ್ಟು ಮೇಲಕ್ಕೇರಿ ಹೋದರು. ಅವು ಹೊರಟಾಗ, ಚಕ್ರಗಳೂ ಅದರ ಸಂಗಡ ಇದ್ದವು. ಅವರು ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಇಸ್ರಾಯೇಲಿನ ದೇವರ ಮಹಿಮೆಯು ಅವರ ಮೇಲೆ ಇತ್ತು.
20ಇಸ್ರಾಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ. ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು.
21ಪ್ರತಿಯೊಬ್ಬನಿಗೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು. ಅವರ ರೆಕ್ಕೆಗಳ ಕೆಳಗೆ ಮನುಷ್ಯರ ಕೈಗಳ ರೂಪವಿತ್ತು.
22ಅವುಗಳ ಮುಖಗಳ ರೂಪವು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಆ ಮುಖಗಳ ಹಾಗೆ ಇತ್ತು. ಅವರಲ್ಲಿ ಪ್ರತಿಯೊಬ್ಬರೂ ನೇರವಾಗಿ ಹೋಗುತ್ತಿದ್ದರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.