Moses and Aaron speaking covenant hope among weary Israelite families in bondage

ವಿಮೋಚನಕಾಂಡ 6

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ವಿಮೋಚನಕಾಂಡ 6 ಇಸ್ರಾಯೇಲರನ್ನು ದಾಸತ್ವದಿಂದ ಹೊರತಂದು, ವಿಮೋಚಿಸಿ, ದೇವರ ಜನರಾಗಿ ಸ್ವೀಕರಿಸಿ, ವಾಗ್ದಾನದ ದೇಶವನ್ನು ಕೊಡುವ ವಾಗ್ದಾನವನ್ನು ನವೀಕರಿಸುತ್ತದೆ. ವೇದನೆ ಮತ್ತು ಕಠಿಣ ದುಡಿಮೆಯಿಂದಾಗಿ ಜನರು ಕೇಳಲಾರರು. ಅವರ ಕಾರ್ಯ ಮುಂದುವರಿಯುವ ಮುಂಚೆ ವಂಶಾವಳಿಯು ಮೋಶೆ ಮತ್ತು ಆರೋನರನ್ನು ಲೇವಿಯ ಕುಟುಂಬದೊಳಗೆ ಸ್ಥಾಪಿಸುತ್ತದೆ.
ಒಡಂಬಡಿಕೆವಿಮೋಚನೆವೇದನೆಲೇವಿಯರ ವಂಶಾವಳಿ
1ಆಗ ಯೆಹೋವ ದೇವರು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನನ್ನ ಬಲವಾದ ಹಸ್ತವನ್ನು ಕಂಡು ಅವನು ಅವರನ್ನು ಹೋಗಗೊಡಿಸುವನು. ನನ್ನ ಬಲವಾದ ಹಸ್ತದ ಕಾರಣದಿಂದ ಅವನು ಅವರನ್ನು ತನ್ನ ದೇಶದೊಳಗಿಂದ ಹೊರಡಿಸುವನು,” ಎಂದರು.
2ಇದಲ್ಲದೆ ದೇವರು ಮೋಶೆಯ ಸಂಗಡ ಮಾತನಾಡಿ, “ನಾನೇ ಯೆಹೋವ ದೇವರು.
3ನಾನೇ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಸರ್ವಶಕ್ತ ದೇವರೆಂದು ಪ್ರಕಟಿಸಿಗೊಂಡೆನು. ಆದರೆ ಯೆಹೋವ ದೇವರೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಪೂರ್ಣವಾಗಿ ತಿಳಿಸಲಿಲ್ಲ.
4ಕಾನಾನ್ ದೇಶವನ್ನು ಅಂದರೆ, ಅವರು ವಾಸವಾಗಿದ್ದ ಅವರ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬಡಿಕೆಯನ್ನು ದೃಢಪಡಿಸಿದೆನು.
5ಈಜಿಪ್ಟಿನವರು ದಾಸರನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲರ ನರಳುವಿಕೆಯನ್ನು ಕೇಳಿ, ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು.
6“ಆದ್ದರಿಂದ ಇಸ್ರಾಯೇಲರಿಗೆ, ‘ನಾನೇ ಯೆಹೋವ ದೇವರು. ನಾನು ನಿಮ್ಮನ್ನು ಈಜಿಪ್ಟಿನ ಬಿಟ್ಟಿಕೆಲಸದಿಂದ ಅವರಿಗೆ ದಾಸತ್ವದಲ್ಲಿರುವುದರಿಂದ, ನಾನು ಚಾಚಿದ ಬಾಹುವಿನಿಂದಲೂ ಬಲವಾದ ನ್ಯಾಯತೀರ್ಪುಗಳಿಂದಲೂ ನಿಮ್ಮನ್ನು ಬಿಡಿಸುವೆನು.
7ನಿಮ್ಮನ್ನು ನನ್ನ ಜನರನ್ನಾಗಿ ತೆಗೆದುಕೊಂಡು ನಿಮಗೆ ದೇವರಾಗಿರುವೆನು. ಈಜಿಪ್ಟಿನ ಬಿಟ್ಟಿಕೆಲಸಗಳೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ, ಯೆಹೋವ ದೇವರಾಗಿರುವ ನಾನೇ ನಿಮ್ಮ ದೇವರಾಗಿದ್ದೇನೆಂದು ನಿಮಗೆ ತಿಳಿಯುವುದು.
8ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕೊಡುವೆನೆಂದು ಕೈಯನ್ನೆತ್ತಿ ಪ್ರಮಾಣ ಮಾಡಿದ ದೇಶದಲ್ಲಿ ನಿಮ್ಮನ್ನು ಬರಮಾಡಿ, ಅದನ್ನು ನಿಮಗೆ ಸೊತ್ತಾಗಿ ಕೊಡುವೆನೆಂದು ಹೇಳಿದ ಯೆಹೋವ ದೇವರು ನಾನೇ,’ ಎಂದು ಹೇಳು,” ಎಂದರು.
9ಮೋಶೆಯು ಇಸ್ರಾಯೇಲರಿಗೆ ಹಾಗೆ ಹೇಳಿದಾಗ, ಅವರು ಮನೋವೇದನೆಯ ದೆಸೆಯಿಂದಲೂ ಕ್ರೂರವಾದ ದಾಸತ್ವದ ದೆಸೆಯಿಂದಲೂ ಮೋಶೆಯ ಮಾತನ್ನು ಕೇಳಲಿಲ್ಲ.
10ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
11“ನೀನು ಈಜಿಪ್ಟಿನ ಅರಸನಾದ ಫರೋಹನ ಬಳಿಗೆ ಹೋಗಿ, ಅವನು ಇಸ್ರಾಯೇಲರನ್ನು ತನ್ನ ದೇಶದಿಂದ ಹೊರಗೆ ಕಳುಹಿಸುವಂತೆ ಅವನ ಸಂಗಡ ಮಾತನಾಡು,” ಎಂದರು.
12ಆದರೆ ಮೋಶೆಯು ಯೆಹೋವ ದೇವರ ಸನ್ನಿಧಿಯಲ್ಲಿ, “ಇಗೋ, ಇಸ್ರಾಯೇಲರೇ ನನ್ನ ಮಾತನ್ನು ಕೇಳದಿರುವಲ್ಲಿ, ತೊದಲು ಮಾತನಾಡುವ ನನ್ನ ಮಾತನ್ನು ಫರೋಹನು ಕೇಳುವುದು ಹೇಗೆ?” ಎಂದನು.
13ಯೆಹೋವ ದೇವರು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ, ಇಸ್ರಾಯೇಲರನ್ನು ಈಜಿಪ್ಟಿನ ದೇಶದೊಳಗಿಂದ ಹೊರಗೆ ಬರಮಾಡುವಂತೆ ಇಸ್ರಾಯೇಲರ ಬಳಿಗೂ ಅರಸನಾದ ಫರೋಹನ ಬಳಿಗೂ ಹೋಗಬೇಕೆಂದು ಅವರಿಗೆ ಆಜ್ಞಾಪಿಸಿದರು.
14ಇಸ್ರಾಯೇಲ್ ಗೋತ್ರಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಜೇಷ್ಠ ಪುತ್ರನಾದ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನ್, ಕರ್ಮೀ. ಇವರು ರೂಬೇನನ ಗೋತ್ರಗಳ ಮೂಲ ಪುರುಷರು.
15ಸಿಮೆಯೋನನ ಪುತ್ರರು: ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ. ಇವು ಸಿಮೆಯೋನನ ಗೋತ್ರಗಳು.
16ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಪುತ್ರರ ಹೆಸರುಗಳು: ಗೇರ್ಷೋನ್, ಕೊಹಾತ್, ಮೆರಾರೀ. ಲೇವಿಯು ನೂರಮೂವತ್ತೇಳು ವರ್ಷಗಳವರೆಗೆ ಬದುಕಿದ್ದನು.
17ಗೇರ್ಷೋನನ ಪುತ್ರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಮತ್ತು ಶಿಮ್ಮೀಯರು.
18ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್. ಕೊಹಾತನು ಜೀವಿಸಿದ ವರ್ಷಗಳು ನೂರಮೂವತ್ತಮೂರು.
19ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ವಂಶಾವಳಿಗಳ ಪ್ರಕಾರ ಇವೇ ಲೇವಿಯ ಗೋತ್ರಗಳು.
20ಅಮ್ರಾಮನು ತನ್ನ ಸೋದರತ್ತೆಯಾದ ಯೋಕೆಬೆದಳನ್ನು ಮದುವೆಯಾದನು. ಆಕೆಯು ಅವನಿಗೆ ಆರೋನನನ್ನೂ, ಮೋಶೆಯನ್ನೂ ಹೆತ್ತಳು. ಅಮ್ರಾಮನು ಜೀವಿಸಿದ ಕಾಲ ನೂರಮೂವತ್ತೇಳು ವರ್ಷಗಳು.
21ಇಚ್ಹಾರನ ಪುತ್ರರು: ಕೋರಹ, ನೆಫೆಗ್ ಮತ್ತು ಜಿಕ್ರಿ.
22ಉಜ್ಜೀಯೇಲನ ಪುತ್ರರು: ಮೀಶಾಯೇಲ್, ಎಲ್ಜಾಫಾನ್ ಮತ್ತು ಸಿತ್ರಿ.
23ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬಳನ್ನು ಮದುವೆಯಾದನು. ಆಕೆಯು ಅವನಿಗೆ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಇವರನ್ನು ಹೆತ್ತಳು.
24ಕೋರಹನ ಪುತ್ರರು: ಅಸ್ಸೀರ್ ಎಲ್ಕಾನಾ, ಅಬೀಯಾಸಾಫ್ ಎಂಬುವರು. ಇವು ಕೋರಹೀಯರ ಗೋತ್ರಗಳು.
25ಆರೋನನ ಮಗ ಎಲಿಯಾಜರನು ಪೂಟಿಯೇಲನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಯಾದನು. ಆಕೆಯು ಅವನಿಗೆ ಫೀನೆಹಾಸನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿಯರ ಗೋತ್ರಗಳ ಮುಖ್ಯಸ್ಥರು.
26ಆರೋನ್, ಮೋಶೆ ಇವರಿಗೆ, “ಇಸ್ರಾಯೇಲರನ್ನು ಅವರವರ ಗೋತ್ರಗಳಿಗನುಸಾರವಾಗಿ ಈಜಿಪ್ಟಿನ ಒಳಗಿಂದ ಹೊರಗೆ ಬರಮಾಡಬೇಕು,” ಎಂದು ಯೆಹೋವ ದೇವರು ಹೇಳಿದ್ದರು.
27ಆದುದರಿಂದ ಮೋಶೆ, ಆರೋನರೂ ಇಸ್ರಾಯೇಲರನ್ನು ಹೊರಗೆ ತರುವುದಕ್ಕಾಗಿ ಈಜಿಪ್ಟಿನ ಅರಸನಾದ ಫರೋಹನ ಸಂಗಡ ಮಾತನಾಡಿದರು.
28ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಮೋಶೆಯ ಸಂಗಡ ಮಾತನಾಡಿದರು.
29ಅವರು ಮೋಶೆಗೆ, “ನಾನೇ ಯೆಹೋವ ದೇವರು. ನಾನು ನಿನಗೆ ಹೇಳುವುದನ್ನೆಲ್ಲಾ ಈಜಿಪ್ಟಿನ ಅರಸನಾದ ಫರೋಹನಿಗೆ ತಿಳಿಸು,” ಎಂದರು.
30ಅದಕ್ಕೆ ಮೋಶೆಯು ಯೆಹೋವ ದೇವರ ಮುಂದೆ, “ಇಗೋ, ನಾನು ತೊದಲು ಮಾತನಾಡುವವನು. ಫರೋಹನು ನನ್ನ ಮಾತನ್ನು ಹೇಗೆ ಕೇಳುತ್ತಾನೆ?” ಎಂದನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.