
ಧರ್ಮೋಪದೇಶಕಾಂಡ 20
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಧರ್ಮೋಪದೇಶಕಾಂಡ 20 ಇಸ್ರಾಯೇಲರಿಗೆ ಯುದ್ಧದ ಸೂಚನೆಗಳನ್ನು ನೀಡುತ್ತದೆ, ಯಾಜಕರ ಪ್ರೋತ್ಸಾಹ ಮತ್ತು ಮುಗಿಯದ ಮನೆಗಳು, ದ್ರಾಕ್ಷಿತೋಟಗಳು, ನಿಶ್ಚಿತಾರ್ಥಗಳು ಮತ್ತು ಭಯಕ್ಕೆ ವಿನಾಯಿತಿಗಳೊಂದಿಗೆ ಆರಂಭಿಸಿ. ಕಾನಾನಿನ ಹೊರಗಿನ ಪಟ್ಟಣಗಳಿಗೆ ಮೊದಲು ಶಾಂತಿಯ ಷರತ್ತುಗಳನ್ನು ನೀಡಬೇಕು, ಮತ್ತು ಮುತ್ತಿಗೆಯ ಸಮಯದಲ್ಲಿಯೂ ಹಣ್ಣಿನ ಮರಗಳನ್ನು ನಾಶಪಡಿಸಬಾರದು.
ಯುದ್ಧಧೈರ್ಯಶಾಂತಿಯ ಷರತ್ತುಗಳುಸಂಯಮ
1ನೀವು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟಾಗ ಅವರ ಕುದುರೆಗಳನ್ನೂ ರಥಗಳನ್ನೂ ನಿಮಗಿಂತ ಹೆಚ್ಚಾಗಿರುವ ಜನರನ್ನೂ ನೋಡಿದರೆ ಭಯಪಡಬೇಡಿರಿ. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ.
2ನೀವು ಯುದ್ಧಕ್ಕೆ ಸಮೀಪ ಬಂದಾಗ, ಯಾಜಕನು ಹತ್ತಿರ ಬಂದು, ಯೋಧರ ಸಂಗಡ ಮಾತನಾಡಿ ಅವರಿಗೆ,
3“ಇಸ್ರಾಯೇಲರೇ ಕೇಳಿರಿ, ನೀವು ಈ ಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸಮೀಪ ಬಂದಿದ್ದೀರಿ. ನಿಮ್ಮ ಹೃದಯಗಳು ಕುಗ್ಗಬಾರದು. ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂ ಬೇಡಿರಿ.
4ಏಕೆಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ, ನಿಮ್ಮನ್ನು ರಕ್ಷಿಸುವುದಕ್ಕೆ ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಸಂಗಡ ಬರುತ್ತಾರೆ,” ಎಂದು ಹೇಳಬೇಕು.
5ಮತ್ತು ಅಧಿಕಾರಿಗಳು ಅವರಿಗೆ ಹೀಗೆ ಹೇಳಬೇಕು, “ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿ, ಗೃಹ ಪ್ರತಿಷ್ಠೆ ಇನ್ನು ಮಾಡದಿದ್ದರೆ, ಅವನು ತನ್ನ ಮನೆಗೆ ಹೋಗಲಿ. ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಮನೆಯನ್ನು ಸೇರಿಕೊಂಡಾನು.
6ದ್ರಾಕ್ಷಿತೋಟವನ್ನು ನೆಟ್ಟು ಅದರ ಫಲವನ್ನು ತಿನ್ನದೇ ಇರುವ ಮನುಷ್ಯನು, ತನ್ನ ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಫಲ ತಿಂದಾನು.
7ಯಾವನಾದರೂ ಮದುವೆ ಮಾಡಿಕೊಂಡಿದ್ದು, ತನ್ನ ಹೆಂಡತಿಯೊಂದಿಗೆ ಸಂಸಾರ ಮಾಡಿರದಿದ್ದರೆ, ಅಂಥವನು ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ, ಬೇರೊಬ್ಬನು ಆಕೆಯನ್ನು ಸೇರಿಸಿಕೊಂಡಾನು.”
8ಇದಲ್ಲದೆ ಅಧಿಕಾರಿಗಳು ಮಾತನಾಡಿ, “ಯಾವನಾದರೂ ಯುದ್ಧಕ್ಕೆ ಭಯಪಟ್ಟು ಅಂಜಿಕೊಂಡರೆ, ಅಂಥವನು ಮನೆಗೆ ಹೋಗಲಿ. ಅವನನ್ನು ನೋಡಿ ಬೇರೆಯವರೂ ಹೆದರಿಕೊಳ್ಳುವ ಅವಕಾಶವಿದೆ,” ಎಂದು ಹೇಳಬೇಕು.
9ಅಧಿಕಾರಿಗಳು ಯೋಧರ ಸಂಗಡ ಮಾತನಾಡಿ ಮುಗಿಸಿದಾಗ, ಅವರು ಅದರ ಮೇಲೆ ಸೇನಾಧಿಪತಿಗಳನ್ನು ನೇಮಿಸಬೇಕು.
10ನೀವು ಯುದ್ಧಮಾಡುವುದಕ್ಕಾಗಿ ಒಂದು ಪಟ್ಟಣದ ಹತ್ತಿರ ಬಂದಾಗ, ಮೊದಲು ಅದನ್ನು ಸಮಾಧಾನಕ್ಕಾಗಿ ಕರೆಯಬೇಕು.
11ಆ ಪಟ್ಟಣವು ನಿಮಗೆ ಸಮಾಧಾನದ ಉತ್ತರಕೊಟ್ಟು ಬಾಗಿಲನ್ನು ತೆರೆದರೆ, ಅದರಲ್ಲಿರುವ ಜನರೆಲ್ಲರೂ ನಿಮಗೆ ಕಪ್ಪಕೊಟ್ಟು, ನಿಮಗಾಗಿ ಕೆಲಸ ಮಾಡಬೇಕು.
12ಅವರು ನಿಮ್ಮ ಮಾತಿಗೆ ಸಮ್ಮತಿಸದೆ ನಿಮ್ಮ ಸಂಗಡ ಯುದ್ಧಮಾಡಿದರೆ, ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.
13ನಿಮ್ಮ ದೇವರಾದ ಯೆಹೋವ ದೇವರು ಅದನ್ನು ನಿಮ್ಮ ಕೈಗೆ ಕೊಟ್ಟಾಗ, ಅದರ ಗಂಡಸರೆಲ್ಲರನ್ನು ಸಂಹಾರಮಾಡಬೇಕು.
14ಆದರೆ ಸ್ತ್ರೀಯರನ್ನೂ ಚಿಕ್ಕವರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲಾ ಆಸ್ತಿಯನ್ನೂ ನಿಮಗಾಗಿ ತಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವಂಥ ನಿಮ್ಮ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.
15ಹೀಗೆ ಈ ದೇಶದ ಜನಾಂಗಗಳಿಗೆ ಸೇರದೆ ನಿಮಗೆ ದೂರವಾಗಿರುವ ಜನಾಂಗಗಳ ಪಟ್ಟಣಗಳಿಗೆಲ್ಲಾ ಹಾಗೆಯೇ ಮಾಡಬೇಕು.
16ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಈ ಜನರ ಪಟ್ಟಣಗಳಲ್ಲಿ ಉಸಿರಾಡುವ ಯಾವುದನ್ನಾದರೂ ಉಳಿಸಬಾರದು.
17ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದಂತೆ ಹಿತ್ತಿಯರನ್ನೂ, ಅಮೋರಿಯರನ್ನೂ, ಕಾನಾನ್ಯರನ್ನೂ, ಪೆರಿಜೀಯರನ್ನೂ, ಹಿವ್ವಿಯರನ್ನೂ, ಯೆಬೂಸಿಯರನ್ನೂ ಪೂರ್ಣವಾಗಿ ದಂಡಿಸಬೇಕು.
18ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಆರಾಧಿಸುವಾಗ ಮಾಡಿದ ಎಲ್ಲಾ ಅಸಹ್ಯಕರವಾದ ಆಚಾರಗಳನ್ನು ನಿಮಗೆ ಕಲಿಸಿಕೊಡಬಹುದು ಮತ್ತು ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ದ್ರೋಹಿಗಳಾಗಬಹುದು.
19ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಲು ಅದಕ್ಕೆ ಬಹು ದಿವಸ ಮುತ್ತಿಗೆ ಹಾಕಬೇಕಾಗಬಹುದು. ಆಗ ಅದಕ್ಕೆ ಸೇರಿದ ಮರಗಳನ್ನು ಹಾಳುಮಾಡಬಾರದು. ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಶತ್ರುಗಳೇನು? ಅವುಗಳೊಡನೆ ಯುದ್ಧ ಮಾಡಬಹುದೇ?
20ತಿನ್ನತಕ್ಕ ಹಣ್ಣು ಕೊಡುವುದಿಲ್ಲ ಎಂದು ನೀವು ತಿಳಿದ ಮರಗಳನ್ನು ಮಾತ್ರ ಕಡಿದು ಹಾಕಬಹುದು. ಅವುಗಳಿಂದ ಯುದ್ಧ ಯಂತ್ರಗಳನ್ನು ಮಾಡಿಕೊಂಡು ನಿಮಗೆ ವಿರುದ್ಧವಾಗಿರುವ ಆ ಪಟ್ಟಣ ಬೀಳುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.