
ಆಮೋಸ 8
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಬೇಸಿಗೆ ಹಣ್ಣಿನ ಬುಟ್ಟಿಯು ಇಸ್ರಾಯೇಲಿನ ಅಂತ್ಯವು ಪಕ್ವವಾಗಿದೆ ಎಂದು ಸೂಚಿಸುತ್ತದೆ. ವರ್ತಕರು ಅಪ್ರಾಮಾಣಿಕ ವ್ಯಾಪಾರವನ್ನೂ ಬಡವರ ಶೋಷಣೆಯನ್ನೂ ಮತ್ತೆ ಆರಂಭಿಸಲು ಪವಿತ್ರ ದಿನಗಳು ಮುಗಿಯುವುದನ್ನು ಅಸಹನೆಯಿಂದ ಕಾಯುತ್ತಾರೆ. ನಾಡು ನಡುಗುವುದು, ಹಗಲು ಕತ್ತಲಾಗುವುದು, ಹಾಡುಗಳು ಪ್ರಲಾಪವಾಗುವವು, ಜನರು ಸಿಗದ ದೈವಿಕ ವಾಕ್ಯವನ್ನು ಹುಡುಕುತ್ತಾ ಅಲೆಯುವರು.
ಪಕ್ವ ನ್ಯಾಯತೀರ್ಪುಅಪ್ರಾಮಾಣಿಕ ವ್ಯಾಪಾರಕತ್ತಲೆವಾಕ್ಯದ ಕ್ಷಾಮ
1ಸಾರ್ವಭೌಮ ಯೆಹೋವ ದೇವರು ನನಗೆ ಮಾಗಿದ ಹಣ್ಣುಗಳುಳ್ಳ ಬುಟ್ಟಿ ತೋರಿಸಿದರು.
2ಆಗ, “ಆಮೋಸನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. ನಾನು, “ಮಾಗಿದ ಹಣ್ಣುಗಳ ಬುಟ್ಟಿ,” ಎಂದೆನು. ಆಗ ಯೆಹೋವ ದೇವರು ನನಗೆ, “ನನ್ನ ಜನರಾದ ಇಸ್ರಾಯೇಲರ ಸಮಯವು ಮಾಗುತ್ತಾ ಬಂತು. ನಾನು ಇನ್ನು ಮೇಲೆ ಅವರನ್ನು ಉಳಿಸುವುದಿಲ್ಲ,” ಎಂದು ಹೇಳಿದರು.
3“ಆ ದಿನದಲ್ಲಿ ದೇವಾಲಯದ ಹಾಡುಗಳು ವಿಲಾಪವಾಗುವುವು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. “ಎಲ್ಲಾ ಕಡೆಗಳಲ್ಲಿ ಅನೇಕ ಹೆಣಗಳು ಬಿದ್ದಿರುವುವು. ಮೌನವಾಗಿರಿ!”
4ಬಡವರನ್ನು ನುಂಗುವವರೇ, ನಾಡಿನ ಬಡವರನ್ನು ಮುಗಿಸಿಬಿಡಬೇಕೆಂದಿರುವವರೇ, ಇದನ್ನು ಕೇಳಿರಿ.
5ನೀವು ಹೇಳುವುದೇನೆಂದರೆ, “ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಯಾವಾಗ ಕೊನೆಗೊಳ್ಳುತ್ತದೆ? ಗೋಧಿಯನ್ನು ಮಾರುವ ಹಾಗೆ ಸಬ್ಬತ್ ದಿನವು ಯಾವಾಗ ಮುಗಿಯುವುದು? ಕೊಳಗವನ್ನು ಚಿಕ್ಕದಾಗಿಯೂ ತೊಲಗಳನ್ನು ದೊಡ್ಡದಾಗಿಯೂ, ಕಳ್ಳತಕ್ಕಡಿಗಳನ್ನು ಮೋಸಕ್ಕಾಗಿಯೂ ಮಾಡೋಣವೆಂದೂ,
6ಬಡವರನ್ನು ಬೆಳ್ಳಿಗೂ ದರಿದ್ರರನ್ನು ಕೆರಗಳ ಜೋಡಿಗೂ ಕೊಂಡುಕೊಳ್ಳುವೆವು, ಹೌದು ಗೋಧಿಯ ಕಸವನ್ನು ಸಹ ಮಾರೋಣ.”
7ಯೆಹೋವ ದೇವರು ಯಾಕೋಬಿನ ಅಹಂಕಾರದ ಮೇಲೆ ಆಣೆ ಇಟ್ಟುಕೊಂಡು ಹೇಳುವುದೇನೆಂದರೆ: “ನಿಶ್ಚಯವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವುದಿಲ್ಲ.
8“ಇದಕ್ಕಾಗಿ ದೇಶವು ನಡುಗುವುದಿಲ್ಲವೇ? ಅದರಲ್ಲಿ ವಾಸಿಸುವವರೆಲ್ಲರೂ ಗೋಳಾಡುವುದಿಲ್ಲವೇ? ದೇಶವೆಲ್ಲಾ ನೈಲ್ ನದಿಯ ಪ್ರವಾಹದಂತೆ ಉಬ್ಬಿ ಅಲ್ಲೊಲಕಲ್ಲೋಲವಾಗುವುದು, ಈಜಿಪ್ಟಿನ ನದಿಯಂತೆ ಇಳಿದುಹೋಗುವದು.
9“ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ, “ಆ ದಿನದಲ್ಲಿ,” ನಾನು ಸೂರ್ಯನನ್ನು ಮಧ್ಯಾಹ್ನದಲ್ಲಿ ಮುಳುಗುವಂತೆ ಮಾಡುತ್ತೇನೆ. ಭೂಮಿಯನ್ನು ಹಗಲಲ್ಲೇ ಕತ್ತಲಾಗುವಂತೆ ಮಾಡುತ್ತೇನೆ.
10ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.
11ದಿನಗಳು ಬರುವುವು, ಆಗ ನಾನು ದೇಶದಲ್ಲಿ ಕ್ಷಾಮವನ್ನು ಕಳುಹಿಸುವೆನು. ಅದು ರೊಟ್ಟಿಯ ಕ್ಷಾಮವಲ್ಲ, ನೀರಿನ ದಾಹದ ಬರವಲ್ಲ. ಯೆಹೋವ ದೇವರ ವಾಕ್ಯಗಳನ್ನು ಕೇಳಬೇಕೆಂಬ ಕ್ಷಾಮವನ್ನೇ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ.
12ಆಗ ಅವರು ಸಮುದ್ರದಿಂದ ಸಮುದ್ರಕ್ಕೂ, ಉತ್ತರದಿಂದ ಪೂರ್ವಕ್ಕೂ ಅಲೆದು ಯೆಹೋವ ದೇವರ ವಾಕ್ಯವನ್ನು ಹುಡುಕುವುದಕ್ಕೆ ಅತ್ತಿತ್ತ ಓಡಾಡಿ, ಅದನ್ನು ಕಾಣದೆ ಹೋಗುವರು.
13“ಆ ದಿನದಲ್ಲಿ, “ಸೌಂದರ್ಯವತಿಯರಾದ ಕನ್ಯೆಯರು ಮತ್ತು ಯೌವನಸ್ಥರು ಸಹ ದಾಹದಿಂದ ಕುಗ್ಗಿ ಹೋಗುವರು.
14ಅವರು ಸಮಾರ್ಯದ ಪಾಪದ ಮೇಲೆ ಆಣೆ ಇಟ್ಟುಕೊಂಡು, ದಾನೇ, ನಿನ್ನ ದೇವರ ಜೀವದಾಣೆ ಎಂದೂ, ಬೇರ್ಷೆಬದ ಮಾರ್ಗದ ಜೀವದಾಣೆ ಎಂದೂ ಹೇಳುವರು. ಅವರು ಬಿದ್ದು ಮತ್ತೆ ಮೇಲೆ ಏಳಲಾರರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.