King Saul seated in grief among fallen warriors on Mount Gilboa at dusk

1 ಸಮುಯೇಲ 31

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಫಿಲಿಷ್ಟಿಯರು ಗಿಲ್ಬೋವ ಬೆಟ್ಟದ ಮೇಲೆ ಇಸ್ರಾಯೇಲರನ್ನು ಸೋಲಿಸುತ್ತಾರೆ. ಯೋನಾತಾನನು ಮತ್ತು ಅವನ ಸಹೋದರರು ಬೀಳುತ್ತಾರೆ, ಸೌಲನು ಮಾರಣಾಂತಿಕವಾಗಿ ಗಾಯಗೊಂಡು, ಅವನ ಆಳ್ವಿಕೆಯು ದುರಂತದಲ್ಲಿ ಕೊನೆಗೊಳ್ಳುತ್ತದೆ. ಶತ್ರುಗಳು ದೇಹಗಳನ್ನು ಅಗೌರವಿಸುತ್ತಾರೆ, ಆದರೆ ಯಾಬೇಷ್-ಗಿಲ್ಯಾದಿನ ಧೈರ್ಯಶಾಲಿ ಪುರುಷರು ಅವುಗಳನ್ನು ಮರಳಿ ಪಡೆದು ಏಳು ದಿನ ಶೋಕಿಸುತ್ತಾರೆ.
ಸೋಲುಮರಣನಿಷ್ಠೆದುರಂತ
1ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಮಾಡಿದರು. ಆಗ ಇಸ್ರಾಯೇಲರು ಫಿಲಿಷ್ಟಿಯರಿಂದ ಸೋತು ಓಡಿಹೋಗಿ, ಗಿಲ್ಬೋವ ಬೆಟ್ಟದಲ್ಲಿ ಹತರಾದರು.
2ಫಿಲಿಷ್ಟಿಯರು ಸೌಲನನ್ನೂ, ಅವನ ಪುತ್ರರನ್ನೂ ಬಿಡದೆ ಬೆನ್ನಟ್ಟಿ, ಸೌಲನ ಪುತ್ರರಾದ ಯೋನಾತಾನನನ್ನೂ, ಅಬೀನಾದಾಬನನ್ನೂ, ಮಲ್ಕೀಷೂವನನ್ನೂ ಕೊಂದುಬಿಟ್ಟರು.
3ಇದಲ್ಲದೆ ಯುದ್ಧವು ಸೌಲನಿದ್ದ ಕಡೆಯಲ್ಲಿ ಬಹುಘೋರವಾಗಿತ್ತು. ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದಾಗ ಅವನು ತೀವ್ರವಾಗಿ ಗಾಯಗೊಂಡನು.
4ಆದಕಾರಣ ಅವನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ ನೀನು ನಿನ್ನ ಖಡ್ಗವನ್ನು ಹಿರಿದು, ನನ್ನನ್ನು ತಿವಿ,” ಎಂದನು. ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.
5ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹೊರುವವನು ಕಂಡಾಗ, ಅವನೂ ತನ್ನ ಖಡ್ಗದ ಮೇಲೆ ಬಿದ್ದು, ಅವನ ಸಂಗಡ ಸತ್ತನು.
6ಹೀಗೆ ಸೌಲನೂ, ಅವನ ಮೂರು ಮಂದಿ ಪುತ್ರರೂ, ಅವನ ಆಯುಧ ಹೊರುವವನೂ, ಅವನ ಸಮಸ್ತ ಜನರೂ ಅದೇ ದಿನ ಸತ್ತರು.
7ಇಸ್ರಾಯೇಲರ ಸೈನಿಕರು ಸೋತು ಹೋದರೆಂದೂ, ಸೌಲನೂ, ಅವನ ಪುತ್ರರೂ ಸತ್ತರೆಂದೂ, ತಗ್ಗಿನ ಆಚೆಯಲ್ಲಿಯೂ ಯೊರ್ದನಿನ ಆಚೆಯಲ್ಲಿಯೂ ವಾಸವಾಗಿದ್ದ ಇಸ್ರಾಯೇಲರು ಕಂಡಾಗ, ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
8ಮಾರನೆಯ ದಿವಸದಲ್ಲಿ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳಲು ಬಂದಾಗ, ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವ ಸೌಲನನ್ನೂ, ಅವನ ಮೂವರು ಪುತ್ರರನ್ನೂ ಕಂಡರು.
9ಅವರು ಅವನ ತಲೆಯನ್ನು ಕಡಿದು, ಅವನ ಆಯುಧಗಳನ್ನು ತೆಗೆದುಕೊಂಡು, ತಮ್ಮ ವಿಗ್ರಹಗಳ ಮಂದಿರಗಳಿಗೂ, ಜನರಿಗೂ ಜಯವಾರ್ತೆಯನ್ನು ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿಸಿದರು.
10ಸೌಲನ ಆಯುಧಗಳನ್ನು ಅಷ್ಟೋರೆತ್ ಮಂದಿರದಲ್ಲಿ ಇಟ್ಟು, ಅವನ ಶವವನ್ನು ಬೇತ್ ಷೆಯಾನಿನ ಕೋಟೆಯ ಗೋಡೆಗೆ ನೇತುಹಾಕಿದರು.
11ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ,
12ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು, ರಾತ್ರಿಯೆಲ್ಲಾ ನಡೆದುಹೋಗಿ, ಬೇತ್ ಷೆಯಾನಿನ ಗೋಡೆಗೆ ಜಡಿದಿದ್ದ ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವುಗಳನ್ನು ಅಲ್ಲಿ ದಹಿಸಿದರು.
13ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.

Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.