
ಪ್ರಸಂಗಿ 11
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ವಿಪತ್ತನ್ನು ಊಹಿಸಲಾಗದ ಕಾರಣ ಉದಾರವಾಗಿ ಕೊಡಿ ಮತ್ತು ಜ್ಞಾನದಿಂದ ಹಂಚಿ ಇಡಿ. ಪರಿಪೂರ್ಣ ಪರಿಸ್ಥಿತಿಗಾಗಿ ಕಾಯುವವರು ಎಂದಿಗೂ ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಆದ್ದರಿಂದ ಬೆಳಿಗ್ಗೆಯೂ ಸಂಜೆಯೂ ನಂಬಿಗಸ್ತಿಕೆಯಿಂದ ದುಡಿಯಿರಿ. ಬೆಳಕೂ ಯೌವನವೂ ಆನಂದದ ಉಡುಗೊರೆಗಳು, ಆದರೆ ಪ್ರತಿ ಕಾಲವನ್ನೂ ದೇವರ ಮುಂದೆ ಹೊಣೆಗಾರಿಕೆಯಿಂದ ಬದುಕಬೇಕು.
ಉದಾರತೆಅನಿಶ್ಚಿತತೆಶ್ರದ್ಧೆಸಂತೋಷಹೊಣೆಗಾರಿಕೆ
1ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಕಳುಹಿಸು. ಬಹಳ ದಿನಗಳ ಮೇಲೆ ಅದರಿಂದ ನಿನಗೆ ಲಾಭ ಸಿಗುವುದು.
2ನಿನ್ನ ಹಣವನ್ನು ಏಳೆಂಟು ಮಂದಿಗೆ ವೆಚ್ಚಮಾಡು. ಏಕೆಂದರೆ ಭೂಮಿಯ ಮೇಲೆ ಮುಂದೆ ಯಾವ ವಿಪತ್ತು ಬರುವುದೋ ನಿನಗೆ ತಿಳಿಯದು.
3ಮೋಡಗಳು ಮಳೆಯಿಂದ ತುಂಬಿದ್ದರೆ, ಅವು ಭೂಮಿಯ ಮೇಲೆ ಸುರಿದುಬಿಡುತ್ತವೆ. ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ, ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವುದು.
4ಯಾವನು ಗಾಳಿಗಾಗಿ ಕಾದಿರುವನೋ, ಅವನು ಬೀಜ ಬಿತ್ತುವುದಿಲ್ಲ. ಮೋಡಗಳನ್ನು ಗಮನಿಸುತ್ತಿರುವವನು ಸಹ ಪೈರು ಕೊಯ್ಯುವುದಿಲ್ಲ.
5ಗಾಳಿಯ ಚಲನೆಯನ್ನಾಗಲಿ ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನೀನು ಹೇಗೆ ಗ್ರಹಿಸಲಾರೆಯೋ, ಹಾಗೆಯೇ, ಸರ್ವ ಸೃಷ್ಟಿಕರ್ತ ಆಗಿರುವ ದೇವರ ಕೆಲಸವನ್ನು ನೀನು ಗ್ರಹಿಸಲಾರೆ.
6ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು. ಸಾಯಂಕಾಲದವರೆಗೂ ನಿನ್ನ ಕೈಗೆ ಬಿಡುವು ಕೊಡಬೇಡ. ಏಕೆಂದರೆ ಇದು ಸಫಲವೋ ಅದು ಸಫಲವೋ ನಿನಗೆ ತಿಳಿಯದು. ಎರಡೂ ಒಳ್ಳೆಯ ಬೆಳೆಯನ್ನು ಕೊಡಲು ಸಾಧ್ಯವಿದೆ.
7ಬೆಳಕು ಹಿತಕರ. ಸೂರ್ಯನ ಕಾಂತಿ ಕಣ್ಣುಗಳಿಗೆ ಮೆಚ್ಚಿಕೆ.
8ಒಬ್ಬನು ಅನೇಕ ವರ್ಷಗಳು ಬದುಕಿ, ಅವುಗಳಲ್ಲೆಲ್ಲಾ ಸಂತೋಷಪಟ್ಟರೂ ಕತ್ತಲೆಯ ದಿನಗಳನ್ನು ನೆನಪಿಸಿಕೊಳ್ಳಲಿ, ಏಕೆಂದರೆ ಅಂಥ ದಿನಗಳು ಬಹಳ. ಮುಂದಾಗುವುದೆಲ್ಲವೂ ವ್ಯರ್ಥವೇ.
9ಯುವಕನೇ, ನಿನ್ನ ಯೌವನದಲ್ಲಿ ಸಂತೋಷಪಡು. ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ. ನೀನು ನಿನ್ನ ಮನಸ್ಸಿಗೆ ಬಂದಂತೆಯೂ ನಿನ್ನ ಕಣ್ಣಿನ ನೋಟದಂತೆಯೂ ನಡೆ. ಆದರೆ ಈ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯವಿಚಾರಿಸುವರು ಎಂದು ತಿಳಿದುಕೋ.
10ಆದ್ದರಿಂದ ನಿನ್ನ ಹೃದಯದಿಂದ ಚಿಂತೆಯನ್ನು ತೆಗೆದುಹಾಕು. ನಿನ್ನ ಶರೀರದಿಂದ ಕೆಟ್ಟದ್ದನ್ನು ದೂರಮಾಡು. ಯೌವನವೂ ಅದರ ಚೈತನ್ಯವೂ ಅಲ್ಪಕಾಲವೇ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.