
1 ಸಮುಯೇಲ 3
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅಧ್ಯಾಯ ಸಾರಾಂಶ
ಸಮುಯೇಲನು ರಾತ್ರಿ ಪದೇ ಪದೇ ತನ್ನ ಹೆಸರನ್ನು ಕೇಳಿ, ದೇವರಿಗೆ ಉತ್ತರಿಸಲು ಏಲಿಯಿಂದ ಕಲಿಯುತ್ತಾನೆ. ಸಂದೇಶವು ಏಲಿಯ ಕುಟುಂಬದ ಮೇಲಿನ ನ್ಯಾಯತೀರ್ಪನ್ನು ದೃಢಪಡಿಸುತ್ತದೆ. ಭಯಪಟ್ಟರೂ, ಸಮುಯೇಲನು ಎಲ್ಲವನ್ನೂ ಪ್ರಾಮಾಣಿಕವಾಗಿ ತಿಳಿಸಿ ಇಸ್ರಾಯೇಲಿನಾದ್ಯಂತ ನಂಬಿಕೆಗೆ ಅರ್ಹ ಪ್ರವಾದಿಯಾಗಿ ಗುರುತಿಸಲ್ಪಡುತ್ತಾನೆ.
ಕರೆಕೇಳುವಿಕೆಸತ್ಯಪ್ರವಾದನೆ
1ಬಾಲಕನಾದ ಸಮುಯೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವ ದೇವರಿಗೆ ಸೇವೆ ಮಾಡಿಕೊಂಡಿದ್ದನು. ಆ ದಿನಗಳಲ್ಲಿ ಯೆಹೋವ ದೇವರ ವಾಕ್ಯವು ವಿರಳವಾಗಿತ್ತು. ಅಲ್ಲಿ ದೇವದರ್ಶನಗಳು ಅಪರೂಪವಾಗಿದ್ದವು.
2ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. ನೋಡುವುದಕ್ಕಾಗದಂತೆ ಅವನ ಕಣ್ಣುಗಳು ಮಬ್ಬಾಗುತ್ತಿದ್ದವು.
3ದೇವರ ಮಂಜೂಷವಿರುವ ಯೆಹೋವ ದೇವರ ಮಂದಿರದಲ್ಲಿ ದೇವರ ದೀಪವು ಆರಿಹೋಗುವುದಕ್ಕಿಂತ ಮುಂಚೆ ಸಮುಯೇಲನು ಮಲಗಿದ್ದನು.
4ಆಗ ಯೆಹೋವ ದೇವರು ಸಮುಯೇಲನನ್ನು ಕರೆದರು. ಅದಕ್ಕವನು, “ಇಗೋ, ನಾನು ಇಲ್ಲಿದ್ದೇನೆ,” ಎಂದು ಹೇಳಿ,
5ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನಾನು ನಿನ್ನನ್ನು ಕರೆಯಲಿಲ್ಲ, ತಿರುಗಿ ಹೋಗಿ ಮಲಗಿಕೋ,” ಎಂದನು. ಸಮುವೇಲನು ಹೋಗಿ ಮಲಗಿದನು.
6ಯೆಹೋವ ದೇವರು, “ಸಮುಯೇಲನೇ,” ಎಂದು ಅವನನ್ನು ತಿರುಗಿ ಕರೆದರು. ಆಗ ಸಮುಯೇಲನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ; ನನ್ನನ್ನು ಕರೆದೆಯಲ್ಲಾ,” ಎಂದನು. ಅದಕ್ಕವನು, “ನನ್ನ ಮಗನೇ, ನಾನು ಕರೆಯಲಿಲ್ಲ; ನೀನು ಹೋಗಿ ಮಲಗಿಕೋ,” ಎಂದನು.
7ಸಮುಯೇಲನು ಆವರೆಗೂ ಯೆಹೋವ ದೇವರನ್ನು ತಿಳಿದುಕೊಂಡಿರಲಿಲ್ಲ. ಯೆಹೋವ ದೇವರ ವಾಕ್ಯವು ಅವನಿಗೆ ಪ್ರಕಟವಾಗಿರಲೂ ಇಲ್ಲ.
8ಯೆಹೋವ ದೇವರು ಮತ್ತೆ ಮೂರನೆಯ ಸಾರಿ, “ಸಮುಯೇಲನೇ,” ಎಂದು ಕರೆದರು. ಅವನು ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಇದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ,” ಎಂದನು. ಆಗ ಏಲಿಯು, ಯೆಹೋವ ದೇವರು ಹುಡುಗನನ್ನು ಕರೆದರೆಂದು ಗ್ರಹಿಸಿಕೊಂಡನು.
9ಏಲಿಯು ಸಮುಯೇಲನಿಗೆ, “ನೀನು ಹೋಗಿ ಮಲಗು; ಅವರು ನಿನ್ನನ್ನು ಕರೆದರೆ, ಆಗ ನೀನು, ‘ಯೆಹೋವ ದೇವರೇ, ಮಾತನಾಡಿ, ನಿಮ್ಮ ದಾಸನು ಕೇಳುತ್ತಾನೆ,’ ಎಂದು ಹೇಳು,” ಎಂದನು. ಹಾಗೆಯೇ ಸಮುಯೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು.
10ಆಗ ಯೆಹೋವ ದೇವರು ಬಂದು ನಿಂತು ಮೊದಲಿನ ಹಾಗೆಯೇ, “ಸಮುಯೇಲನೇ, ಸಮುಯೇಲನೇ,” ಎಂದು ಕರೆದರು. ಅದಕ್ಕೆ ಸಮುಯೇಲನು, “ಯೆಹೋವ ದೇವರೇ ಮಾತನಾಡಿ; ನಿಮ್ಮ ದಾಸನು ಕೇಳುತ್ತಾನೆ,” ಎಂದನು.
11ಆಗ ಯೆಹೋವ ದೇವರು ಸಮುಯೇಲನಿಗೆ, “ನಾನು ಇಸ್ರಾಯೇಲಿನಲ್ಲಿ ಒಂದು ಕಾರ್ಯವನ್ನು ಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳೂ ಕಂಪಿಸುವುವು.
12ಏಕೆಂದರೆ ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ. ನಾನು ಆರಂಭಿಸಿದ ಹಾಗೆ ಅಂತ್ಯವನ್ನು ಮಾಡುವೆನು.
13ನಾನು ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯತೀರಿಸುವೆನು, ಎಂದು ಹೇಳಿದ್ದೆನು. ಏಕೆಂದರೆ ತನ್ನ ಪುತ್ರರು ದೇವರ ನಿಂದನೆ ಮಾಡಿದಾಗ, ಅವರನ್ನು ಹತೋಟಿಗೆ ತರಲಿಲ್ಲ.
14ಆದ್ದರಿಂದ ‘ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿಯಿಂದಲಾದರೂ, ಅರ್ಪಣೆಯಿಂದಲಾದರೂ ಪ್ರಾಯಶ್ಚಿತ್ತವಾಗುವದಿಲ್ಲ, ಎಂದು ನಾನು ಏಲಿಯ ಮನೆಯನ್ನು ಕುರಿತು ಪ್ರಮಾಣಮಾಡಿದೆನು,’ ” ಎಂದರು.
15ಸಮುಯೇಲನು ಉದಯದವರೆಗೂ ಮಲಗಿದ್ದು, ಯೆಹೋವ ದೇವರ ಮನೆಯ ಬಾಗಿಲುಗಳನ್ನು ತೆರೆದನು. ಆದರೆ ಸಮುಯೇಲನು ದರ್ಶನವನ್ನು ಏಲಿಗೆ ತಿಳಿಸಲು ಭಯಪಟ್ಟನು.
16ಆಗ ಏಲಿಯು ಸಮುಯೇಲನನ್ನು ಕರೆದು ಅವನಿಗೆ, “ನನ್ನ ಮಗನಾದ ಸಮುಯೇಲನೇ,” ಎಂದನು. ಅದಕ್ಕವನು, “ಇಗೋ, ಇದ್ದೇನೆ,” ಎಂದನು.
17ಏಲಿಯು ಅವನಿಗೆ, “ಅವರು ನಿನಗೆ ಹೇಳಿದ ಮಾತೇನು? ನನಗೆ ಅದನ್ನು ಮರೆಮಾಡಬೇಡ. ಅವರು ನಿನಗೆ ಹೇಳಿದ ಸಕಲ ವಾರ್ತೆಗಳಲ್ಲಿ ನೀನು ಯಾವುದನ್ನಾದರೂ ನನಗೆ ಮರೆಮಾಡಿದರೆ, ದೇವರು ನಿನ್ನನ್ನು ದಂಡಿಸಲಿ,” ಎಂದನು.
18ಹಾಗೆಯೇ ಸಮುಯೇಲನು ಅವನಿಗೆ ಒಂದನ್ನೂ ಮರೆಮಾಡದೆ, ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿದನು. ಅದಕ್ಕವನು, “ಅವರು ಯೆಹೋವ ದೇವರು. ಅವರಿಗೆ ಸರಿತೋರುವುದನ್ನು ಮಾಡಲಿ,” ಎಂದನು.
19ಸಮುಯೇಲನು ಬೆಳೆಯುತ್ತಾ ಬಂದನು. ಯೆಹೋವ ದೇವರು ಅವನ ಸಂಗಡ ಇದ್ದು, ಅವರ ವಾಕ್ಯಗಳಲ್ಲಿ ಒಂದಾದರೂ ಬಿದ್ದು ಹೋಗಗೊಡಿಸಲಿಲ್ಲ.
20ಆಗ ಸಮುಯೇಲನು ಯೆಹೋವ ದೇವರ ಪ್ರವಾದಿಯಾಗಿ ದೃಢಪಟ್ಟನೆಂದು ದಾನ್ ಊರು ಮೊದಲ್ಗೊಂಡು ಬೇರ್ಷೆಬದವರೆಗೂ ಇದ್ದ ಇಸ್ರಾಯೇಲರೆಲ್ಲರು ತಿಳಿದಿದ್ದರು.
21ಯೆಹೋವ ದೇವರು ತಿರುಗಿ ಶೀಲೋವಿನಲ್ಲಿ ಕಾಣಿಸಿಕೊಂಡರು. ಏಕೆಂದರೆ ಶೀಲೋವಿನಲ್ಲಿ ಯೆಹೋವ ದೇವರು ವಾಕ್ಯದ ಮೂಲಕ ಸಮುಯೇಲನಿಗೆ ಪ್ರಕಟಿಸಿಕೊಂಡರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ — CC BY-SA 4.0. Where these translations come from.
Copyright © 1999, 2020, 2022 by Biblica, Inc. Available free at biblica.com and open.bible. Text unchanged, used under CC BY-SA 4.0.