First-century neighbors carrying lamps, sharing bread, and caring for families along a twilight street

ಎಫೆಸದವರಿಗೆ 5

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಸ್ವಯಂತ್ಯಾಗದ ಪ್ರೀತಿಯ ಮೂಲಕ ದೇವರನ್ನು ಅನುಸರಿಸಲು, ನಾಶಕರ ಮತ್ತು ಅಶುದ್ಧ ಆಚರಣೆಗಳನ್ನು ಬಿಡಲು ಮತ್ತು ಬೆಳಕಿನ ಮಕ್ಕಳಂತೆ ನಡೆಯಲು ವಿಶ್ವಾಸಿಗಳು ಕರೆಯಲ್ಪಟ್ಟಿದ್ದಾರೆ. ಸಮಯದ ಜ್ಞಾನಪೂರ್ವಕ ಬಳಕೆ, ಕೃತಜ್ಞತೆಯ ಆರಾಧನೆ, ಪರಸ್ಪರ ಅಧೀನತೆ ಮತ್ತು ಕ್ರಿಸ್ತನ ಆರೈಕೆಯ ಮಾದರಿಯ ನಂಬಿಗಸ್ತ ವೈವಾಹಿಕ ಪ್ರೀತಿಗೆ ಪೌಲನು ಪ್ರೇರೇಪಿಸುತ್ತಾನೆ.
ಪ್ರೀತಿಯಲ್ಲಿ ನಡೆಯುವುದುಬೆಳಕಿನ ಮಕ್ಕಳುಜ್ಞಾನವಿವಾಹ
1ಆದ್ದರಿಂದ ನೀವು ದೇವರ ಪ್ರಿಯರಾದ ಮಕ್ಕಳಂತೆ ದೇವರ ಮಾದರಿಯನ್ನು ಅನುಸರಿಸಿ ಬಾಳಿರಿ.
2ಕ್ರಿಸ್ತ ಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ದೇವರಿಗೆ ಸುಗಂಧ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಸಹ ಪ್ರೀತಿಯಿಂದ ಬಾಳಿರಿ.
3ಆದರೆ ನಿಮ್ಮೊಳಗೆ ಅನೈತಿಕತೆಯಾಗಲಿ, ಯಾವ ಅಶುದ್ಧತ್ವವಾಗಲಿ, ಇಲ್ಲವೆ ಲೋಭವಾಗಲಿ ಇರಲೇಬಾರದು. ಇವು ದೇವರ ಪರಿಶುದ್ಧರಿಗೆ ಯೋಗ್ಯವಲ್ಲ.
4ಅಶ್ಲೀಲತೆ, ಬುದ್ಧಿಹೀನ ಮಾತು, ಅಸಭ್ಯ ಹರಟೆ ಇವು ಬೇಡ, ಇವು ಅಯುಕ್ತವಾಗಿವೆ, ಪ್ರತಿಯಾಗಿ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ.
5ಏಕೆಂದರೆ ಯಾವ ಜಾರನಾಗಲಿ, ಅಶುದ್ಧನಾಗಲಿ, ದೇವರಲ್ಲದವುಗಳನ್ನು ಪೂಜಿಸುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಹಕ್ಕುಬಾಧ್ಯತೆಯನ್ನು ಹೊಂದುವುದಿಲ್ಲವೆಂಬುದು ನಿಮಗೆ ಮನದಟ್ಟಾಗಿರಲಿ.
6ಪ್ರಯೋಜನವಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ವಂಚಿಸದಿರಲಿ. ಏಕೆಂದರೆ ಇಂಥವುಗಳ ದೆಸೆಯಿಂದ ದೇವರ ಕೋಪಾಗ್ನಿಯು ಅವರಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.
7ಆದ್ದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.
8ನೀವು ಹಿಂದೊಮ್ಮೆ ಕತ್ತಲೆಯಾಗಿದ್ದಿರಿ. ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿದ್ದೀರಿ. ಬೆಳಕಿನ ಮಕ್ಕಳಾಗಿ ಬಾಳಿರಿ.
9ಬೆಳಕಿನ ಫಲವು ಎಲ್ಲಾ ಒಳ್ಳೆಯತನದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಇರುತ್ತದೆ.
10ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿರಿ.
11ನಿಷ್ಪ್ರಯೋಜಕವಾದ ಕತ್ತಲೆಯ ಕಾರ್ಯಗಳೊಂದಿಗೆ ಪಾಲುಗಾರರಾಗಿರದೆ ಅವುಗಳನ್ನು ಬೆಳಕಿಗೆ ತನ್ನಿರಿ.
12ಆ ಅವಿಧೇಯರು ಗುಟ್ಟಾಗಿ ಮಾಡುವ ಕೃತ್ಯಗಳನ್ನು ಹೇಳುವುದಕ್ಕೂ ಅವಮಾನಕರವಾಗಿವೆ.
13ಆದರೆ, ಬಹಿರಂಗವಾದವುಗಳೆಲ್ಲವೂ ಬೆಳಕಿನಿಂದ ಪ್ರಕಟವಾಗುತ್ತವೆ. ಎಲ್ಲವನ್ನೂ ಪ್ರಕಾಶಪಡಿಸುವಂಥದ್ದು ಬೆಳಕೇ.
14ಆದ್ದರಿಂದ ಹೀಗೆ ಹೇಳಲಾಗಿದೆ: “ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”
15ಆದಕಾರಣ ನೀವು ಹೇಗೆ ಜೀವಿಸಬೇಕೆಂದು ಜಾಗರೂಕರಾಗಿರಿ. ಅಜ್ಞಾನಿಗಳಂತಿರದೆ, ಜಾಣರಾಗಿ ಜೀವಿಸಿರಿ.
16ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ಸರ್ವ ಸದಾವಕಾಶಗಳನ್ನೂ ಸದ್ವಿನಿಯೋಗಿಸಿಕೊಳ್ಳಿರಿ.
17ಆದಕಾರಣ ಬುದ್ಧಿಹೀನರಾಗಿರದೆ ಕರ್ತನ ಚಿತ್ತವೇನೆಂಬುದನ್ನು ತಿಳಿದವರಾಗಿರಿ.
18ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದು ದುಷ್ಟತನಕ್ಕೆ ಎಡೆಮಾಡುತ್ತದೆ. ಆದರೆ ಪವಿತ್ರಾತ್ಮರಿಂದ ತುಂಬಿದವರಾಗಿದ್ದು,
19ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮನಿಂದಾದ ಹಾಡುಗಳಿಂದಲೂ ಪರಸ್ಪರ ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಾಂತರಾಳದಿಂದ ಕರ್ತನಿಗೆ ಹಾಡಿ ಹರಸಿರಿ.
20ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ತಂದೆಯಾದ ದೇವರಿಗೆ, ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ಕೃತಜ್ಞತೆಯನ್ನು ಸಲ್ಲಿಸಿರಿ.
21ಇದಲ್ಲದೆ ಕ್ರಿಸ್ತನ ಭಯಭಕ್ತಿಯಲ್ಲಿ ಒಬ್ಬರಿಗೊಬ್ಬರು ಅಧೀನರಾಗಿ ನಡೆದುಕೊಳ್ಳಿರಿ.
22ಹೆಂಡತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
23ಏಕೆಂದರೆ, ಕ್ರಿಸ್ತ ಯೇಸು ಸಭೆಗೆ ಶಿರಸ್ಸಾಗಿರುವ ಪ್ರಕಾರ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಕ್ರಿಸ್ತ ಯೇಸು ತಮ್ಮ ಸಭೆ ಎಂಬ ದೇಹಕ್ಕೆ ರಕ್ಷಕರಾಗಿದ್ದಾರೆ.
24ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.
25ಗಂಡಂದಿರೇ, ಕ್ರಿಸ್ತ ಯೇಸು ಸಭೆಯನ್ನು ಪ್ರೀತಿಸಿ, ಅದಕ್ಕಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಂತೆಯೇ ನೀವು ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.
26ಕ್ರಿಸ್ತ ಯೇಸು ತಮ್ಮ ಸಭೆಯನ್ನು ವಾಕ್ಯದ ನೀರಿನ ಸ್ನಾನದಿಂದ ಪವಿತ್ರಗೊಳಿಸಿ, ಶುದ್ಧಮಾಡಿ,
27ಅದನ್ನು ಕಳಂಕ, ಸುಕ್ಕು ಇಂಥದ್ದು ಯಾವುದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯನ್ನಾಗಿ ತಮ್ಮ ಮುಂದೆ ನಿಲ್ಲಿಸಿಕೊಳ್ಳಬೇಕೆಂದು ತಮ್ಮನ್ನೇ ಒಪ್ಪಿಸಿಕೊಟ್ಟರು.
28ಗಂಡಂದಿರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ.
29ಏಕೆಂದರೆ, ಯಾರೂ ಸ್ವಂತ ಶರೀರವನ್ನು ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ತಮ್ಮ ಶರೀರವನ್ನು ಪೋಷಿಸಿ ಸಂರಕ್ಷಿಸುತ್ತಾರೆ. ಅದೇ ಪ್ರಕಾರ ಕರ್ತ ಯೇಸು ಸಭೆಯನ್ನು ಪೋಷಿಸಿ, ಸಂರಕ್ಷಿಸುವವರಾಗಿದ್ದಾರೆ.
30ನಾವು ಕ್ರಿಸ್ತ ಯೇಸುವಿನ ದೇಹದ ಅಂಗಗಳಾಗಿದ್ದೇವೆ.
31“ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.”
32ಈ ರಹಸ್ಯವು ಮಹತ್ತಾದದ್ದು. ಆದರೆ ನಾನು ಕ್ರಿಸ್ತನ ಹಾಗೂ ಸಭೆಯ ವಿಷಯವಾಗಿ ಮಾತನಾಡುತ್ತಿದ್ದೇನೆ.
33ಆದರೂ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನನ್ನು ಪ್ರೀತಿಸುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.