A watchman sounds a ram's horn above Samaria as two travelers approach and a lion roars before the city's luxurious houses

ಆಮೋಸ 3

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಇಸ್ರಾಯೇಲಿನ ಅನನ್ಯ ವಿಮೋಚನೆ ಮತ್ತು ಒಡಂಬಡಿಕೆಯ ಸಂಬಂಧವು ವಿಶೇಷ ಹೊಣೆಗಾರಿಕೆಯನ್ನು ತರುತ್ತದೆ. ಸರಣಿ ಪ್ರಶ್ನೆಗಳ ಮೂಲಕ, ವಿಪತ್ತಿಗೂ ಪ್ರವಾದನಾ ಎಚ್ಚರಿಕೆಗೂ ಕಾರಣಗಳಿವೆ ಎಂದು ಆಮೋಸನು ಒತ್ತಿಹೇಳುತ್ತಾನೆ: ಕರ್ತನು ಮಾತನಾಡಿದಾಗ ಪ್ರವಾದಿಯು ಉತ್ತರಿಸಬೇಕು. ಸಮಾರ್ಯದ ಯಜ್ಞವೇದಿಗಳೂ ಐಷಾರಾಮಿ ಮನೆಗಳೂ ಬೀಳುವ ಮೊದಲು ಅದರ ಅಸ್ತವ್ಯಸ್ತತೆಯನ್ನು ನೋಡಲು ಅನ್ಯ ಸಾಕ್ಷಿಗಳನ್ನು ಕರೆಯಲಾಗುತ್ತದೆ.
ಒಡಂಬಡಿಕೆಯ ಹೊಣೆಪ್ರವಾದನಾ ಎಚ್ಚರಿಕೆಸಮಾರ್ಯನ್ಯಾಯತೀರ್ಪು
1ಇಸ್ರಾಯೇಲರೇ, ಯೆಹೋವ ದೇವರು ನಿಮಗೆ ವಿರೋಧವಾಗಿ ಹೇಳುವ ವಾಕ್ಯವನ್ನು ಕೇಳಿರಿ. ನಾನು ಈಜಿಪ್ಟ್ ದೇಶದೊಳಗಿಂದ ಕರೆದುತಂದ ಸಮಸ್ತ ಕುಟುಂಬಕ್ಕೆ ಹೇಳುವುದೇನೆಂದರೆ:
2“ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ಆರಿಸಿಕೊಂಡಿದ್ದೇನೆ. ಆದ್ದರಿಂದ ನಾನು ನಿಮ್ಮ ಎಲ್ಲಾ ಪಾಪಗಳಿಗಾಗಿ ಶಿಕ್ಷಿಸುತ್ತೇನೆ.”
3ಒಪ್ಪಂದ ಮಾಡಿಕೊಳ್ಳದ ಹೊರತು, ಇಬ್ಬರು ಜೊತೆಯಾಗಿ ನಡೆಯಲು ಸಾಧ್ಯವೋ?
4ಬೇಟೆ ಇಲ್ಲದಿದ್ದರೆ, ಅಡವಿಯಲ್ಲಿ ಸಿಂಹವು ಗರ್ಜಿಸುವುದೋ? ಏನಾದರೂ ಹಿಡಿಯದಿದ್ದರೆ, ಗುಹೆಯಲ್ಲಿರುವ ಎಳೆಯ ಸಿಂಹವು ಅರಚುವುದೋ?
5ಬೋನು ಇಲ್ಲದಿದ್ದರೆ ಪಕ್ಷಿಯು ಭೂಮಿಯ ಮೇಲೆ ಉರುಲಿನಲ್ಲಿ ಬೀಳುವುದೇ? ಏನೂ ಸಿಕ್ಕಿಕೊಳ್ಳದಿದ್ದರೆ, ಅದನ್ನು ಭೂಮಿಯಿಂದ ಯಾರಾದರೂ ತೆಗೆಯುವರೇ?
6ಪಟ್ಟಣದಲ್ಲಿ ಕಹಳೆಯನ್ನು ಊದಿದರೆ, ಜನರು ಹೆದರುವುದಿಲ್ಲವೇ? ಯೆಹೋವ ದೇವರಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೇ?
7ನಿಶ್ಚಯವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಯೋಜನೆಗಳನ್ನು ತಿಳಿಸದೆ, ಸಾರ್ವಭೌಮ ಯೆಹೋವ ದೇವರು ಏನನ್ನೂ ಮಾಡುವುದಿಲ್ಲ.
8ಸಿಂಹವು ಗರ್ಜಿಸಿದರೆ ಭಯಪಡದೆ ಇರುವವರು ಯಾರು? ಸಾರ್ವಭೌಮ ಯೆಹೋವ ದೇವರು ನುಡಿದಿದ್ದಾರೆ, ಅವರ ನುಡಿಯನ್ನು ಪ್ರವಾದಿಸದವರು ಯಾರು?
9ಅಷ್ಡೋದಿನ ಕೋಟೆಗಳಲ್ಲಿ ಮತ್ತು ಈಜಿಪ್ಟ್ ದೇಶದ ಕೋಟೆಗಳಲ್ಲಿ ಹೀಗೆ ಸಾರಿ ಹೇಳಿರಿ: “ಸಮಾರ್ಯ ಬೆಟ್ಟಗಳ ಮೇಲೆ ನೀವೆಲ್ಲರೂ ಕೂಡಿಕೊಂಡು, ಅದರ ಮಧ್ಯದಲ್ಲಿರುವ ದೊಡ್ಡ ಗದ್ದಲವನ್ನೂ ಅದರೊಳಗಿರುವ ಹೆಚ್ಚಾದ ಹಿಂಸೆಯನ್ನೂ ನೋಡಿರಿ.”
10“ತಮ್ಮ ಕೋಟೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ ನಿಕ್ಷೇಪವಾಗಿ ಕೂಡಿಸಿಕೊಂಡಿರುವವರಿಗೆ, ನ್ಯಾಯ ನೀತಿಯನ್ನು ಮಾಡುವುದಕ್ಕೆ ತಿಳಿಯುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
11ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ವಿರೋಧಿಯು ದೇಶದ ಸುತ್ತಲೂ ಇರುವನು. ನಿನ್ನ ಬಲವನ್ನು ತಗ್ಗಿಸುವನು. ನಿನ್ನ ಅರಮನೆಗಳು ಸೂರೆಯಾಗುವುವು.”
12ಯೆಹೋವ ದೇವರು ಹೀಗೆ ಹೇಳುತ್ತಾರೆ: “ಹೇಗೆ ಕುರುಬನು ಸಿಂಹದ ಬಾಯಿಯಿಂದ ಎರಡು ಕಾಲಿನ ಎಲಬುಗಳನ್ನು ಅಥವಾ ಕಿವಿಯ ಒಂದು ತುಂಡನ್ನು ರಕ್ಷಿಸಲು ಪ್ರಯತ್ನಿಸುತ್ತಾನೋ ಹಾಗೆಯೇ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲರು ಹಾಸಿಗೆಯ ತಲೆ ಮತ್ತು ಮಂಚದ ಬಟ್ಟೆಯ ತುಂಡುಗಳೊಂದಿಗೆ ಸಂರಕ್ಷಣೆ ಹೊಂದುತ್ತಾರೆ.”
13ಸರ್ವಶಕ್ತ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ: “ನೀವು ಕೇಳಿ, ಯಾಕೋಬಿನ ಮನೆತನದವರಿಗೆ ವಿರುದ್ಧವಾಗಿ ಸಾಕ್ಷಿ ಕೊಡಿರಿ.”
14“ನಾನು ಇಸ್ರಾಯೇಲಿನ ಪಾಪಗಳನ್ನು ವಿಚಾರಿಸುವ ದಿವಸದಲ್ಲಿ, ಬೇತೇಲಿನ ಬಲಿಪೀಠಗಳನ್ನು ನಾಶಮಾಡುವೆನು. ಬಲಿಪೀಠದ ಕೊಂಬುಗಳು ಕಡಿಯಲಾಗಿ, ನೆಲಕ್ಕೆ ಉರುಳುವುವು.
15ಚಳಿಗಾಲದ ಮನೆಯನ್ನು ಬೇಸಿಗೆಯ ಮನೆಯ ಸಂಗಡ ಹೊಡೆದು ಹಾಕುವೆನು. ಆಗ ದಂತ ಮಂದಿರಗಳು ನಾಶವಾಗುವುವು. ದೊಡ್ಡ ಮನೆಗಳು ಕೊನೆಗಾಣುವುವು,” ಎಂದು ಯೆಹೋವ ದೇವರು ಹೇಳುತ್ತಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.