Israelite families bringing freewill offerings as skilled workers prepare tabernacle materials

ವಿಮೋಚನಕಾಂಡ 35

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ವಿಮೋಚನಕಾಂಡ 35 ಸಬ್ಬತ್ ಆಜ್ಞೆಯೊಂದಿಗೆ ಆರಂಭವಾಗಿ, ನಂತರ ದೇವದರ್ಶನ ಗುಡಾರಕ್ಕಾಗಿ ಸ್ವಇಚ್ಛೆಯ ಕಾಣಿಕೆಗಳನ್ನು ಆಹ್ವಾನಿಸುತ್ತದೆ. ಪುರುಷರು ಮತ್ತು ಸ್ತ್ರೀಯರು ಸಾಮಗ್ರಿಗಳನ್ನು ತರುತ್ತಾರೆ, ಕುಶಲ ಸ್ತ್ರೀಯರು ನೂಲು ನೂಲುತ್ತಾರೆ, ಮತ್ತು ಮೋಶೆಯು ಬೆಚಲೇಲ್, ಒಹೊಲೀಯಾಬ್ ಮತ್ತು ಇತರ ಸಿದ್ಧ ಕುಶಲಕರ್ಮಿಗಳನ್ನು ಸಹಭಾಗಿ ಕೆಲಸಕ್ಕೆ ನೇಮಿಸುತ್ತಾನೆ.
ಸಬ್ಬತ್ಸ್ವಇಚ್ಛೆಯ ಕೊಡುಗೆಗಳುಕುಶಲಕರ್ಮಸಹಭಾಗಿತ್ವ
1ಮೋಶೆಯು ಇಸ್ರಾಯೇಲರ ಸಮೂಹವನ್ನು ಒಟ್ಟುಗೂಡಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವ ದೇವರು ನಿಮಗೆ ಹೀಗೆ ಆಜ್ಞಾಪಿಸಿದ್ದಾರೆ.
2ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧವಾಗಿರಬೇಕು. ಅದು ಯೆಹೋವ ದೇವರ ಸಬ್ಬತ್ ದಿನ. ಆ ದಿನದಲ್ಲಿ ಕೆಲಸಮಾಡುವವರಿಗೆ ಮರಣದಂಡನೆಯಾಗಬೇಕು.
3ಸಬ್ಬತ್ ದಿನದಲ್ಲಿ ನೀವು ವಾಸಮಾಡುವ ಯಾವ ಮನೆಯಲ್ಲಿಯೂ ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.
4ಮೋಶೆಯು ಇಸ್ರಾಯೇಲರ ಇಡೀ ಸಮೂಹಕ್ಕೆ ಹೇಳಿದ್ದು: “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ.
5ನಿಮ್ಮಲ್ಲಿರುವದರಿಂದ ಯೆಹೋವ ದೇವರಿಗೆ ಕಾಣಿಕೆಯನ್ನು ಅರ್ಪಿಸಿರಿ. ಯಾರ‍್ಯಾರಿಗೆ ಇಷ್ಟವಿದೆಯೋ ಅವರು, “ಚಿನ್ನ, ಬೆಳ್ಳಿ, ಕಂಚು,
6ನೀಲಿ, ನಾರು, ರಕ್ತವರ್ಣ ನಾರು, ಲಾಕಿ ಬಣ್ಣ, ನಾರು, ನಾರುಬಟ್ಟೆಗಳು, ಮೇಕೆಯ ಕೂದಲು,
7ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು, ಕಡಲುಹಂದಿಯ ಚರ್ಮಗಳು, ಜಾಲಿ ಮರದ ಕಟ್ಟಿಗೆ,
8ದೀಪಕ್ಕಾಗಿ ಓಲಿವ್ ಎಣ್ಣೆ ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಮತ್ತು ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,
9ಏಫೋದ್ ಕವಚಕ್ಕಾಗಿ ಗೋಮೇಧಿಕಗಳು ಮತ್ತು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳನ್ನು ತನ್ನಿರಿ.
10“ನಿಮ್ಮಲ್ಲಿರುವ ಶಿಲ್ಪಿಗಳೆಲ್ಲರೂ ಬಂದು, ಯೆಹೋವ ದೇವರು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು. ಅವು ಯಾವುವೆಂದರೆ:
11“ದೇವದರ್ಶನದ ಗುಡಾರವನ್ನು, ಅದರ ಮೇಲ್ಹೊದಿಕೆಯನ್ನು, ಅದರ ಕೊಂಡಿಗಳನ್ನು, ಅದರ ಚೌಕಟ್ಟುಗಳನ್ನು, ಅದರ ಅಗುಳಿಗಳನ್ನು, ಅದರ ಸ್ತಂಭಗಳನ್ನು, ಅದರ ಕುಣಿಕೆಗಳನ್ನು,
12ಮಂಜೂಷವನ್ನು, ಅದರ ಕೋಲುಗಳನ್ನು, ಅವುಗಳೊಂದಿಗೆ ಕರುಣಾಸನವನ್ನು, ಮರೆಮಾಡುವ ಪರದೆಯನ್ನು,
13ಮೇಜನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ನೈವೇದ್ಯದ ರೊಟ್ಟಿಯನ್ನು,
14ಬೆಳಕಿಗಾಗಿ ದೀಪಸ್ತಂಭವನ್ನು, ಅದರ ಉಪಕರಣಗಳನ್ನು, ಅದರ ದೀಪಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು,
15ಧೂಪವೇದಿಯನ್ನು, ಅದರ ಕೋಲುಗಳನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ಪರದೆಯನ್ನು,
16ದಹನಬಲಿಯ ಪೀಠವನ್ನು, ಅದರೊಂದಿಗೆ ಕಂಚಿನ ಜಾಳಿಗೆಯನ್ನು, ಅದರ ಕೋಲುಗಳನ್ನು, ಅದರ ಎಲ್ಲಾ ಉಪಕರಣಗಳನ್ನು, ಕಂಚಿನ ಗಂಗಾಳವನ್ನು, ಅದರ ಕಾಲನ್ನು,
17ದೇವದರ್ಶನದ ಗುಡಾರ ಅಂಗಳದ ಪರದೆಗಳನ್ನು, ಅದರ ಸ್ತಂಭಗಳನ್ನು, ಅದರ ಗದ್ದಿಗೇ ಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಗಳನ್ನು,
18ಗುಡಾರದ ಗೂಟಗಳನ್ನು, ಅಂಗಳದ ಗೂಟಗಳನ್ನು, ಅದರ ಹಗ್ಗಗಳನ್ನು,
19ಪರಿಶುದ್ಧಸ್ಥಳದ ಸೇವೆಗೋಸ್ಕರ ನೇಯ್ದ ಪರಿಶುದ್ಧ ವಸ್ತ್ರಗಳನ್ನು ಅಂದರೆ ಸೇವೆಮಾಡುವದಕ್ಕೆ ಯಾಜಕನಾದ ಆರೋನನಿಗೆ ಮತ್ತು ಅವನ ಪುತ್ರರಿಗೆ ಯಾಜಕವಸ್ತ್ರಗಳನ್ನು ಮಾಡಲಿ,” ಎಂದನು.
20ಆಗ ಇಸ್ರಾಯೇಲರ ಸಮೂಹವೆಲ್ಲಾ ಮೋಶೆಯ ಸನ್ನಿಧಿಯಿಂದ ಹೊರಟು ಹೋದರು.
21ಹೃದಯ ಪ್ರೇರಣೆ ಹೊಂದಿದವರೂ ಸಿದ್ಧಮನಸ್ಸಿನವರೂ ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.
22ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿ ಬಂದು ಬಳೆಗಳನ್ನೂ ಮೂಗುತಿಗಳನ್ನೂ ಉಂಗುರಗಳನ್ನೂ ಮುದ್ರೆಗಳನ್ನೂ ಚಿನ್ನದ ಎಲ್ಲಾ ಒಡವೆಗಳನ್ನೂ ತಂದರು. ಜನರೆಲ್ಲಾ ಚಿನ್ನವನ್ನು ವಿಶೇಷ ಕಾಣಿಕೆಗಳನ್ನಾಗಿ ಯೆಹೋವ ದೇವರಿಗೆ ಅರ್ಪಿಸಿದರು.
23ನೀಲಿ, ಧೂಮ್ರ, ರಕ್ತವರ್ಣ ದಾರಗಳೂ ನಯವಾದ ನಾರುಮಡಿ, ಮೇಕೆಯ ಕೂದಲು, ಟಗರುಗಳ ಕೆಂಪು ಬಣ್ಣದ ಚರ್ಮಗಳೂ ಕಡಲುಹಂದಿಯ ಚರ್ಮಗಳೂ ಯಾರ ಬಳಿಯಲ್ಲಿದ್ದವೋ ಅವರೆಲ್ಲರೂ ತಂದರು.
24ಬೆಳ್ಳಿ, ಕಂಚುಗಳ ಕಾಣಿಕೆಗಳನ್ನು ಅರ್ಪಿಸುವುದಕ್ಕೆ ಮನಸ್ಸಿದ್ದವರೆಲ್ಲರೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತಂದರು. ಸೇವೆಯ ಎಲ್ಲಾ ಕೆಲಸಕ್ಕೋಸ್ಕರ ಜಾಲಿ ಮರವಿದ್ದವರು ಅದನ್ನು ತಂದರು.
25ಕುಶಲತೆ ಬಲ್ಲ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ದಾರಗಳನ್ನು ಮತ್ತು ನಯವಾದ ನಾರುಮಡಿಯನ್ನು ತಂದರು.
26ಕುಶಲತೆ ಬಲ್ಲ ಎಲ್ಲಾ ಸ್ತ್ರೀಯರು ಮೇಕೆ ಕೂದಲುಗಳನ್ನು ನೇಯ್ದರು.
27ಅಧಿಪತಿಗಳು ಏಫೋದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವುದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ
28ಸುಗಂಧದ್ರವ್ಯಗಳನ್ನೂ ದೀಪಕ್ಕೋಸ್ಕರವೂ ಅಭಿಷೇಕಿಸುವ ತೈಲಕ್ಕೋಸ್ಕರವೂ ಪರಿಮಳ ಧೂಪಕ್ಕೋಸ್ಕರವೂ ಎಣ್ಣೆಯನ್ನೂ ತಂದರು.
29ಹೀಗೆ ಮಾಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ಬೇಕಾದವುಗಳನ್ನು ಇಸ್ರಾಯೇಲಿನ ಸ್ತ್ರೀಪುರುಷರೆಲ್ಲರು ಮನಃಪೂರ್ವಕವಾಗಿಯೇ ಯೆಹೋವ ದೇವರಿಗೆ ಕಾಣಿಕೆಯನ್ನು ತಂದರು.
30ಆಗ ಮೋಶೆಯು ಇಸ್ರಾಯೇಲರಿಗೆ, “ನೋಡಿರಿ, ಯೆಹೋವ ದೇವರು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ಆರಿಸಿಕೊಂಡಿದ್ದಾರೆ,
31ಅವರು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ
32ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದರಲ್ಲಿಯೂ
33ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸದ ಜ್ಞಾನದಿಂದಲೂ ಅವನನ್ನು ತುಂಬಿಸಿದ್ದಾರೆ.
34ಇದಲ್ಲದೆ ಕಲಿಸುವುದಕ್ಕೆ ಅವನಿಗೆ ಮತ್ತು ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದಾರೆ.
35ಕೆತ್ತನೆಯ ಕೆಲಸಗಳನ್ನು, ವಿನ್ಯಾಸದ ಕೆಲಸಗಳನ್ನು, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ, ನಯವಾದ ನಾರುಬಟ್ಟೆ ಇವುಗಳಲ್ಲಿ ಕಸೂತಿ ಕೆಲಸಗಳನ್ನು ಮಾಡುವುದಕ್ಕೆ ಮತ್ತು ನೇಯ್ಗೆಯ ಕೆಲಸ ಮಾಡುವುದಕ್ಕೆ ಎಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಯೆಹೋವ ದೇವರು ಅವರಿಗೆ ಜ್ಞಾನವನ್ನು ಅನುಗ್ರಹಿಸಿದ್ದಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.