
ಧರ್ಮೋಪದೇಶಕಾಂಡ 34
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಧರ್ಮೋಪದೇಶಕಾಂಡ 34 ಮೋಶೆಯು ನೆಬೋ ಬೆಟ್ಟದಿಂದ ಕಾನಾನನ್ನು ನೋಡಿ, ಮೋವಾಬಿನಲ್ಲಿ ಮರಣಿಸಿ, ಅಜ್ಞಾತ ಸಮಾಧಿಯಲ್ಲಿ ಹೂಳಲ್ಪಡುವುದನ್ನು ವಿವರಿಸುತ್ತದೆ. ಇಸ್ರಾಯೇಲರು ಮೂವತ್ತು ದಿನ ಶೋಕಿಸಿ, ನಂತರ ಜ್ಞಾನದಿಂದ ತುಂಬಿದ ಯೆಹೋಶುವನನ್ನು ಅನುಸರಿಸುತ್ತಾರೆ. ಪುಸ್ತಕವು ಮೋಶೆಯ ಅಸಮಾನ ಪ್ರವಾದನಾ ಸೇವೆಯನ್ನು ಗೌರವಿಸುವುದರೊಂದಿಗೆ ಮುಕ್ತಾಯವಾಗುತ್ತದೆ.
ನೆಬೋ ಬೆಟ್ಟಮೋಶೆಯ ಮರಣಯೆಹೋಶುವಪ್ರವಾದನಾ ಪರಂಪರೆ
1ಆಗ ಮೋಶೆ ಮೋವಾಬಿನ ಬಯಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿಹೋದನು. ಅಲ್ಲಿ ಯೆಹೋವ ದೇವರು ಅವನಿಗೆ ದೇಶವನ್ನೆಲ್ಲಾ ದಾನಿನವರೆಗಿರುವ ಗಿಲ್ಯಾದನ್ನೂ
2ಎಲ್ಲಾ ನಫ್ತಾಲಿಯನ್ನೂ ಸಮಸ್ತ ಎಫ್ರಾಯೀಮ್, ಮನಸ್ಸೆಯ ದೇಶವನ್ನೂ, ಸಮುದ್ರದ ಕಟ್ಟಕಡೆಯವರೆಗಿರುವ ಸಮಸ್ತ ಯೆಹೂದ ದೇಶವನ್ನೂ,
3ನೆಗೆವನ್ನೂ ಖರ್ಜೂರಗಳ ಪಟ್ಟಣವಾದ ಯೆರಿಕೋ ಕಣಿವೆಯ ಬಯಲನ್ನೂ, ಚೋಗರ್ ಊರಿನ ತನಕ ತೋರಿಸಿದರು.
4ಅನಂತರ ಯೆಹೋವ ದೇವರು ಅವನಿಗೆ, “ಅಬ್ರಹಾಮನಿಗೂ ಅವನ ಸಂತತಿಗೂ ಕೊಡುತ್ತೇನೆಂದು ನಾನು ಇಸಾಕನಿಗೂ, ಯಾಕೋಬನಿಗೂ ಪ್ರಮಾಣ ಮಾಡಿದ ದೇಶವು ಇದೇ. ಇದನ್ನು ನಿನಗೆ ತೋರಿಸಿದೆನು. ಆದರೆ ನೀನು ಅಲ್ಲಿಗೆ ಸೇರುವುದಿಲ್ಲ,” ಎಂದು ಹೇಳಿದರು.
5ಯೆಹೋವ ದೇವರ ಮಾತಿನ ಹಾಗೆ ಅವರ ದಾಸನಾದ ಮೋಶೆಯು ಅಲ್ಲಿ ಮೋವಾಬಿನ ದೇಶದಲ್ಲಿ ಮರಣಹೊಂದಿದನು.
6ದೇವರು ಅವನನ್ನು ಮೋವಾಬಿನ ದೇಶದ ಬೇತ್ ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಹೂಣಿಟ್ಟರು. ಆದರೆ ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ಗೊತ್ತಿಲ್ಲ.
7ಮೋಶೆಯು ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ. ಅವನ ಬಲ ಕುಂದಿಹೋಗಿರಲಿಲ್ಲ.
8ಇಸ್ರಾಯೇಲರು ಮೋವಾಬಿನ ಬಯಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ದುಃಖಿಸಿದರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಸಂತಾಪದ ದಿವಸಗಳು ಮುಗಿದವು.
9ಇದಲ್ಲದೆ ನೂನನ ಮಗ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದವನಾಗಿದ್ದನು. ಏಕೆಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರು ಯೆಹೋಶುವನ ಮಾತು ಕೇಳಿದರು.
10ಯೆಹೋವ ದೇವರ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದ ಮೋಶೆಯಂಥ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ.
11ಈಜಿಪ್ಟಿನಲ್ಲಿ ಫರೋಹನ ಮುಂದೆಯೂ, ಅವನ ಎಲ್ಲಾ ಅಧಿಕಾರಿಗಳ ಮುಂದೆಯೂ, ಜನರ ಮುಂದೆಯೂ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ಮಾಡುವುದಕ್ಕೆ ಯೆಹೋವ ದೇವರು ಮೋಶೆಯನ್ನು ಕಳುಹಿಸಿದ್ದರು.
12ಇಸ್ರಾಯೇಲರ ಮುಂದೆ ಮೋಶೆಯು ನಡೆಸಿದ ವಿಶೇಷವಾದ ಕಾರ್ಯಗಳನ್ನು ಮತ್ತು ಭುಜಪರಾಕ್ರಮವನ್ನು ಯಾರೂ ಎಂದೂ ತೋರಿಸಿರಲಿಲ್ಲ ಅಥವಾ ಮಾಡಿರಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.