
1 ತಿಮೊಥೆಯನಿಗೆ 2
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಜನರು ಶಾಂತಿಯುತ ಮತ್ತು ಗೌರವಯುತ ಜೀವನ ನಡೆಸುವಂತೆ, ಅಧಿಕಾರಿಗಳು ಸೇರಿದಂತೆ ಎಲ್ಲರಿಗಾಗಿ ವಿಜ್ಞಾಪನೆ ಮತ್ತು ಕೃತಜ್ಞತೆಯನ್ನು ಸಲ್ಲಿಸುವಂತೆ ಪೌಲನು ಪ್ರೇರೇಪಿಸುತ್ತಾನೆ. ಆರಾಧನಾ ಸಮುದಾಯದೊಳಗೆ ಪ್ರಾರ್ಥನೆ, ನಡತೆ, ಸಭ್ಯತೆ, ಕಲಿಕೆ ಮತ್ತು ಬೋಧನೆಗೆ ಸೂಚನೆಗಳನ್ನು ನೀಡುತ್ತಾನೆ.
ಎಲ್ಲರಿಗಾಗಿ ಪ್ರಾರ್ಥನೆಶಾಂತಿಯುತ ಜೀವನಆರಾಧನೆಗೌರವ
1ಎಲ್ಲದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರವೂ ಅರಸರುಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಬಿನ್ನಹಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಪ್ರಬೋಧಿಸುತ್ತೇನೆ.
2ಹೀಗೆ ಮಾಡಿದರೆ ನಾವು ನೆಮ್ಮದಿ ಹಾಗೂ ಸಮಾಧಾನಗಳಿಂದ ಕೂಡಿದ ಜೀವನವನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ನಡೆಸುವುದಕ್ಕಾಗುವುದು.
3ಏಕೆಂದರೆ ಇದು ನಮ್ಮ ರಕ್ಷಕರಾದ ದೇವರ ಮುಂದೆ ಒಳ್ಳೆಯದಾಗಿಯೂ ಅಂಗೀಕರಿಸತಕ್ಕದ್ದಾಗಿಯೂ ಇದೆ.
4ಎಲ್ಲಾ ಮನುಷ್ಯರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಬರಬೇಕೆಂಬುದು ದೇವರ ಚಿತ್ತವಾಗಿದೆ.
5ದೇವರು ಒಬ್ಬರೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥ ಒಬ್ಬರೇ. ಅವರು ಮನುಷ್ಯರಾಗಿ ಬಂದ ಕ್ರಿಸ್ತ ಯೇಸುವೇ.
6ಯೇಸು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು. ಇದೇ ಸೂಕ್ತ ಸಮಯದಲ್ಲಿ ನೀಡಬೇಕಾದ ಸಾಕ್ಷಿಯಾಗಿದೆ.
7ಇದಕ್ಕಾಗಿಯೇ ಸಂದೇಶ ಸಾರುವವನೂ ಅಪೊಸ್ತಲನೂ ಆಗಿರುವ ನಾನು ಯೆಹೂದ್ಯರಲ್ಲದವರಿಗೆ ನಂಬಿಗಸ್ತನಾದ ಸತ್ಯ ಬೋಧಕನಾಗಿ ನೇಮಕವಾದೆನು. ಇದು ಸುಳ್ಳಲ್ಲ, ಸತ್ಯವನ್ನೇ ಹೇಳುತ್ತೇನೆ.
8ಆದ್ದರಿಂದ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ಸಂದೇಹವೂ ಇಲ್ಲದೆ ಶುದ್ಧವಾದ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ನಾನು ಅಪೇಕ್ಷಿಸುತ್ತೇನೆ.
9ಹಾಗೆಯೇ ಸ್ತ್ರೀಯರು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು ಗೌರವಕ್ಕೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ, ಚಿನ್ನ, ಮುತ್ತುಗಳು, ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ,
10ದೇವ ಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ತಕ್ಕಂತೆ ಸತ್ಕ್ರಿಯೆಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕು.
11ಸ್ತ್ರೀಯು ಮೌನವಾಗಿದ್ದು ಎಲ್ಲಾ ಅಧೀನತೆಯನ್ನು ಕಲಿಯಬೇಕು.
12ಆದರೆ ಉಪದೇಶ ಮಾಡುವುದಕ್ಕಾಗಲಿ, ಪುರುಷನ ಮೇಲೆ ಅಧಿಕಾರ ನಡೆಸುವುದಕ್ಕಾಗಲಿ ಸ್ತ್ರೀಗೆ ನಾನು ಅಪ್ಪಣೆ ಕೊಡುವುದಿಲ್ಲ. ಆಕೆಯು ಮೌನವಾಗಿರಬೇಕು.
13ಏಕೆಂದರೆ ಮೊದಲು ನಿರ್ಮಿತನಾದವನು ಆದಾಮನು, ಆಮೇಲೆ ಹವ್ವಳು.
14ಆದಾಮನು ವಂಚನೆಗೊಳಗಾಗಲಿಲ್ಲ, ಸ್ತ್ರೀಯು ವಂಚನೆಗೊಳಗಾಗಿ ಅಪರಾಧಿಯಾದಳು.
15ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆ, ಪ್ರೀತಿ ಹಾಗೂ ಪರಿಶುದ್ಧತೆಯಲ್ಲಿ ನೆಲೆಗೊಂಡಿದ್ದರೆ ಅವರು ಮಗುವನ್ನು ಹೆರುವುದರ ಮೂಲಕ ರಕ್ಷಣೆಹೊಂದುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.