
2 ಕೊರಿಂಥದವರಿಗೆ 13
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಮೂರನೆಯ ಭೇಟಿಗೆ ಸಿದ್ಧನಾಗುತ್ತಾ, ನಿರಂತರ ಅಪರಾಧವನ್ನು ಸಂಬೋಧಿಸಲಾಗುವುದೆಂದು ಪೌಲನು ಎಚ್ಚರಿಸಿ ತಾವು ನಂಬಿಕೆಯಲ್ಲಿ ಬದುಕುತ್ತಿದ್ದೇವೆಯೇ ಎಂದು ಪರೀಕ್ಷಿಸಿಕೊಳ್ಳುವಂತೆ ವಿಶ್ವಾಸಿಗಳನ್ನು ಒತ್ತಾಯಿಸುತ್ತಾನೆ. ಅವನ ಅಧಿಕಾರವು ಪುನಃಸ್ಥಾಪನೆಯನ್ನು ಬಯಸುತ್ತದೆ, ಐಕ್ಯತೆ, ಶಾಂತಿ ಮತ್ತು ಕೃಪೆಯ ಮೊರೆಯೊಂದಿಗೆ ಮುಕ್ತಾಯಗೊಳಿಸುತ್ತಾನೆ.
ಆತ್ಮಪರೀಕ್ಷೆಸತ್ಯಪುನಃಸ್ಥಾಪನೆಶಾಂತಿ
1ನಾನು ನಿಮ್ಮ ಬಳಿಗೆ ಬರುವುದು ಇದು ಮೂರನೆಯ ಸಾರಿ. “ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು,” ಎಂದು ಬರೆಯಲಾಗಿದೆ.
2ನಾನು ಎರಡನೆಯ ಸಾರಿ ನಿಮ್ಮ ಬಳಿಗೆ ಬಂದಿದ್ದಾಗ, ಗತಕಾಲದಲ್ಲಿ ಪಾಪ ಮಾಡುತ್ತಿದ್ದವರನ್ನು ಎಚ್ಚರಿಸಿದೆನು. ನಾನು ತಿರುಗಿ ಬಂದರೆ, ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ ದೂರದಲ್ಲಿದ್ದುಕೊಂಡು ಹೇಳುತ್ತಿದ್ದೇನೆ.
3ಕ್ರಿಸ್ತ ಯೇಸು ನನ್ನ ಮೂಲಕ ಮಾತನಾಡುತ್ತಾನೆಂಬುದಕ್ಕೆ ನಿಮಗೆ ಬೇಕಾದ ನಿದರ್ಶನವು ಆಗ ತೋರಿಬರುವುದು. ಬಲಹೀನನಾಗಿ ಕ್ರಿಸ್ತನು ನಿಮ್ಮೊಂದಿಗೆ ವ್ಯವಹರಿಸದೆ, ನಿಮ್ಮ ನಡುವೆ ಶಕ್ತನಾಗಿದ್ದಾನೆ.
4ಕ್ರಿಸ್ತ ಯೇಸು ಬಲಹೀನತೆಯಲ್ಲಿ ಶಿಲುಬೆಗೆ ಹಾಕಲಾದರು ನಿಜ. ಆದರೆ ಅವರು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾರೆ. ನಾವು ಸಹ ಬಲಹೀನತೆಯುಳ್ಳವರಾಗಿದ್ದೇವೆ. ಆದರೆ ನಾವು ನಿಮ್ಮ ಸೇವೆ ಮಾಡುವಂತೆ, ನಾವು ಕ್ರಿಸ್ತ ಯೇಸುವಿನೊಂದಿಗೆ ದೇವರ ಶಕ್ತಿಯಿಂದ ಬದುಕುತ್ತಿದ್ದೇವೆ.
5ನಂಬಿಕೆಯಲ್ಲಿ ಇದ್ದೀರೋ, ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಕ್ರಿಸ್ತ ಯೇಸು ನಿಮ್ಮಲ್ಲಿದ್ದಾರೆಂಬುದರ ಬಗ್ಗೆ ನಿಮಗೆ ನಂಬಿಕೆಯಿಲ್ಲವೋ? ಅವರು ನಿಮ್ಮಲ್ಲಿಲ್ಲದಿದ್ದರೆ, ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲ.
6ನಾವಂತೂ ಉತ್ತೀರ್ಣರಾದವರೆಂದು ನಿಮಗೆ ಗೊತ್ತಾಗುವುದೆಂದು ನಾನು ನಿರೀಕ್ಷಿಸುತ್ತೇನೆ.
7ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಉತ್ತೀರ್ಣರಾದವರು ಎಂದು ಕಂಡುಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಸೋತವರಾಗಿ ಕಂಡುಬಂದರೂ ನೀವು ಒಳ್ಳೆಯದನ್ನೇ ಮಾಡಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ.
8ಸತ್ಯಕ್ಕೆ ವಿರುದ್ಧವಾಗಿ ನಾವೇನೂ ಮಾಡಲಾರೆವು. ಸತ್ಯದ ಪರವಾಗಿಯೇ ಎಲ್ಲವನ್ನೂ ಮಾಡುತ್ತೇವೆ.
9ನಾವು ಬಲಹೀನರಾಗಿದ್ದರೂ, ನೀವು ಬಲಿಷ್ಠರಾಗಿದ್ದಿರೆಂದು ತಿಳಿದು ಆನಂದಪಡುತ್ತೇವೆ. ನೀವು ಪರಿಪೂರ್ಣರಾಗಬೇಕೆಂದೇ ನಾವು ಪ್ರಾರ್ಥಿಸುತ್ತೇವೆ.
10ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ, ಈ ಮಾತುಗಳನ್ನು ಬರೆದಿದ್ದೇನೆ. ನಾನು ಬಂದಾಗ ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ ಆದರೆ ಕಟ್ಟುವುದಕ್ಕಾಗಿ ಕರ್ತ ಯೇಸು ನನಗೆ ಕೊಟ್ಟಿರುವ ಅಧಿಕಾರದಿಂದ ನಿಮಗೆ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಅಪೇಕ್ಷಿಸುತ್ತೇನೆ.
11ಪ್ರಿಯರೇ, ಕಡೆಯ ಮಾತೇನೆಂದರೆ, ಆನಂದಪಡಿರಿ! ನಿಮ್ಮನ್ನು ಪೂರ್ಣ ಪುನಃಸ್ಥಾಪನೆಗಾಗಿ ಕ್ರಮಪಡಿಸಿಕೊಳ್ಳಿರಿ, ಉತ್ತೇಜನಗೊಳ್ಳಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ. ಆಗ ಪ್ರೀತಿ ಹಾಗೂ ಶಾಂತಿಯ ದೇವರು ನಿಮ್ಮ ಸಂಗಡ ಇರುವರು.
12ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
13ದೇವಜನರೆಲ್ಲರೂ ನಿಮಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.
14ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮ ದೇವರ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡ ಇರಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.