Israelites sorting livestock and produce while sharing food with Levites and vulnerable families

ಧರ್ಮೋಪದೇಶಕಾಂಡ 14

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಧರ್ಮೋಪದೇಶಕಾಂಡ 14 ಇಸ್ರಾಯೇಲರನ್ನು ಪವಿತ್ರ ಜನರೆಂದು ಗುರುತಿಸಿ, ಅನುಮತಿಸಿದ ಮತ್ತು ನಿಷೇಧಿಸಿದ ಆಹಾರಗಳನ್ನು ಪ್ರತ್ಯೇಕಿಸಿ, ವಾರ್ಷಿಕ ದಶಾಂಶಗಳನ್ನು ನಿಯಂತ್ರಿಸುತ್ತದೆ. ಆರಾಧಕರು ದೇವರ ಮುಂದೆ ಆಚರಿಸುತ್ತಾರೆ, ಪ್ರತಿ ಮೂರನೆಯ ವರ್ಷ ಸಂಗ್ರಹಿಸಿದ ಉತ್ಪನ್ನವು ಸ್ಥಳೀಯ ಸಮುದಾಯಗಳೊಳಗೆ ಲೇವಿಯರು, ಪರದೇಶಿ ನಿವಾಸಿಗಳು, ಅನಾಥರು ಮತ್ತು ವಿಧವೆಯರನ್ನು ಪೋಷಿಸುತ್ತದೆ.
ಪವಿತ್ರ ಜನರುಆಹಾರ ನಿಯಮಗಳುದಶಾಂಶಗಳುಸಹಭಾಗಿ ಒದಗಿಸುವಿಕೆ
1ನೀವು ನಿಮ್ಮ ದೇವರಾದ ಯೆಹೋವ ದೇವರ ಮಕ್ಕಳು. ನೀವು ಸತ್ತವರಿಗೋಸ್ಕರ ಗಾಯಮಾಡಿಕೊಳ್ಳಬಾರದು. ಮುಂದಲೆಯನ್ನು ಬೋಳಿಸಿಕೊಳ್ಳಬಾರದು.
2ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ, ಯೆಹೋವ ದೇವರು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ನಿಮ್ಮನ್ನೇ ತಮ್ಮ ಅಮೂಲ್ಯವಾದ ಆಸ್ತಿಯಾಗಿ ಆಯ್ದುಕೊಂಡಿದ್ದಾರೆ.
3ಅಸಹ್ಯವಾದ ಯಾವುದನ್ನಾದರೂ ತಿನ್ನಬಾರದು.
4ನೀವು ತಿನ್ನಬಹುದಾದ ಪ್ರಾಣಿಗಳು ಯಾವವಂದರೆ: ಎತ್ತು, ಕುರಿ, ಮೇಕೆ,
5ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ ಇವುಗಳೇ.
6ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ, ಅದು ಮೆಲುಕು ಹಾಕುವಂಥಾದ್ದಾದರೆ ಅದರ ಮಾಂಸವನ್ನು ತಿನ್ನಬಹುದು.
7ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆ, ಮೊಲ, ಬೆಟ್ಟದ ಮೊಲ ಇವು ಮೆಲುಕು ಹಾಕುವಂಥವುಗಳಾದರೂ, ಸೀಳುಗೊರಸು ಇಲ್ಲವಾದದ್ದರಿಂದ ಅವು ನಿಮಗೆ ಅಶುದ್ಧ.
8ಹಂದಿಯನ್ನು ತಿನ್ನಬಾರದು. ಏಕೆಂದರೆ ಅದು ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲ. ಅದು ನಿಮಗೆ ಅಶುದ್ಧವೇ. ಅವುಗಳ ಮಾಂಸವನ್ನು ನೀವು ತಿನ್ನಬಾರದು, ಅವುಗಳ ಹೆಣವನ್ನು ಮುಟ್ಟಬಾರದು.
9ನೀರಿನಲ್ಲಿ ಬಾಳುವ ಎಲ್ಲವುಗಳಲ್ಲಿ ಅಂದರೆ ನೀವು ಈಜು ರೆಕ್ಕೆಗಳುಳ್ಳ ಮತ್ತು ಪೊರೆ ಇರುವವುಗಳನ್ನು ತಿನ್ನಬಹುದು.
10ಆದರೆ ರೆಕ್ಕಗಳೂ ಪೊರೆಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು. ಅವು ನಿಮಗೆ ಅಶುದ್ಧ.
11ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
12ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವುವೆಂದರೆ: ಗರುಡ, ಬೆಟ್ಟದಹದ್ದು, ಕಪ್ಪು ರಣಹದ್ದು,
13ಗಿಡುಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು,
14ಸಕಲವಿಧವಾದ ಕಾಗೆ,
15ಉಷ್ಟ್ರಪಕ್ಷಿ, ಉಲೂಕ, ಚೀರು ಗೂಬೆ, ಕಡಲ ಹಕ್ಕಿ, ಸಕಲವಿಧವಾದ ಡೇಗೆ,
16ಸಣ್ಣ ಗೂಬೆ, ದೊಡ್ಡ ಗೂಬೆ, ಬಿಳಿಗೂಬೆ,
17ಮರಳುಗಾಡು ಗೂಬೆ, ರಣಹದ್ದು, ನೀರು ಕೋಳಿ,
18ಕೊಕ್ಕರೆ, ನೀರುಕಾಗೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.
19ಇದಲ್ಲದೆ ಹಾರುವ ಎಲ್ಲಾ ಕ್ರಿಮಿಕೀಟಗಳು ನಿಮಗೆ ಅಶುದ್ಧವೇ. ಅವುಗಳನ್ನು ತಿನ್ನಬಾರದು.
20ಶುದ್ಧವಾದ ಎಲ್ಲಾ ರೆಕ್ಕೆ ಉಳ್ಳ ಪಕ್ಷಿಗಳನ್ನು ತಿನ್ನಬಹುದು.
21ತಾನೇ ಸತ್ತ ಯಾವುದನ್ನೂ ತಿನ್ನಬಾರದು. ನಿಮ್ಮ ಊರಲ್ಲಿರುವ ಅನ್ಯನಿಗೆ ತಿನ್ನಲು ಕೊಡಬಹುದು ಇಲ್ಲವೆ ಪರದೇಶದವನಿಗೆ ಮಾರಬಹುದು. ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಕುದಿಸಬಾರದು.
22ನೀವು ಬಿತ್ತುವ ಹೊಲದಲ್ಲಿ ವರ್ಷ ವರ್ಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.
23ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ದಶಮಾಂಶವನ್ನೂ ನಿಮ್ಮ ದನಕುರಿಗಳಲ್ಲಿ ಚೊಚ್ಚಲುಗಳನ್ನೂ ನಿಮ್ಮ ದೇವರಾದ ಯೆಹೋವ ದೇವರ ಮುಂದೆ ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ದೇವರೇ ಆಯ್ದುಕೊಂಡ ಸ್ಥಳದಲ್ಲಿ ತಿನ್ನಬೇಕು. ಇದರಿಂದ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಎಂದೆಂದಿಗೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಕಲಿಯುವಿರಿ.
24ನೀವು ಕಾಣಿಕೆಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿಮಗೆ ದಾರಿ ದೂರವಾಗಿದ್ದರೆ, ಅಥವಾ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಂಡ ಸ್ಥಳವು ನಿಮಗೆ ದೂರವಾಗಿದ್ದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಿದ ಕಾಲದಲ್ಲಿ,
25ಅವುಗಳನ್ನು ಮಾರಿ ಹಣವನ್ನಾಗಿ ಮಾರ್ಪಡಿಸಿ, ಆ ಹಣವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ.
26ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ, ಮೊದಲಾದವುಗಳನ್ನು ಹಣದಿಂದ ಕೊಂಡುಕೊಂಡು ನೀವೂ, ನಿಮ್ಮ ಮನೆಯವರೂ, ನಿಮ್ಮ ಊರಿನ ಲೇವಿಯರೂ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಊಟಮಾಡಿ, ಸಂತೋಷವಾಗಿರಬೇಕು.
27ನಿಮ್ಮ ಊರುಗಳಲ್ಲಿರುವ ಲೇವಿಯರನ್ನು ಕೈಬಿಡಬಾರದು. ಏಕೆಂದರೆ ಅವರಿಗೆ ನಿಮ್ಮ ಸಂಗಡ ಪಾಲೂ, ಸೊತ್ತೂ ಇಲ್ಲ.
28ಪ್ರತಿ ಮೂರು ವರ್ಷಗಳ ಅಂತ್ಯದಲ್ಲಿ ಆಯಾ ವರ್ಷದಲ್ಲಿ ನಿಮಗೆ ಸಿಕ್ಕಿದ ಹುಟ್ಟುವಳಿಯ ದಶಮಭಾಗವನ್ನೆಲ್ಲಾ ಹೊರಗೆ ತಂದು ನಿಮ್ಮ ಊರಲ್ಲಿಯೇ ಕೂಡಿಸಬೇಕು.
29ಆಗ ನಿಮ್ಮ ಸಂಗಡ ಪಾಲನ್ನೂ, ಸೊತ್ತನ್ನೂ ಹೊಂದದ ಲೇವಿಯರೂ, ನಿಮ್ಮ ಊರಲ್ಲಿರುವ ಅನ್ಯದೇಶದವರೂ, ದಿಕ್ಕಿಲ್ಲದವರೂ, ವಿಧವೆಯರೂ ಬಂದು ತಿಂದು ತೃಪ್ತರಾಗಲಿ. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನೂ, ನೀವು ಮಾಡುವ ಎಲ್ಲಾ ಪ್ರಯತ್ನಗಳನ್ನೂ ಆಶೀರ್ವದಿಸುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.